ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳುನಾಡು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಭೇಟಿಯಾದ ನೂತನ ಮುಖ್ಯಮಂತ್ರಿ ವಿಜಯ್

Vijay meets Stalin: ಹೊಸದಾಗಿ ನೇಮಕಗೊಂಡ ತಮಿಳುನಾಡು ಸಿಎಂ ಸಿ.ಜೋಸೆಫ್ ವಿಜಯ್ ಸೋಮವಾರ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಭೇಟಿಯಾದರು. ಸ್ಟಾಲಿನ್, ವಿಜಯ್ ಅವರನ್ನು ತಮ್ಮ ಚೆನ್ನೈ ನಿವಾಸಕ್ಕೆ ಸ್ವಾಗತಿಸಿದರು. ಭೇಟಿಯಾಗುತ್ತಿದ್ದಂತೆ ಇಬ್ಬರು ನಾಯಕರು ಶುಭಾಶಯ ವಿನಿಮಯ ಮಾಡಿಕೊಂಡರು ಮತ್ತು ಪರಸ್ಪರ ಪ್ರೀತಿಯಿಂದ ಅಪ್ಪಿಕೊಂಡರು.

ಸ್ಟಾಲಿನ್ ಭೇಟಿಯಾದ ನೂತನ ಮುಖ್ಯಮಂತ್ರಿ ವಿಜಯ್

ಚೆನ್ನೈ, ಮೇ 11: ಹೊಸದಾಗಿ ನೇಮಕಗೊಂಡ ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ (Joseph Vijay) ಸೋಮವಾರ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಭೇಟಿಯಾದರು. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಡಿಎಂಕೆ ಮುಖ್ಯಸ್ಥರನ್ನು ವಿಜಯ್ ಭೇಟಿಯಾದರು.

ಸ್ಟಾಲಿನ್, ವಿಜಯ್ ಅವರನ್ನು ತಮ್ಮ ಚೆನ್ನೈ ನಿವಾಸಕ್ಕೆ ಸ್ವಾಗತಿಸಿದರು. ಇಬ್ಬರು ನಾಯಕರು ಶುಭಾಶಯ ವಿನಿಮಯ ಮಾಡಿಕೊಂಡರು ಮತ್ತು ಪರಸ್ಪರ ಪ್ರೀತಿಯಿಂದ ಅಪ್ಪಿಕೊಂಡರು. ಸಿಎಂ ವಿಜಯ್ ಪ್ರಮಾಣ ವಚನ ದಿನದಂದು ಧರಿಸಿದ್ದ ಕಪ್ಪು ಸೂಟ್‌ನಲ್ಲಿ ಮಿಂಚುತ್ತಿದ್ದರು. ಇಬ್ಬರೂ ನಾಯಕರು ಪರಸ್ಪರ ಕೈಮುಗಿದು ಗೌರವ ಸಲ್ಲಿಸಿದರು. ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿ, ಆಳ್ವಾರ್‌ಪೇಟೆ ನಿವಾಸಕ್ಕೆ ಪ್ರವೇಶಿಸುವ ಮೊದಲು ಅಪ್ಪಿಕೊಂಡರು.

ಇಲ್ಲಿದೆ ವಿಡಿಯೊ:



ಚುನಾವಣಾ ಗೆಲುವು ಮತ್ತು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ಟಾಲಿನ್ ಅವರೊಂದಿಗೆ ವಿಜಯ್ ನಡೆಸಿದ ಮೊದಲ ಸಂವಾದ ಇದಾಗಿತ್ತು. ವಿಜಯ್ ಅವರಿಗೆ ಸ್ಟಾಲಿನ್ ಮತ್ತು ತಮಿಳುನಾಡು ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಂದ ಆತ್ಮೀಯ ಸ್ವಾಗತ ದೊರೆಯಿತು. ಭೇಟಿಯ ಸಮಯದಲ್ಲಿ, ವಿಜಯ್ ಮತ್ತು ಸ್ಟಾಲಿನ್ ಪರಸ್ಪರ ಗೌರವದ ಸಂಕೇತವಾಗಿ ರೇಷ್ಮೆ ಶಾಲುಗಳು ಮತ್ತು ಹೂಗುಚ್ಛಗಳನ್ನು ವಿನಿಮಯ ಮಾಡಿಕೊಂಡರು.

ಸ್ನೇಹಿತರು ಈಗ ವಿರೋಧಿಗಳು; ಸಿಎಂ ವಿಜಯ್, ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್

ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಡಿಎಂಕೆ ಮುಖ್ಯಸ್ಥ ಸ್ಟಾಲಿನ್, ಭೇಟಿಯ ಸಮಯದಲ್ಲಿ ವಿಜಯ್ ಅವರನ್ನು ಅಭಿನಂದಿಸಿದ್ದೇನೆ. ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿಯೊಂದಿಗೆ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದರು.

ಮೇ 13ರಂದು ತಮಿಳುನಾಡು ವಿಧಾನಸಭೆಯಲ್ಲಿ ನಡೆಯಲಿರುವ ನಿರ್ಣಾಯಕ ವಿಶ್ವಾಸಮತ ಪರೀಕ್ಷೆಗೆ ಕೆಲವೇ ದಿನಗಳ ಮೊದಲು ವಿಜಯ್ ಸ್ಟಾಲಿನ್ ಮತ್ತು ಉದಯನಿಧಿ ಅವರನ್ನು ಭೇಟಿ ಮಾಡಿರುವುದು ವಿಶೇಷ. ಈ ಪರೀಕ್ಷೆಯಲ್ಲಿ ಟಿವಿಕೆ ಸರ್ಕಾರವು ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕಿದೆ. ಗಮನಿಸಬೇಕಾದ ವಿಚಾರವೆಂದರೆ, ವಿಜಯ್ ಅವರ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿರುವ ವಿಸಿಕೆ, ಐಯುಎಂಎಲ್ ಮತ್ತು ಎಡಪಕ್ಷಗಳು, ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿಯೂ ಇವೆ.

ವಿಧಾನಸಭೆಯಲ್ಲಿ, ಟಿವಿಕೆ 107 ಸ್ಥಾನಗಳನ್ನು ಹೊಂದಿದೆ ಮತ್ತು ಕಾಂಗ್ರೆಸ್, ವಿಸಿಕೆ, ಐಯುಎಂಎಲ್ ಮತ್ತು ಎಡ ಪಕ್ಷಗಳ 13 ಶಾಸಕರ ಬೆಂಬಲ ಗಳಿಸಿದೆ. ಇದಕ್ಕೂ ಮುನ್ನ, ಅಂದರೆ ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ವಿಜಯ್ ರಾಜ್ಯದ 10 ಲಕ್ಷ ಕೋಟಿ ರುಪಾಯಿ ಸಾಲದ ಹೊರೆಗೆ ಸಂಬಂಧಿಸಿದಂತೆ ಹಿಂದಿನ ಡಿಎಂಕೆ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದರು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದ ಸ್ಟಾಲಿನ್, ವಿಜಯ್ ಅವರನ್ನು ತೀವ್ರವಾಗಿ ಟೀಕಿಸಿದ್ದರು.