ನವದೆಹಲಿ: ಹೊರ್ಮುಜ್ ಜಲಸಂಧಿ (Strait of Hormuz) ದಾಟಲು ಪ್ರಯತ್ನಿಸುತ್ತಿದ್ದ ಎರಡು ಭಾರತೀಯ ಹಡಗುಗಳ (Indian ships) ಮೇಲೆ ಶನಿವಾರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Islamic Revolutionary Guard Corps) ದಾಳಿ ನಡೆಸಿದ ಬಳಿಕ ಇದೀಗ ಆ ಹಡಗುಗಳು ಸೇರಿದಂತೆ ಜಲಮಾರ್ಗದಲ್ಲಿ ಬರುವ ಎಲ್ಲ ಹಡಗುಗಳಿಗೆ ಹೊಸ ಸೂಚನೆಯನ್ನು ಭಾರತೀಯ ನೌಕಾ ಪಡೆಯು (Indian Navy) ನೀಡಿದೆ. ಇರಾಕ್ ನಿಂದ ಸುಮಾರು 2 ಮಿಲಿಯನ್ ಬ್ಯಾರೆಲ್ ತೈಲವನ್ನು ಹೊತ್ತು ಬರುತ್ತಿದ್ದ ಸೂಪರ್ ಟ್ಯಾಂಕರ್ ಸೇರಿದಂತೆ ಭಾರತದ ಧ್ವಜವಿದ್ದ ಎರಡು ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸಲಾಗಿತ್ತು. ಹೀಗಾಗಿ ಅವುಗಳು ದಾರಿಯಿಂದ ಮರಳಿ ಹಿಂದೆ ತೆರಳಿದ್ದವು.
ಪರ್ಷಿಯನ್ ಕೊಲ್ಲಿಯಲ್ಲಿ ಭಾರತೀಯ ಧ್ವಜ ಹೊತ್ತಿರುವ ಹಡಗುಗಳಿಗೆ ಇದೀಗ ಭಾರತವು ಹೊಸ ಸಲಹೆಯನ್ನು ನೀಡಿದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಲಾರಕ್ ದ್ವೀಪದಿಂದ ದೂರವಿದ್ದು, ನಿರ್ದೇಶನ ನೀಡಿದಾಗ ಮಾತ್ರ ಸಾಗಲು ಸೂಚಿಸಿದೆ. ಹೊರ್ಮುಜ್ ಜಲಸಂಧಿಯನ್ನು ದಾಟಲು ಕಾಯುತ್ತಿರುವ ಎಲ್ಲಾ ಭಾರತೀಯ ಹಡಗುಗಳ ಭದ್ರತೆಗೆ ಭಾರತೀಯ ನೌಕಾಪಡೆ ಹೆಚ್ಚಿನ ಆದ್ಯತೆ ನೀಡುತ್ತಿದೆ.
ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ
ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಶನಿವಾರ ಎರಡು ಭಾರತೀಯ ಹಡಗುಗಳ ಮೇಲೆ ಹೊರ್ಮುಜ್ ಜಲಸಂಧಿಯ ಬಳಿ ಗುಂಡಿನ ದಾಳಿ ನಡೆಸಿತ್ತು. ಇದರ ಬಳಿಕ ಭಾರತೀಯ ನೌಕಾಪಡೆಯು ಹೊರ್ಮುಜ್ ಜಲಸಂಧಿಯ ಬಳಿ ಭದ್ರತೆಯನ್ನು ಬಿಗಿಗೊಳಿಸಿದೆ.
ಇರಾನ್ ಮತ್ತು ಯುಎಸ್ ನಡುವೆ ಸಂಘರ್ಷ ಪ್ರಾರಂಭವಾದ ಮೇಲೆ ಈವರೆಗೆ ಹನ್ನೊಂದು ಭಾರತೀಯ ಹಡಗುಗಳು ಹೊರ್ಮುಜ್ ಜಲಸಂಧಿಯನ್ನು ದಾಟಿವೆ. ಕೊನೆಯ ಟ್ಯಾಂಕರ್ ದೇಶ್ ಗರಿಮಾ ಏಪ್ರಿಲ್ 18 ರಂದು ದಾಟಿತು. ಅದೇ ದಿನ ಎರಡು ಭಾರತೀಯ ಹಡಗುಗಳಾದ ಜಗ್ ಅರ್ನವ್ ಮತ್ತು ಸನ್ಮಾರ್ ಹೆರಾಲ್ಡ್ ಮೇಲೆ ಇರಾನಿನ ಗಾರ್ಡ್‌ಗಳು ಗುಂಡಿನ ದಾಳಿ ನಡೆಸಿದ್ದರಿಂದ ಅದು ಅಲ್ಲಿಂದ ಹಿಂದಕ್ಕೆ ತೆರಳಿತು.
