ಕೋಲ್ಕತ್ತಾ: ಇತ್ತೀಚೆಗಷ್ಟೇ ಹುಟ್ಟಿಕೊಂಡ ಹೊಸ ಪಕ್ಷವೊಂದು ಈಗ ದೇಶ ಮಟ್ಟದಲ್ಲಿ ಸುದ್ದಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ತೃಣಮೂಲ ಬಂಡುಕೋರರನ್ನು (Trinamool Rebels) ಜೊತೆ ಸೇರಿಸಲು ಆರಂಭದಲ್ಲಿ ವಿರೋಧಿಸಿದ್ದ ಪಕ್ಷ ಇದೀಗ ಅವರನ್ನು ಸೇರ್ಪಡೆಗೊಳಿಸಲು ಮುಂದಾಗಿದೆ. ತೃಣಮೂಲ ಕಾಂಗ್ರೆಸ್ (Trinamool congress) ಪಕ್ಷದ 20 ಬಂಡಾಯ ನಾಯಕರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷವನ್ನು (Nationalist Congress Party of India) ಸೇರಲು ಮುಂದಾಗಿದ್ದು, ಇದನ್ನು ಪಕ್ಷ ವಿರೋಧಿಸಿತ್ತು. ಆದರೆ ಇದೀಗ ಅವರ ಸ್ವಾಗತಕ್ಕೆ ಸಿದ್ಧವಾಗಿದೆ.
ತ್ರಿಪುರದ ಚುನಾವಣೆ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದೊಂದಿಗೆ ಸೇರಲು ತೃಣಮೂಲ ಕಾಂಗ್ರೆಸ್ ನಾಯಕರು ಮುಂದಾಗಿದ್ದರು. ಆದರೆ ಅವರನ್ನು ಪಕ್ಷ ತಿರಸ್ಕರಿಸಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು.
ಈ ಕುರಿತು ಭಾನುವಾರ ಪ್ರತಿಕ್ರಿಯಿಸಿದ ಎನ್‌ಸಿಪಿಐನ ಪ್ರಧಾನ ಕಾರ್ಯದರ್ಶಿ ಶಾಂತನು ಡೇ ಅವರು, ತಮ್ಮನ್ನು ಮತ್ತು ಇತರ ನಾಯಕರನ್ನು ಸಂಪರ್ಕಿಸದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಕ್ಷದ ಇತರರು ಇದನ್ನು ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.
ತೃಣಮೂಲ ನಾಯಕರನ್ನು ಪಕ್ಷಕ್ಕೆ ಸೇರಿಸಲು ಎನ್‌ಸಿಪಿಐ ಅಧ್ಯಕ್ಷ, ಹೌರಾ ನಿವಾಸಿ ಉತ್ತಿಯಾ ಕುಂಡು ಅವರು ಹಣ ಪಡೆದಿದ್ದಾರೆ ಎಂದು ಆರೋಪಿಸಿರುವ ಡೇ, ಇದನ್ನು ತಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು.
ಸೋಮವಾರ ನಡೆದ ಪಕ್ಷದ ಸಭೆಯ ಬಳಿಕ ಅವರು ತಮ್ಮ ನಿಲುವನ್ನು ಬದಲಾಯಿಸಿದ್ದು, ಪಕ್ಷದ ಸಭೆಯಲ್ಲಿ ಬಂಡಾಯ ತೃಣಮೂಲ ಸಂಸದರನ್ನು ಎನ್‌ಸಿಪಿಐ ಸ್ವಾಗತಿಸಲು ನಿರ್ಧರಿಸಿದೆ. ನಾವು ಒಂದು ಸಣ್ಣ ಪಕ್ಷ ಮತ್ತು ಪಶ್ಚಿಮ ಬಂಗಾಳಕ್ಕಾಗಿ ಕೆಲಸ ಮಾಡಲು ಬಯಸುತ್ತೇವೆ. ಪಕ್ಷದ ಅಧ್ಯಕ್ಷೆ ಮತ್ತು ಖಜಾಂಚಿ ಶೆವ್ಲಿ ಕುಂಡು ಸಭೆಗೆ ಬಂದಿಲ್ಲ ಎಂದು ತಿಳಿಸಿದರು.
ಉತ್ತಿಯ ಕುಂಡು ಅವರ ಪತ್ನಿ ವಕೀಲೆ ಶೆವ್ಲಿ ಕುಂಡು ಅವರು ಡೇ ಅವರು ಎನ್‌ಸಿಪಿಐನ ಸ್ಥಾಪಕ ಸದಸ್ಯರು ಎಂಬ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಅವರು 2023ರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಅಥವಾ ಸದಸ್ಯರಾಗಿಲ್ಲ ಎಂದು ಹೇಳಿದ್ದಾರೆ.
ನಾನು ಪಕ್ಷದ ಸ್ಥಾಪಕ ಅಧ್ಯಕ್ಷೆಯಾಗಿದ್ದು, ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಹೊಸ ಅಧ್ಯಕ್ಷರು ವಿವರಗಳನ್ನು ನೀಡಬಹುದು. ತ್ರಿಪುರದಲ್ಲಿ, ನಾವು ಎನ್‌ಡಿಎ ಜೊತೆಗಿದ್ದೆವು. ಆದರೆ ನಾನು ಹೆಚ್ಚು ಸಮಯ ಮೀಸಲಿಡಲು ಸಾಧ್ಯವಾಗದ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ವಕೀಲೆ ಶೆವ್ಲಿ ಕುಂಡು ಮಾಧ್ಯಮವೊಂದಕ್ಕೆ ಹೇಳಿದ್ದರು.
ಒಟ್ಟಿನಲ್ಲಿ ತೃಣಮೂಲ ಕಾಂಗ್ರೆಸ್ ಬಿಕ್ಕಟ್ಟಿನ ನಡುವೆ ಈಗ ಎನ್‌ಸಿಪಿಐ ಪ್ರಚಾರ ಪಡೆದಿದೆ. 2023ರಲ್ಲಿ ಈ ಪಕ್ಷವನ್ನು ಚುನಾವಣಾ ಆಯೋಗವು ಮಾನ್ಯತೆ ಪಡೆಯದ ರಾಜಕೀಯ ಪಕ್ಷವಾಗಿ ನೋಂದಾಯಿಸಿಕೊಂಡಿತ್ತು. ತ್ರಿಪುರದಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದು ಸೋಲು ಅನುಭವಿಸಿದರೂ ಅದು 1.13 ಲಕ್ಷ ರೂ. ದೇಣಿಗೆ ಪಡೆದುಕೊಂಡಿತ್ತು ಎಂಬುದಾಗಿ ಚುನಾವಣಾ ಆಯೋಗದ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.