ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಶಂಭು ಗಡಿಯಲ್ಲಿ ಮತ್ತೆ ರೈತರ ಪ್ರತಿಭಟನೆ; ದೆಹಲಿ ಚಲೋ ತಡೆದ ಪೊಲೀಸರು
Farmers' March: ಭಾರತ–ಅಮೆರಿಕ ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯಲಿರುವ ಕಿಸಾನ್ ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ಪಂಜಾಬ್‌ನಿಂದ ಹೊರಟಿದ್ದ ನೂರಾರು ರೈತರನ್ನು ಹರಿಯಾಣ ಪೊಲೀಸರು ಶಂಭು ಗಡಿಯಲ್ಲಿ ತಡೆದರು. ಭಾರೀ ಬ್ಯಾರಿಕೇಡ್‌ಗಳು ಮತ್ತು ಭದ್ರತಾ ವ್ಯವಸ್ಥೆಯ ನಡುವೆಯೇ ರೈತರಿಗೆ ದೆಹಲಿ ಪ್ರವೇಶ ನಿರಾಕರಿಸಲಾಯಿತು. ಇದನ್ನು ಖಂಡಿಸಿದ ರೈತರು ಶಂಭು ಗಡಿಯಲ್ಲೇ ಪ್ರತಿಭಟನೆ ಆರಂಭಿಸಿ, ವ್ಯಾಪಾರ ಒಪ್ಪಂದದ ಸಂಪೂರ್ಣ ವಿವರಗಳನ್ನು ಸಾರ್ವಜನಿಕರ ಮುಂದಿಡಬೇಕು ಹಾಗೂ ರೈತರು ಸೇರಿ ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಯಾವುದೇ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಶಂಭು ಗಡಿಯಲ್ಲಿ ರೈತರನ್ನು ತಡೆದ ಪೊಲೀಸರು -
ನವದೆಹಲಿ, ಜು. 21: ಭಾರತ–ಅಮೆರಿಕ (India–US) ನಡುವೆ ಪ್ರಸ್ತಾಪಿತ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯಲಿರುವ 'ಕಿಸಾನ್ ಮಹಾಪಂಚಾಯತ್'ನಲ್ಲಿ ಭಾಗವಹಿಸಲು ಮಂಗಳವಾರ ಪಂಜಾಬ್‌ನಿಂದ ದೆಹಲಿಯತ್ತ ಹೊರಟಿದ್ದ ನೂರಾರು ರೈತರನ್ನು ಹರಿಯಾಣ ಪೊಲೀಸರು ಶಂಭು ಗಡಿಯಲ್ಲಿ ತಡೆದಿದ್ದಾರೆ. ಹರಿಯಾಣ ಪ್ರವೇಶದ್ವಾರವಾದ ಶಂಭು ಗಡಿಯಲ್ಲಿ ಪೊಲೀಸರು ಭಾರಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ರೈತರ ಮೆರವಣಿಗೆಗೆ ಅವಕಾಶ ನೀಡಲಿಲ್ಲ. 2024ರ 'ದೆಹಲಿ ಚಲೋ-2' ಪ್ರತಿಭಟನೆಯ ವೇಳೆ ನಿರ್ಮಿಸಿದ್ದ ಭದ್ರತಾ ವ್ಯವಸ್ಥೆಯನ್ನು ನೆನಪಿಸುವಂತೆ ಕಾಂಕ್ರೀಟ್ ತಡೆಗೋಡೆಗಳು, ಕಬ್ಬಿಣದ ಮುಳ್ಳುಗಳು ಹಾಗೂ ಬಹುಪದರದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.
ಮೆರವಣಿಗೆಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ರೈತರು ಶಂಭು ಗಡಿಯನ್ನೇ ಪ್ರತಿಭಟನಾ ಸ್ಥಳವನ್ನಾಗಿ ಪರಿವರ್ತಿಸಿ, ದೆಹಲಿಯಲ್ಲಿ ಶಾಂತಿಯುತವಾಗಿ ಸೇರಲು ಇರುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಹರಿಯಾಣ ಹಾಗೂ ಪಂಜಾಬ್ ಸರ್ಕಾರಗಳು ಹತ್ತಿಕ್ಕುತ್ತಿವೆ ಎಂದು ಆರೋಪಿಸಿದರು.
ರೈತರ ಪ್ರತಿಭಟನೆ:
#WATCH | A large number of farmers reach Shambhu Border (Punjab-Haryana border) ahead of their scheduled march to Delhi today. Visuals from Patiala (Punjab) side. pic.twitter.com/dJtdEt0qti
— ANI (@ANI) July 21, 2026
ಬಿಕೆಯು ಶಹೀದ್ ಭಗತ್ ಸಿಂಗ್ ಸಂಘಟನೆಯ ನಾಯಕ ತೇಜ್ವೀರ್ ಸಿಂಗ್, ʼʼಹರಿಯಾಣ ಪೊಲೀಸರು ಪಂಜಾಬ್ ವ್ಯಾಪ್ತಿಯೊಳಗೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದು, ಇದನ್ನು ತಡೆಯುವಲ್ಲಿ ಪಂಜಾಬ್ ಸರ್ಕಾರ ಮೌನ ವಹಿಸಿದೆʼʼ ಎಂದು ಆರೋಪಿಸಿದರು.
ಪಂಜಾಬ್‌ನ ರೈತರನ್ನು ತಡೆದಿದ್ದರೂ, ಹರಿಯಾಣದ ಅಂಬಾಲಾ, ಕುರುಕ್ಷೇತ್ರ ಸೇರಿ ವಿವಿಧ ಜಿಲ್ಲೆಗಳ ರೈತರು ದೆಹಲಿಯತ್ತ ತಮ್ಮ ಪ್ರಯಾಣ ಮುಂದುವರಿಸಿದರು.
ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ವಿರೋಧ
ದೇಶ್ ಬಚಾವೋ ಮೋರ್ಚಾ ನೇತೃತ್ವದಲ್ಲಿ ಆಯೋಜಿಸಲಾದ ಈ ಮಹಾಪಂಚಾಯತ್‌ನಲ್ಲಿ ಪಂಜಾಬ್, ಹರಿಯಾಣ ಹಾಗೂ ಹಿಮಾಚಲ ಪ್ರದೇಶದ ಹಲವು ರೈತ ಸಂಘಟನೆಗಳು ಭಾಗವಹಿಸುತ್ತಿದ್ದು, ಭಾರತ–ಅಮೆರಿಕ ವ್ಯಾಪಾರ ಒಪ್ಪಂದವನ್ನು ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ.
ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ (KMSC) ನಾಯಕ ಸರ್ವನ್ ಸಿಂಗ್ ಪಂಧೇರ್ ಅವರ ಪ್ರಕಾರ, KMSC, ಕಿಸಾನ್ ಮಜ್ದೂರ್ ಮೋರ್ಚಾ, ಆಜಾದ್ ಕಿಸಾನ್ ಮೋರ್ಚಾ ಹಾಗೂ ಬಿಕೆಯು ಏಕತಾ ಸಂಘರ್ಷ ಸಂಘಟನೆಗಳ ಮೆರವಣಿಗೆಗಳು ಪಂಜಾಬ್‌ನ ವಿವಿಧ ಭಾಗಗಳಿಂದ ಹೊರಟಿದ್ದರೂ ಶಂಭು ಗಡಿಯಲ್ಲಿ ತಡೆ ಹಿಡಿಯಲಾಗಿದೆ.
2026ರ ಫೆಬ್ರವರಿಯಲ್ಲಿ ಭಾರತ–ಅಮೆರಿಕ ಹೊರಡಿಸಿದ್ದ ಜಂಟಿ ಹೇಳಿಕೆಯ ಪ್ರಕಾರ, ಬಹು-ವಲಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತದ ಮಾತುಕತೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ಆತಂಕವೇನು?
ರೈತ ಸಂಘಟನೆಗಳ ಪ್ರಕಾರ, ಈ ಒಪ್ಪಂದವು ಕೇವಲ ವ್ಯಾಪಾರಕ್ಕೆ ಸೀಮಿತವಾಗದೇ ಕೃಷಿ, ಹೈನುಗಾರಿಕೆ, ಕೈಗಾರಿಕೆ, ಡಿಜಿಟಲ್ ವ್ಯಾಪಾರ, ಇ-ಕಾಮರ್ಸ್, ಹೂಡಿಕೆ, ಸರ್ಕಾರಿ ಖರೀದಿ, ಬೌದ್ಧಿಕ ಆಸ್ತಿ ಹಕ್ಕುಗಳು ಹಾಗೂ ಸೇವಾ ವಲಯ ಸೇರಿ ಹಲವು ಕ್ಷೇತ್ರಗಳನ್ನು ಒಳಗೊಂಡಿರಲಿದೆ.
ರೈತರಿಂದ ದೆಹಲಿ ಚಲೋ; ಭಾರೀ ಟ್ರಾಫಿಕ್ ಜಾಮ್, ಜನ ಹೈರಾಣ
ಇದರಿಂದ ಅಮೆರಿಕದ ಸೋಯಾಬೀನ್, ಮೆಕ್ಕೆಜೋಳ, ಹತ್ತಿ, ಎಥನಾಲ್, ಸೇಬು, ಬಾದಾಮಿ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಕೋಳಿ ಸಾಕಾಣಿಕೆ ಹಾಗೂ ಮೀನುಗಾರಿಕೆ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆ ಹೆಚ್ಚಿನ ಪ್ರಮಾಣದಲ್ಲಿ ತೆರೆಯುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಸರ್ಕಾರದಿಂದ ಸಹಾಯಧನ ಪಡೆಯುವ ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಬಂದರೆ, ದೇಶದ ಸಣ್ಣ ಮತ್ತು ಅತಿಸಣ್ಣ ರೈತರು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.
80 ಮಿಲಿಯನ್ ಗ್ರಾಮೀಣ ಕುಟುಂಬಗಳ ಬದುಕಿನ ಪ್ರಶ್ನೆ
ಭಾರತದ ಹೈನುಗಾರಿಕೆ ಕ್ಷೇತ್ರವೇ ಸುಮಾರು 8 ಕೋಟಿ (80 ಮಿಲಿಯನ್) ಗ್ರಾಮೀಣ ಕುಟುಂಬಗಳ ಜೀವನಾಧಾರ. ಈ ಕ್ಷೇತ್ರಕ್ಕೆ ಯಾವುದೇ ಹೊಡೆತ ಬಿದ್ದರೂ ರೈತರು, ಹಾಲು ಉತ್ಪಾದಕರು, ಸಣ್ಣ ವ್ಯಾಪಾರಿಗಳು, ಕೃಷಿ ಆಧಾರಿತ ಕೈಗಾರಿಕೆಗಳು ಹಾಗೂ ಸೂಕ್ಷ್ಮ ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ರೈತ ಸಂಘಟನೆಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ, ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಾರ್ವಜನಿಕರ ಮುಂದಿಡಬೇಕು ಹಾಗೂ ರೈತರು, ಕಾರ್ಮಿಕರು, ಹೈನುಗಾರರು, ಸಣ್ಣ ವ್ಯಾಪಾರಿಗಳು ಸೇರಿ ಎಲ್ಲರೊಂದಿಗೆ ಸಮಗ್ರ ಸಮಾಲೋಚನೆ ನಡೆಸದೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ದೇಶ್ ಬಚಾವೋ ಮೋರ್ಚಾ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.