ಸ್ನೇಹಿತರು ಈಗ ವಿರೋಧಿಗಳು; ಸಿಎಂ ವಿಜಯ್, ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್
ಒಂದು ಕಾಲದಲ್ಲಿ ಸ್ನೇಹಿತರಾಗಿದ್ದವರು ಈಗ ತಮಿಳುನಾಡಿನ ರಾಜಕೀಯದಲ್ಲಿ ವಿರೋಧಿಗಳಾಗಿದ್ದಾರೆ. ಬಹಳ ಕಾಲದಿಂದ ಸ್ನೇಹಿತರಾಗಿದ್ದ ನಟ ವಿಜಯ್ ಮತ್ತು ಉದಯನಿಧಿ ಸ್ಟಾಲಿನ್ ಕೆಲವು ವರ್ಷಗಳ ಹಿಂದೆ ಬೇರ್ಪಟ್ಟಿದ್ದರು. ಇದೀಗ ರಾಜಕೀಯ ಅಂಗಣದಲ್ಲಿ ಅವರಿಬ್ಬರೂ ಪರಸ್ಪರರ ವಿರೋಧಿಗಳಾಗಿದ್ದಾರೆ.
ಸಂಗ್ರಹ ಚಿತ್ರ -
ಚೆನ್ನೈ: ತಮಿಳುನಾಡು (Tamil Nadu) ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ಒಂದು ಕಾಲದ ಸ್ನೇಹಿತರು ಈಗ ಪರಸ್ಪರರ ವಿರೋಧಿಗಳಾಗಿರುವುದರಿಂದ ತಮಿಳುನಾಡಿನ ವಿಧಾನ ಸಭೆ ಸಾಕಷ್ಟು ಅಚ್ಚರಿಯ ಕ್ಷಣಗಳಿಗೆ ಸಾಕ್ಷಿಯಾಗಬಹುದು. ನಟ, ತಮಿಳಗ ವೆಟ್ರಿ ಕಳಗಂ (tamilaga vettri kazhagam party) ಪಕ್ಷದ ಮುಖ್ಯಸ್ಥ ವಿಜಯ್ (vijay) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಒಂದು ಕಾಲದಲ್ಲಿ ಸ್ನೇಹಿತರಾಗಿದ್ದರು. ಕೆಲವು ವರ್ಷಗಳ ಹಿಂದೆ ಬೇರ್ಪಟ್ಟಿರುವ ಅವರಿಬ್ಬರು ಇದೀಗ ವಿಧಾಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರಾಗಿದ್ದಾರೆ.
ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಉದಯನಿಧಿ ಸ್ಟಾಲಿನ್ ಅವರನ್ನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದೆ. ಇನ್ನು ಮುಂದೆ ಅವರು ತಮ್ಮ ಸ್ನೇಹಿತ ವಿಜಯ್ ಅವರನ್ನು ವಿಧಾನ ಸಭೆಯಲ್ಲಿ ಎದುರಿಸಬೇಕಾಗುತ್ತದೆ. ಯಾಕೆಂದರೆ ಸಿ. ಜೋಸೆಫ್ ವಿಜಯ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.
ಅವಮಾನ ಎದುರಿಸಿದ ಜಾಗದಲ್ಲೇ ಸನ್ಮಾನ ಪಡೆದ ಸಿಎಂ ವಿಜಯ್; 13 ವರ್ಷಗಳ ಹಿಂದೆ ದಳಪತಿಗೆ ಮುಜುಗರಪಡಿಸಿದ್ದ ಜಯಲಲಿತಾ!
ಉದಯ್ ನಿಧಿ ಸ್ಟಾಲಿನ್ ಅವರು ತಮ್ಮ ಸ್ನೇಹಿತ, ರಾಜಕೀಯದಲ್ಲಿ ಎದುರಾಳಿ ಆಗಿರುವ ಸಿ. ಜೋಸೆಫ್ ವಿಜಯ್ ಅವರ ವಿರುದ್ಧ ಟೀಕೆಗಳನ್ನು ಮಾಡಬೇಕಾಗಬಹುದು, ಅವರ ನಿರ್ಧಾರಗಳನ್ನು ಪ್ರಶ್ನಿಸಬೇಕಾಗಬಹುದು. ವಿರೋಧ ಪಕ್ಷದ ನಾಯಕನಾಗಿ ಅವರು ತಮ್ಮ ಸ್ನೇಹಿತನ ವಿರುದ್ಧ ಮಾತನಾಡಬೇಕಾಗಬಹುದು.
ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಉದಯನಿಧಿ ಸ್ಟಾಲಿನ್ ಅವರನ್ನು ಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದೆ. ಮಾಜಿ ಸಚಿವರಾದ ಕೆ.ಎನ್. ನೆಹರು ಉಪನಾಯಕರಾಗಿದ್ದು, ಇ.ವಿ. ವೇಲು ಅವರು ಸಚೇತಕರಾಗಿದ್ದಾರೆ. ಉದಯನಿಧಿ ಸ್ಟಾಲಿನ್ ಅವರು ಡಿಎಂಕೆ ನಾಯಕನಾಗಿರುವುದು ಡಿಎಂಕೆ ನಾಯಕತ್ವದಲ್ಲಿ ಒಂದು ಪೀಳಿಗೆಯ ಬದಲಾವಣೆಯನ್ನು ಸೂಚಿಸುತ್ತದೆ. ಇದು ಮುಂದಿನ ದಿನಗಳಲ್ಲಿ ಪಕ್ಷದ ಉತ್ತರಾಧಿಕಾರಿಯಾಗುವ ಸುಳಿವು ಕೊಟ್ಟಿದೆ.
ಚೆಪಾಕ್-ತಿರುವಲ್ಲಿಕೇಣಿ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವ ಉದಯ್ ಮತ್ತು ವಿಜಯ್ ಅವರು ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರು ಆಗಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೇ ಅವರು ಬೇರ್ಪಟ್ಟರು. ವಿರೋಧ ಪಕ್ಷದ ನಾಯಕರಾಗಿ ಉದಯ್ ಅವರ ನೇಮಕಕ್ಕೆ ವಿರೋಧಗಳಿದ್ದವು. ಈ ಸ್ಥಾನವನ್ನು ಪಕ್ಷದ ಹಿರಿಯರಿಗೆ ನೀಡಬೇಕು ಎನ್ನುವ ಒತ್ತಾಯವೂ ಇತ್ತು. ಆದರೆ ಡಿಎಂಕೆ ವಿಜಯ್ ಎದುರು ಪಕ್ಷದ ಕಿರಿಯ ನಾಯಕನಿಗೆ ಮಣೆ ಹಾಕಿದೆ.
ಏಳು ವರ್ಷಗಳಲ್ಲಿ ಉದಯ್ ನಿಧಿ ಸ್ಟಾಲಿನ್ ಅವರು ಪಕ್ಷದಲ್ಲಿ ಹಲವು ಉನ್ನತ ಸ್ಥಾನವನ್ನು ಪಡೆದಿದ್ದಾರೆ. 2019 ರಲ್ಲಿ ಯುವ ವಿಭಾಗದ ಕಾರ್ಯದರ್ಶಿಯಾಗಿ ನೇಮಕಗೊಂಡ ಅವರು 2021 ರಲ್ಲಿ ಶಾಸಕರಾಗಿ ಆಯ್ಕೆಯಾದರು. 2022 ರಲ್ಲಿ ಸಚಿವರಾಗಿದ್ದು, 2024 ರಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು.