Year Ender 2025: ಈ ವರ್ಷದಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದ ಹೊಸಬರು
ವರ್ಷಾಂತ್ಯದಲ್ಲಿ ಈಗ ನಾವಿದ್ದೇವೆ. ರಾಜಕೀಯದಲ್ಲಿ ಈ ಬಾರಿ ಎಲ್ಲರ ಗಮನ ಸೆಳೆದಿದ್ದು ಬಿಹಾರ ವಿಧಾನ ಸಭಾ ಚುನಾವಣೆ. ಇದರಲ್ಲಿ ಎನ್ ಡಿಎ ಭಾರಿ ಪ್ರಮಾಣದ ಗೆಲುವು ಸಾಧಿಸಿದ್ದು ಒಂದು ದಾಖಲೆಯಾದರೆ ಈ ವರ್ಷದಲ್ಲಿ ಹೊಸದಾಗಿ ಹಲವಾರು ಮಂದಿ ರಾಜಕೀಯಕ್ಕೆ ಪ್ರವೇಶ ಪಡೆದಿದ್ದಾರೆ.
(ಸಂಗ್ರಹ ಚಿತ್ರ) -
ನವದೆಹಲಿ: ರಾಜಕೀಯ ವಲಯದಲ್ಲಿ ಈ ವರ್ಷ (Year Ender 2025) ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲಿ ಮುಖ್ಯವಾಗಿ ಉಪರಾಷ್ಟ್ರಪತಿಯಾಗಿದ್ದ (Vice President) ಜಗದೀಪ್ ಧಂಖರ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ (C.P. Radhakrishnan) ಅವರು ಆಯ್ಕೆಯಾಗಿದ್ದಾರೆ. ಇವರಷ್ಟೇ ಅಲ್ಲ ಇನ್ನು ಹಲವಾರು ಹೊಸಬರು ರಾಜಕೀಯಕ್ಕೆ ಪ್ರವೇಶ ಪಡೆದಿದ್ದಾರೆ. ಅವರಲ್ಲಿ ಕೆಲವರು ಗೆದ್ದರೆ ಇನ್ನು ಕೆಲವರು ಸೋತಿದ್ದಾರೆ. ಆದರೂ ಅವರ ಹೆಸರು ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿರುವಂತೆ ಮಾಡಿದೆ.
ಕಳೆದ ಸೆಪ್ಟೆಂಬರ್ ಆರಂಭದಲ್ಲಿ ದೇಶದ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಅವರು ಆಯ್ಕೆಯಾದರು. ಮಹಾರಾಷ್ಟ್ರ ಮಾಜಿ ರಾಜ್ಯಪಾಲರಾಗಿದ್ದ ಸಿ.ಪಿ. ರಾಧಾಕೃಷ್ಣನ್ ಅವರು ಮೊದಲ ಸುತ್ತಿನಲ್ಲೇ 452 ಮತಗಳನ್ನು ಗಳಿಸಿದ್ದರು. ಈ ವರ್ಷದ ರಾಜಕೀಯದಲ್ಲಿ ಇದೊಂದು ದೊಡ್ಡ ಸುದ್ದಿಯಾಗಿದ್ದರೆ ಇನ್ನೊಂದು ಬಿಹಾರ ವಿಧಾನ ಸಭಾ ಚುನಾವಣೆ. ಇಲ್ಲಿ ಎನ್ ಡಿಎ ಭಾರಿ ಬಹುದೊಡ್ಡ ಪ್ರಮಾಣದಲ್ಲಿ ಗೆಲುವನ್ನು ದಾಖಲಿಸಿತ್ತು. ಇದು ಈ ವರ್ಷದ ರಾಜಕೀಯದಲ್ಲಿ ಮಹತ್ವ ಬೆಳವಣಿಗೆಯಾದರೆ ರಾಜ್ಯಸಭಾ, ರಾಜ್ಯ ವಿಧಾನಸಭಾ, ಉಪ ಚುನಾವಣೆಗಳು ನಡೆದು ಅನೇಕರು ರಾಜಕೀಯಕ್ಕೆ ಹೊಸದಾಗಿ ಪ್ರವೇಶ ಮಾಡಿದ್ದಾರೆ.