ಹೊರ್ಮುಜ್ ಜಲಸಂಧಿಯನ್ನು ದಾಟಿ ಬಂದಿರುವ ದೇಶ್ ಗರಿಮಾ ಅರೇಬಿಯನ್ ಸಮುದ್ರದಲ್ಲಿದ್ದು, ಇದಕ್ಕೆ ಭಾರತೀಯ ನೌಕಾಪಡೆಯು ಬೆಂಗಾವಲಾಗಿ ಬರುತ್ತಿವೆ. ಇದು ಏಪ್ರಿಲ್ 22ರಂದು ಮುಂಬೈಗೆ ಆಗಮಿಸುವ ನಿರೀಕ್ಷೆಯಿದೆ.
ಹೊರ್ಮುಜ್ ಜಲಸಂಧಿಯ ಬಳಿ ಇರುವ ಅತ್ಯಂತ ಕಿರಿದಾದ ಪ್ರದೇಶದಲ್ಲಿದೆ ಲಾರಕ್ ದ್ವೀಪ. ಇದು ಇರಾನ್‌ನ ತೈಲ ಮೂಲಸೌಕರ್ಯದ ಪ್ರಮುಖ ಭಾಗದ ನೆಲೆಯಾಗಿದೆ. ಹೀಗಾಗಿ ಇರಾನ್ ಇಲ್ಲಿ ಹೆಚ್ಚಿನ ಭದ್ರತೆಯನ್ನು ನೀಡುತ್ತಿದೆ. ಹೊರ್ಮುಜ್ ಜಲಸಂಧಿಯ ಬಳಿ ಬಂಕರ್‌ಗಳು ಮತ್ತು ರಾಡಾರ್ ವ್ಯವಸ್ಥೆಗಳ ಮೂಲಕ ನಿರಂತರ ಮೇಲ್ವಿಚಾರಣೆ ನಡೆಸುತ್ತದೆ.
ಭಾರತೀಯ ನೌಕಾ ಪಡೆಯಿಂದ ಅನುಮತಿ ಪಡೆಯದೆ ಈ ದ್ವೀಪದ ಹತ್ತಿರ ಈಗ ಭಾರತೀಯ ಹಡಗುಗಳಿಗೆ ಹಾದುಹೋಗದಂತೆ ಸೂಚಿಸಲಾಗಿದೆ. ಹೀಗಾಗಿ ಭಾರತೀಯ ಹಡಗುಗಳು ಹೊರ್ಮುಜ್ ಜಲಸಂಧಿಯ ಮೂಲಕ ಹಾದು ಬರುವುದಕ್ಕಾಗಿ ಭಾರತೀಯ ನೌಕಾಪಡೆಯ ಆದೇಶವನ್ನು ಕಾಯಬೇಕಾಗುತ್ತದೆ. ಸದ್ಯ ಹದಿನಾಲ್ಕು ಭಾರತೀಯ ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿದ್ದು, ಹೊರ್ಮುಜ್ ಜಲಸಂಧಿ ದಾಟಲು ಕಾಯುತ್ತಿವೆ. ಅವುಗಳೊಂದಿಗೆ ಭಾರತೀಯ ನೌಕಾಪಡೆಯು ನಿರಂತರ ಸಂವಹನದಲ್ಲಿದೆ. ಭಾರತೀಯ ನೌಕಾಪಡೆಯ ಏಳು ಹಡಗುಗಳನ್ನು ಪರ್ಷಿಯನ್ ಕೊಲ್ಲಿಯ ಸಮೀಪ ನಿಯೋಜಿಸಲಾಗಿದೆ