ನವದೆಹಲಿ/ಕಠ್ಮಂಡು, ಆ. 28: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬೆನ್ನಲ್ಲೇ ಭಾರತವು ತ್ವರಿತವಾಗಿ ಮಾನವೀಯ ನೆರವು ಒದಗಿಸಿದೆ. ಬುಧವಾರ ರಾತ್ರಿ ಭಾರತೀಯ ವಾಯುಪಡೆಯ C-130J ವಿಮಾನವು 10 ಟನ್‌ಗಳಷ್ಟು ಮಾನವೀಯ ಹಾಗೂ ವಿಪತ್ತು ಪರಿಹಾರ ಸಾಮಗ್ರಿಗಳೊಂದಿಗೆ ಭಾರತದಿಂದ ಹೊರಟಿದ್ದು, ಅದೇ ರಾತ್ರಿ ಮೊದಲ ಹಂತದ ನೆರವು ಕಠ್ಮಂಡುವಿಗೆ ತಲುಪಿದೆ. ಪ್ರವಾಹ ಸಂಭವಿಸಿದ 12 ಗಂಟೆಗಳೊಳಗೆ ಭಾರತವು ಪರಿಹಾರ ಸಾಮಗ್ರಿಗಳನ್ನು ವಿಮಾನದ ಮೂಲಕ ಕಳುಹಿಸಿರುವುದು, ವಿಪತ್ತು ಸಂದರ್ಭದಲ್ಲಿ ತ್ವರಿತವಾಗಿ ನೆರವು ನೀಡುವ ‘First Responder’ ರಾಷ್ಟ್ರವಾಗಿ ಭಾರತದ ಪಾತ್ರವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಬುಧವಾರ (ಆಗಸ್ಟ್ 26) ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಾಪ ಸೂಚಿಸಿದರು. ನೇಪಾಳಕ್ಕೆ ಅಗತ್ಯವಿರುವ ಎಲ್ಲ ರೀತಿಯ ಮಾನವೀಯ ನೆರವು ನೀಡಲು ಭಾರತ ಸಿದ್ಧ ಎಂದು ಭರವಸೆ ನೀಡಿದರು. ಭಾರತೀಯ ರಕ್ಷಣಾ ಮತ್ತು ಪರಿಹಾರ ತಂಡಗಳು ನೇಪಾಳದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ ಎಂದು ತಿಳಿಸಿದರು.
ಎಸ್. ಜೈಶಂಕರ್ ಅವರ ಎಕ್ಸ್ ಪೋಸ್ಟ್:
ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಭಾರತವು 10 ಟನ್ ಮಾನವೀಯ ನೆರವು ಕಳುಹಿಸಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ಭಾರತ ನೇಪಾಳ ಮತ್ತು ಅದರ ಜನರೊಂದಿಗೆ ನಿಂತಿದೆ” ಎಂದು ಹೇಳಿದ್ದಾರೆ.
ಗುರುವಾರ ಭಾರತವು ಮತ್ತೊಂದು ಹಂತದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದು, ಇದರಲ್ಲಿ ಔಷಧಗಳು ಮತ್ತು ಆಹಾರ ಪ್ಯಾಕೆಟ್‌ಗಳು ಸೇರಿವೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಭಾರತವು ವಿಮಾನದ ಮೂಲಕ ಒಟ್ಟು 62 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ಕಳುಹಿಸಿದೆ.
ನೇಪಾಳದಲ್ಲಿ ಸಿಲುಕಿದ ಹಾವೇರಿ ಮೂಲದ 12 ಪ್ರವಾಸಿಗರು ಸುರಕ್ಷಿತ
ಭಾರತದ ಜೊತೆಗೆ ಚೀನಾ, ದಕ್ಷಿಣ ಕೊರಿಯಾ, ಬ್ರಿಟನ್, ಯುರೋಪಿಯನ್ ಒಕ್ಕೂಟ, ಅಮೆರಿಕ, ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಬ್ಯಾಂಕ್ ಕೂಡ ನೇಪಾಳಕ್ಕೆ ವಿವಿಧ ರೀತಿಯ ನೆರವು ನೀಡಲು ಮುಂದಾಗಿವೆ. ಅಮೆರಿಕವು 5 ಲಕ್ಷ ಡಾಲರ್ ನೆರವು ಹಾಗೂ ವಿಪತ್ತು ನಿರ್ವಹಣಾ ಸಲಹೆಗಾರರನ್ನು ಒದಗಿಸುವುದಾಗಿ ತಿಳಿಸಿದ್ದು, ಬ್ರಿಟನ್ 5 ಮಿಲಿಯನ್ ಪೌಂಡ್ ನೆರವು ಘೋಷಿಸಿದೆ. ವಿಶ್ವ ಬ್ಯಾಂಕ್ ತುರ್ತು ನೆರವಿನ ರೂಪದಲ್ಲಿ 25 ಬಿಲಿಯನ್ ನೇಪಾಳಿ ರುಪಾಯಿವರೆಗೆ ಒದಗಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ದುರಂತವು ಭಾರಿ ಹಿಮನದಿ ಕುಸಿತದಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಹಿಮ, ಬಂಡೆ, ಕೆಸರು ಮತ್ತು ನೀರಿನ ಬೃಹತ್ ಪ್ರವಾಹವು ಪರ್ವತ ನದಿ ವ್ಯವಸ್ಥೆಗಳ ಮೂಲಕ ಹರಿದು ಗ್ರಾಮಗಳು, ರಸ್ತೆಗಳು, ಸೇತುವೆಗಳು ಸೇರಿ ಹಲವು ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿದೆ.
ಶುಕ್ರವಾರ (ಆಗಸ್ಟ್ 28) ಮಧ್ಯಾಹ್ನದ ವೇಳೆಗೆ ನೇಪಾಳದಲ್ಲಿ 469 ಮಂದಿ ಹಾಗೂ ಟಿಬೆಟ್‌ನಲ್ಲಿ 3 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 472ಕ್ಕೆ ಏರಿಕೆಯಾಗಿದೆ. ನೇಪಾಳದಲ್ಲಿ ಸುಮಾರು 1,000 ಮಂದಿ ನಾಪತ್ತೆಯಾಗಿದ್ದಾರೆ. ಟಿಬೆಟ್‌ನಲ್ಲಿ ಇನ್ನೂ 558 ಮಂದಿ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.