ಮೈಥಿಲಿ ಠಾಕೂರ್
ಬಿಹಾರ ವಿಧಾನಸಭೆ ಪ್ರವೇಶಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಪ್ರಿಯ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರು ಅಲಿನಗರ ಸ್ಥಾನದಿಂದ ಬಿಜೆಪಿ ಟಿಕೆಟ್ ಪಡೆದು ಗೆದ್ದಿದ್ದಾರೆ. ಶಾಸ್ತ್ರೀಯ ಮತ್ತು ಜಾನಪದ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು 25ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರ ಬಳಿಕ ಬಿಜೆಪಿಯ ಎರಡನೇ ಕಿರಿಯ ಶಾಸಕರಾಗಿ ಇವರು ಗುರುತಿಸಿಕೊಂಡಿದ್ದಾರೆ. ಸುಷ್ಮಾ ಅವರು 1977ರಲ್ಲಿ ಹರಿಯಾಣದಿಂದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದಾಗ ಅವರಿಗೆ 25 ವರ್ಷವಾಗಿತ್ತು.
ಖೇಸರಿ ಲಾಲ್ ಯಾದವ್
ಪ್ರಸಿದ್ಧ ಭೋಜ್‌ಪುರಿ ನಟ ಮತ್ತು ಗಾಯಕನಾಗಿರುವ ಶತ್ರುಘ್ನ ಯಾದವ್ ಅವರನ್ನು ಖೇಸರಿ ಲಾಲ್ ಯಾದವ್ ಎಂದು ಕೂಡ ಕರೆಯಲಾಗುತ್ತದೆ. ಆರ್‌ಜೆಡಿಯಿಂದ ಟಿಕೆಟ್ ಪಡೆದು ಚುನಾವಣಾ ಕಣಕ್ಕೆ ಇಳಿದು ಹಿನ್ನಡೆ ಅನುಭವಿಸಿದರು. ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಛಪ್ರಾ ಸ್ಥಾನದಲ್ಲೂ ಸೋಲು ಅನುಭವಿಸಿದರು.
ಹರೀಶ್ ಖುರಾನಾ
ದೆಹಲಿಯ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರ ಪುತ್ರನಾಗಿರುವ ಹರೀಶ್ ಖುರಾನಾ ಅವರು ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಭಾರತೀಯ ಜನತಾ ಪಕ್ಷದಿಂದ ಮೋತಿ ನಗರ ಕ್ಷೇತ್ರದಲ್ಲಿ ತಮ್ಮ ಚೊಚ್ಚಲ ಗೆಲುವನ್ನು ದಾಖಲಿಸಿದರು. ಇವರು ಕಾಲೇಜು ದಿನಗಳಲ್ಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.
ಜೆಪಿ ಸಿಂಗ್
ಹಿಮಾಚಲ ಪ್ರದೇಶದ 2000 ಬ್ಯಾಚ್ ಐಪಿಎಸ್ ಅಧಿಕಾರಿ ಮತ್ತು ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆಗಿರುವ ಜೆಪಿ ಸಿಂಗ್ ಅವರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚಪ್ರಾ ಕ್ಷೇತ್ರದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಎಡಿಜಿಪಿ ಹುದ್ದೆಯಿಂದ 2027ರಲ್ಲಿ ನಿವೃತ್ತಿ ಹೊಂದಬೇಕಾಗಿದ್ದ ಇವರು ಇದಕ್ಕೂ ಮೊದಲೇ ಸ್ವಯಂಪ್ರೇರಿತ ನಿವೃತ್ತಿ ಪಡೆದು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಸೌರಭ್ ಥಾಪ್ಲಿಯಾಲ್
ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಸೌರಭ್ ಥಾಪ್ಲಿಯಾಲ್ 2025ರ ಜನವರಿಯಲ್ಲಿ ಡೆಹ್ರಾಡೂನ್‌ನಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಗೆದ್ದು ರಾಜಕೀಯ ಪ್ರವೇಶ ಪಡೆದರು. ಇವರು ಡೆಹ್ರಾಡೂನ್‌ನ ಪುರಸಭೆ ಚುನಾವಣೆಯಲ್ಲಿ ಅತಿದೊಡ್ಡ ಪ್ರಮಾಣದ ಅಂತರದಲ್ಲಿ ಗೆಲುವು ದಾಖಲಿಸಿರುವುದು ಐತಿಹಾಸಿಕ ಸಾಧನೆ ಎಂದು ಗುರುತಿಸಲಾಗಿದೆ.