ಮುಂಬೈ, ಜೂ. 20: ಭಾನುವಾರ (ಜೂನ್ 21) ನೀಟ್ ಮರು ಪರೀಕ್ಷೆ (NEET Re-Exam) ಬರೆಯಲು ಸಿದ್ಧವಾಗಿದ್ದ ಮಹಾರಾಷ್ಟ್ರದ ನಾಗ್ಪುರದ ವಿದ್ಯಾರ್ಥಿಯೊಬ್ಬನಿಗೆ ಆಘಾತ ಎದುರಿಗಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ನೀಡಲಾಗಿದೆ. ಭಾನುವಾರ ನಡೆಯಬೇಕಿದ್ದ ಪರೀಕ್ಷೆಗೆ ಆಕಾಂಕ್ಷಿಯು ನಾಗ್ಪುರವನ್ನು ತನ್ನ ಆದ್ಯತೆಯ ನಗರವಾಗಿ ಆರಿಸಿಕೊಂಡಿದ್ದರು. ಆದರೆ ಅವರಿಗೆ ವಿದೇಶದಲ್ಲಿ ಪರೀಕ್ಷಾ ಕೇಂದ್ರವನ್ನು ನೀಡಲಾಯಿತು. ತಪ್ಪು ತಿಳಿದುಬಂದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ದೋಷವನ್ನು ಸರಿಪಡಿಸಿತು.
ಪರೀಕ್ಷಾ ಕೇಂದ್ರವನ್ನು ನೋಡಿದ ವಿದ್ಯಾರ್ಥಿಯ ಕುಟುಂಬವು ಮೊದಲಿಗೆ ಆತಂಕಕ್ಕೀಡಾಯಿತು. ತಮ್ಮ ಪುತ್ರನ ಬಳಿ ಪಾಸ್‌ಪೋರ್ಟ್ ಇಲ್ಲ. ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿ ಪಡೆಯಲು ಕೂಡ ಸಾಕಷ್ಟು ಸಮಯವಿಲ್ಲ ಎಂದು ವಿದ್ಯಾರ್ಥಿಯ ತಂದೆ ಮೊಹಮ್ಮದ್ ತಾಲಿಬ್ ತಿಳಿಸಿದರು. ಈ ತಪ್ಪಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಟಿಎ ನಡೆಯನ್ನು ಟೀಕಿಸಿದರು. ಸಂಸ್ಥೆಯು ದೇಶದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಕಿಡಿಕಾರಿದರು.
ತಮ್ಮದೇ ನಗರದಲ್ಲಿ ಪರೀಕ್ಷಾ ಕೇಂದ್ರ ಒದಗಿಸಲು ಸಾಧ್ಯವಾಗದ, ಆದರೆ ವಿದ್ಯಾರ್ಥಿಯನ್ನು ವಿದೇಶಕ್ಕೆ ಕಳುಹಿಸಬಲ್ಲ ವ್ಯವಸ್ಥೆಗೆ ಪರೀಕ್ಷೆ ನಡೆಸುವ ನೈತಿಕ ಹಕ್ಕೇ ಇಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಪೋಸ್ಟ್:
ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆಗೆ ನೀಡಲಾದ ಪ್ರವೇಶ ಪತ್ರದಲ್ಲಿ ಅಭ್ಯರ್ಥಿಗೆ ನಾಗ್ಪುರದ ಸರಸ್ವತಿ ವಿದ್ಯಾಲಯದಲ್ಲಿ ಕೇಂದ್ರವನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಅವ್ಯವಹಾರ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ನಂತರ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು.
ನೀಟ್ ಮರು ಪರೀಕ್ಷೆ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಜಿ.ಪ್ರಭು ಕಟ್ಟುನಿಟ್ಟಿನ ಸೂಚನೆ
ಮರು ನಿಗದಿಪಡಿಸಿದ ಪರೀಕ್ಷೆಯ ಪ್ರವೇಶ ಪತ್ರವನ್ನು ವಿದ್ಯಾರ್ಥಿಯು ಡೌನ್‌ಲೋಡ್ ಮಾಡಿದಾಗ, ತನ್ನ ಕೇಂದ್ರವನ್ನು ಯುಎಇಯ ಅಬುಧಾಬಿ ಇಂಡಿಯನ್ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂತು. ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ವಿದ್ಯಾರ್ಥಿಯು ನಾಗ್ಪುರವನ್ನು ತನ್ನ ಮೊದಲ ಆಯ್ಕೆಯಾಗಿ ಆರಿಸಿಕೊಂಡಿದ್ದರು. ನಂತರ ವಾರ್ಧಾ ಮತ್ತು ಭಂಡಾರವನ್ನು ಆರಿಸಿಕೊಂಡಿದ್ದರು ಎಂದು ವಿದ್ಯಾರ್ಥಿಯ ಕುಟುಂಬ ತಿಳಿಸಿದೆ.
