ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಧಿಡೀರ್‌ ಆಸ್ಪತ್ರೆಗೆ ದಾಖಲು; ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

Sharad Pawar hospitalized: ಎನ್‌ಸಿಪಿ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಶರದ್ ಪವಾರ್ (85) ಅವರು ಗಂಟಲು ನೋವು ಮತ್ತು ನಿರಂತರ ಕೆಮ್ಮಿಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದು, ಮಹಾರಾಷ್ಟ್ರದ ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾರಾಮತಿಯಲ್ಲಿರುವ ಅವರ ನಿವಾಸದಿಂದ ಪುಣೆಗೆ ಕರೆದೊಯ್ಯಲಾಗಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (ಸಂಗ್ರಹ ಚಿತ್ರ)

ಪುಣೆ, ಫೆ.9: ಗಂಟಲು ನೋವು ಮತ್ತು ಕೆಮ್ಮಿಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿರುವ ಎನ್‌ಸಿಪಿ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಶರದ್ ಪವಾರ್ (85) ಅವರನ್ನು ಮಹಾರಾಷ್ಟ್ರದ ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿದೆ (Sharad Pawar hospitalized). ಸೋಮವಾರ ಮಧ್ಯಾಹ್ನ ಅವರನ್ನು ಬಾರಾಮತಿಯಲ್ಲಿರುವ (Baramati) ಅವರ ನಿವಾಸದಿಂದ ಕರೆದೊಯ್ಯಲಾಯಿತು.

ಪವಾರ್ ಅವರಿಗೆ ನಿನ್ನೆ (ಭಾನುವಾರ, ಫೆ.8) ರಾತ್ರಿಯಿಂದ ನಿರಂತರವಾಗಿ ಕೆಮ್ಮು ಬರುತ್ತಿದ್ದು, ಎದೆ ನೋವು ಕಾಣಿಸಿಕೊಂಡಿತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪುಣೆಗೆ ಕರೆದೊಯ್ಯಲಾಯಿತು ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥರ ಸೋದರಳಿಯ ಶ್ರೀನಿವಾಸ್ ಪವಾರ್ ಹೇಳಿದರು.

ಶರದ್ ಪವಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದನ್ನು ರೂಬಿ ಹಾಲ್ ಕ್ಲಿನಿಕ್‌ನ ಮುಖ್ಯ ಹೃದ್ರೋಗ ತಜ್ಞ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಪರ್ವೇಜ್ ಗ್ರಾಂಟ್ ದೃಢಪಡಿಸಿದ್ದಾರೆ. ವೈದ್ಯರ ತಂಡವು ಅವರನ್ನು ಕೂಲಂಕುಷವಾಗಿ ಪರೀಕ್ಷಿಸುತ್ತಿದೆ ಎಂದು ಡಾ. ಗ್ರಾಂಟ್ ಹೇಳಿದರು.

ರಾಜಕೀಯ ಗುರುವಾಗಿದ್ದ ಚಿಕ್ಕಪ್ಪನ ವಿರುದ್ಧವೇ ಅಜಿತ್ ಪವಾರ್ ತಿರುಗಿ ಬಿದ್ದಿದ್ದು ಏಕೆ?

ಶರದ್ ಪವಾರ್ ಅವರಿಗೆ 1990 ರ ದಶಕದ ಉತ್ತರಾರ್ಧದಲ್ಲಿ ಬಾಯಿ ಕ್ಯಾನ್ಸರ್ ಉಂಟಾಗಿತ್ತು. ಇದಕ್ಕಾಗಿ ಚಿಕಿತ್ಸೆ ನೀಡಲು ಅವರು ಅಮೆರಿಕ ಮತ್ತು ಭಾರತದಲ್ಲಿ ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಈ ಮೂಲಕ ಕ್ಯಾನ್ಸರ್‌ನಿಂದ ಅವರು ಪಾರಾಗಿದ್ದರು.

ಶರದ್ ಪವಾರ್ ಯಾರು?

ಶರದ್ ಪವಾರ್ ಅವರು ಭಾರತದ ಹಿರಿಯ ಹಾಗೂ ಪ್ರಭಾವಶಾಲಿ ರಾಜಕಾರಣಿಗಳಲ್ಲಿ ಒಬ್ಬರು. ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಯ ಸ್ಥಾಪಕರು ಮತ್ತು ನಾಯಕರಾಗಿದ್ದಾರೆ. ಮಹಾರಾಷ್ಟ್ರದ ಬಾರಾಮತಿಯವರಾದ ಅವರ ಪೂರ್ಣ ಹೆಸರು ಶರದ್ ಗೋವಿಂದರಾವ್ ಪವಾರ್. ಶರದ್ ಪವಾರ್ ಅವರು ಪುಣೆಯ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ನಡೆಸಿದರು. ವಿದ್ಯಾರ್ಥಿ ಜೀವನದಲ್ಲಿಯೇ ರಾಜಕೀಯ ಆಸಕ್ತಿ ಬೆಳೆಸಿಕೊಂಡ ಅವರು ಯೌವನದಲ್ಲೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು. ಸಾಮಾಜಿಕ ನ್ಯಾಯ, ಕೃಷಿಕರ ಹಕ್ಕುಗಳು ಮತ್ತು ಗ್ರಾಮೀಣ ಅಭಿವೃದ್ಧಿ ಅವರ ಪ್ರಮುಖ ಆಸಕ್ತಿಗಳಾಗಿದ್ದವು.

1967ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಕೇವಲ 38 ವರ್ಷ ವಯಸ್ಸಿನಲ್ಲಿ (1978) ಮಹಾರಾಷ್ಟ್ರದ ಕಿರಿಯ ಮುಖ್ಯಮಂತ್ರಿ ಎಂಬ ದಾಖಲೆಗೆ ಪಾತ್ರರಾಗಿದ್ದರು. ಒಟ್ಟು ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಅವರು ರಾಜಕೀಯ ಜೀವನ ಆರಂಭಿಸಿದರು. ಆದರೆ, ಕಾಲಕ್ರಮೇಣ ಭಿನ್ನಾಭಿಪ್ರಾಯಗಳಿಂದಾಗಿ ಕಾಂಗ್ರೆಸ್‌ನಿಂದ ಹೊರಬಂದ ಅವರು ತಮ್ಮದೇ ಪಕ್ಷವನ್ನು ಸ್ಥಾಪನೆ ಮಾಡಿದರು.

ವಿಮಾನ ಅಪಘಾತದ ನಂತರ ಅಜಿತ್ ಪವಾರ್ ಮೃತದೇಹವನ್ನು ಗುರುತಿಸಿದ್ದು ಹೇಗೆ? ಆ ಒಂದು ವಸ್ತು ನೀಡ್ತಾ ಸುಳಿವು?

1999ರಲ್ಲಿ, ಕಾಂಗ್ರೆಸ್ ಪಕ್ಷದ ನಾಯಕತ್ವದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ, ಶರದ್ ಪವಾರ್ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (NCP) ವನ್ನು ಸ್ಥಾಪಿಸಿದರು. ನಂತರ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ದೀರ್ಘಕಾಲ ಸರ್ಕಾರ ನಡೆಸಿದರು.

ಇತ್ತೀಚೆಗೆ ಮಹಾರಾಷ್ಟ್ರದ ಬಾರಾಮತಿ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾದ ಮಾಜಿ ಡಿಸಿಎಂ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಸಹೋದರನ ಪುತ್ರ.