ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮತ್ತೊಂದು ಸುತ್ತಿನ ಸಮರಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ; ಸೆಪ್ಟೆಂಬರ್‌ 5ರಂದು ನೀಟ್ ಅಕ್ರಮದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ

Cockroach Janta Party: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿ ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ಇಂಡಿಯಾ ಗೇಟ್‌ನಿಂದ ಪೊಲೀಸ್ ಪ್ರಧಾನ ಕಚೇರಿವರೆಗೆ ಶಾಂತಿಯುತ ಮೆರವಣಿಗೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ ಘೋಷಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಆ. 24: ನೀಟ್ ಪ್ರಶ್ನೆಪತ್ರಿಕೆ (Neet Question Paper Leak) ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party), ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ. ಮೆರವಣಿಗೆಯು ಇಂಡಿಯಾ ಗೇಟ್‌ನಿಂದ ಆರಂಭವಾಗಿ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ನಡೆಯಲಿದೆ. ನೀಟ್ ಆಕಾಂಕ್ಷಿಗಳಾಗಿ ಮೃತಪಟ್ಟವರ ಕುಟುಂಬಸ್ಥರು ಹಾಗೂ ಹಿಂದಿನ ಪ್ರತಿಭಟನೆಗಳಲ್ಲಿ ಪೊಲೀಸ್ ಕ್ರಮದಿಂದಾಗಿ ತೊಂದರೆಗೊಳಗಾದವರು ಮೆರವಣಿಗೆಗೆ ನೇತೃತ್ವ ವಹಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಜುಲೈ 25ರಂದು ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂಘಟನೆ ತನ್ನ ಪ್ರತಿಭಟನೆಯನ್ನು ಹಿಂಪಡೆದುಕೊಂಡಿತ್ತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಸೇರಿ ಹಲವು ಬೇಡಿಕೆಗಳನ್ನು ಸಂಘಟನೆ ಮುಂದಿಟ್ಟಿತ್ತು.

ಮತ್ತೊಂದು ಪ್ರತಿಭಟನೆ ಘೋಷಿಸಿದ ಸಿಜೆಪಿ:



ನೀಟ್ ಆಕಾಂಕ್ಷಿಗಳಾಗಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಪ್ರತಿಭಟನಾಕಾರರ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸಬೇಕು ಹಾಗೂ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂಬ ಬೇಡಿಕೆಗಳನ್ನೂ ಮಂಡಿಸಲಾಗಿತ್ತು.

ನೀಟ್ ಪ್ರತಿಭಟನೆ: ಮಹಿಳಾ ದೌರ್ಜನ್ಯ ದೂರುಗಳಿಗೆ ಆದ್ಯತೆ, ಮಧ್ಯಂತರ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಆದರೆ ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದರೂ, ಸರ್ಕಾರ ಈ ಬಗ್ಗೆ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಹೇಳಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಂದು ನಡೆಯಲಿರುವ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಯುವ ಸಂಘಟನೆಗಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆ ಮನವಿ ಮಾಡಿದೆ.

ಹಿಂದಿನ ಪ್ರತಿಭಟನೆ ವೇಳೆ ಸಂಸತ್ ಭವನದತ್ತ ಸಾಗುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದರು. ಬಳಿಕ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಯೂ ನಡೆದಿತ್ತು.