ವಿದೇಶದಲ್ಲಿ ಪರೀಕ್ಷಾ ಕೇಂದ್ರ ಇರುವುದನ್ನು ಗಮನಿಸಿದ ವಿದ್ಯಾರ್ಥಿಯ ಕುಟುಂಬವು ಕೂಡಲೇ ಎನ್‍ಟಿಎ ಸಹಾಯವಾಣಿಗೆ ದೂರು ನೀಡಿತು. ಏಜೆನ್ಸಿಯು ದೋಷವನ್ನು ಒಪ್ಪಿಕೊಂಡಿತು. ಎಲ್ಲ ವಿವರಗಳನ್ನು ಪರಿಶೀಲಿಸಿದ ನಂತರ ಪರಿಷ್ಕೃತ ಪ್ರವೇಶ ಪತ್ರವನ್ನು ನೀಡುವುದಾಗಿ ಭರವಸೆ ನೀಡಿತು. ನಂತರ ಅಭ್ಯರ್ಥಿಗೆ ನಾಗ್ಪುರದಲ್ಲಿ ಕೇಂದ್ರವನ್ನು ನೀಡಲಾಗಿದೆ ಎಂದು ಎನ್‍ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ತಿಳಿಸಿದರು.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಎನ್‌ಟಿಎ (NTA) ಯಿಂದ ಈ ತಪ್ಪು ಹೇಗೆ ಸಂಭವಿಸಿತು ಎಂದು ಪ್ರಶ್ನಿಸಿದ್ದಾರೆ. ಇದು ಹೇಗೆ ಸಂಭವಿಸಿತು? ಯಾವುದೇ ವಿದ್ಯಾರ್ಥಿಗೆ ತನ್ನ ಪರೀಕ್ಷಾ ಕೇಂದ್ರವನ್ನು ತಲುಪಲು ಸಾಧ್ಯವಾಗದ ಬಗ್ಗೆ ದೂರು ಇರಬಾರದು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಇದು ಶಿಕ್ಷಣ ವ್ಯವಸ್ಥೆಯಾಗಿ ಉಳಿದಿಲ್ಲ. ಇದು ಇಡೀ ಒಂದು ಪೀಳಿಗೆಯ ಹಣ, ಸಮಯ ಮತ್ತು ಮಾನಸಿಕ ನೆಮ್ಮದಿಯನ್ನು ಕಸಿದುಕೊಳ್ಳುವ ವ್ಯವಸ್ಥೆಯಾಗಿದೆ ಎಂದು ಅವರು ಆರೋಪಿಸಿದರು.
ಮಹಾರಾಷ್ಟ್ರದ ಮಾಜಿ ಶಿಕ್ಷಣ ಸಚಿವ ಡಾ. ಅನೀಸ್ ಅಹ್ಮದ್ ಕೂಡ ಈ ದೋಷವನ್ನು ಗಂಭೀರ ಲೋಪ ಎಂದು ಟೀಕಿಸಿದರು. ವಿದ್ಯಾರ್ಥಿಗೆ ನಾಗ್ಪುರ ಅಥವಾ ಹತ್ತಿರದ ನಗರದಲ್ಲಿ ಕೇಂದ್ರವನ್ನು ಮಂಜೂರು ಮಾಡುವ ಮೂಲಕ ಅದನ್ನು ತಕ್ಷಣವೇ ಸರಿಪಡಿಸಬೇಕೆಂದು ಸಂಸ್ಥೆಯನ್ನು ಒತ್ತಾಯಿಸಿದ್ದರು.
ಇನ್ನು ಆರೋಪಗಳಿಗೆ ಪ್ರತಿಕ್ರಿಯಿಸಿದ ಹಿರಿಯ ಎನ್‍ಟಿಎ ಅಧಿಕಾರಿಯೊಬ್ಬರು, ಅಭ್ಯರ್ಥಿಯು ಮೇ 3ರಂದು ತನ್ನ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಅದೇ ಐಪಿ ವಿಳಾಸವನ್ನು ಬಳಸಿಕೊಂಡು ಪೋರ್ಟಲ್ ಮೂಲಕ ತನ್ನ ಪರೀಕ್ಷಾ ನಗರ ಆದ್ಯತೆಗಳನ್ನು ಮಾರ್ಪಡಿಸಿದ್ದಾರೆ ಎಂದು ಹೇಳಿದರು.