ನವದೆಹಲಿ, ಜು. 21: ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದ ಸಂಸತ್ ಚಲೋ ಮೆರವಣಿಗೆಯ ಒಂದು ದಿನದ ನಂತರ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ನಾಯಕರಾದ ರಾಹುಲ್ ಗಾಂಧಿ (Rahul Gandhi), ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಆಗಮಿಸಿ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ (ಜುಲೈ 21) ಮಧ್ಯಾಹ್ನ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ಅವರ ನಿವಾಸದ ಹೊರಗೆ ಜಮಾಯಿಸಿದರು. ನಂತರ ಅಲ್ಲಿಂದ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿರುವ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿ ಅವರ ನಿವಾಸಕ್ಕೆ ಮೆರವಣಿಗೆ ನಡೆಸಿದರು.
ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಸಂಸತ್ತಿಗೆ ನಡೆಸಿದ ಮೆರವಣಿಗೆ ಮೇಲೆ ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ನಡೆಸಿದ್ದರು. ಇದರಿಂದ ಹಲವು ಪ್ರತಿಭಟನಾಕಾರರು ಗಾಯಗೊಂಡಿದ್ದರು. ನೀಟ್ ಮತ್ತು ಇತರ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದು ಸಿಜೆಪಿಯ ಪ್ರಮುಖ ಬೇಡಿಕೆ
ರಾಹುಲ್ ಗಾಂಧಿ ಪೋಸ್ಟ್ ಇಲ್ಲಿದೆ:
ಮತ್ತೊಂದೆಡೆ, ಪ್ರತಿಭಟನಾಕಾರರು ಅಶಿಸ್ತಿನ, ಆಕ್ರಮಣಕಾರಿ ಮತ್ತು ಹಿಂಸಾತ್ಮಕ ನಡವಳಿಕೆಯನ್ನು ಪ್ರದರ್ಶಿಸಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದರು. ಅವರು ಪೊಲೀಸರ ಮೇಲೆ ಕಲ್ಲುಗಳಿಂದ ದಾಳಿ ಮಾಡಿದ್ದಲ್ಲದೆ, ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದರು. ಹಾಗೆಯೇ ದೊಡ್ಡ ಪ್ರಮಾಣದ ಹಿಂಸಾಚಾರವನ್ನು ನಡೆಸಿದರು ಎಂದು ದೂರಿದರು. ಘಟನೆಯಲ್ಲಿ ಹಿರಿಯ ಅಧಿಕಾರಿಗಳು ಸೇರಿ118 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಶಂಭು ಗಡಿಯಲ್ಲಿ ಮತ್ತೆ ರೈತರ ಪ್ರತಿಭಟನೆ; ದೆಹಲಿ ಚಲೋ ತಡೆದ ಪೊಲೀಸರು
ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರತಿಭಟನಾಕಾರರ ಮೇಲೆ ನಡೆದ ದೌರ್ಜನ್ಯಕ್ಕೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ ಎಂದು ಹೇಳಿದರು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹಿಸಿದೆ.
“ಯುವ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಅವರಿಂದ ಉತ್ತರಗಳನ್ನು ಕೋರಿ ನಾವು ಪ್ರಧಾನಿ ಮೋದಿ ಅವರ ಮನೆಗೆ ಮೆರವಣಿಗೆ ನಡೆಸಿದ್ದೇವೆ. ಸರ್ಕಾರ ಯಾವುದೇ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಅಥವಾ ಸಂಸತ್ತಿನಲ್ಲಿ ಅದರ ಬಗ್ಗೆ ಚರ್ಚೆ ನಡೆಸಲು ಬಯಸುವುದಿಲ್ಲ. ಭಾರತದ ಯುವಕರ ಭವಿಷ್ಯವನ್ನು ನಾಶಪಡಿಸಿದ್ದಕ್ಕಾಗಿ ಪ್ರಧಾನಿ ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು” ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.