ಹೊಸದಿಲ್ಲಿ: ಇಂದಿಗೆ ಸರಿಯಾಗಿ 6 ವರ್ಷಗಳ ಹಿಂದೆ ಪ್ರೇಮಿಗಳ ದಿನಾಚರಣೆ ಸಂಭ್ರಮದಲ್ಲಿ ಮುಳುಗಿದ್ದ ಇಡೀ ದೇಶಕ್ಕೆ ಬರ ಸಿಡಿಲಂತೆ ಬಂದು ಅಪ್ಪಳಿಸಿದ್ದು ಪುಲ್ವಾಮಾ ದಾಳಿ (Pulwama Attack)ಯ ಸುದ್ದಿ. ಉಗ್ರರ ಹಟ್ಟಹಾಸಕ್ಕೆ, ನೀಚ ಬುದ್ಧಿಗೆ, ಕುತಂತ್ರದ ಫಲವಾಗಿ ದೇಶಕ್ಕಾಗಿ ತಮ್ಮನ್ನು ಮುಡುಪಾಗಿಸಿಕೊಂಡಿದ್ದ ನಮ್ಮ ಹೆಮ್ಮೆಯ ಸೈನಿಕರು ಉಸಿರು ಚೆಲ್ಲಿದ್ದರು. ಹೌದು, 2019ರ ಫೆಬ್ರವರಿ 14ರ ಅಪರಾಹ್ನ 3:15ರ ವೇಳೆಗೆ ಉಗ್ರರ ಎಸಗಿದ ದುಷ್ಕೃತ್ಯಕ್ಕೆ ಭಾರತೀಯ ಸೈನಿಕರನ್ನು ಪ್ರಾಣ ತೆತ್ತಿದ್ದರು. ಎಂದೆಂದಿಗೂ ಮರೆಯದ ಭೀಕರ ದಿನವಾಗಿ ಈ ಘಟನೆ ಇತಿಹಾಸ ಪುಟ ಸೇರಿದ್ದರೆ, ಮಗನನ್ನೋ, ಗಂಡನನ್ನೋ, ಅಣ್ಣ-ತಮ್ಮನನ್ನೋ ಕಳೆದುಕೊಂಡು ಕುಟುಂಬಗಳು ಶೋಕದಲ್ಲಿ ಮುಳುಗಿತು (Black Day). ಮಧ್ಯಾಹ್ನತನಕ ಪ್ರೇಮಿಗಳ ದಿನಾಚರಣೆಯಲ್ಲಿ ಮಿಂದೆದ್ದಿದ್ದ ಜನರು ಸಂಜೆ ವೇಳೆಗೆ ಕಣ್ಣೀರಲ್ಲಿ ಕೈತೊಳೆದರು.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾ ಬಳಿಯ ಅವಾಂತಿಪೋರಾ ಸಮೀಪ ರಾ.ಹೆ. 44ರಲ್ಲಿ 78 ಸೇನಾ ವಾಹನಗಳು ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು ಸಾಲಾಗಿ ಸಾಗುತ್ತಿದ್ದವು. ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯೊಂದು ನೇರವಾಗಿ ಸೇನಾ ವಾಹನಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಕ್ಷಣ ಮಾತ್ರದಲ್ಲೇ 76ನೇ ಬೆಟಾಲಿಯನ್‌ನ 40 ಯೋಧರು ಹುತಾತ್ಮರಾದರು. 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಮೂಲಕ ಫೆ. 14 'ಪ್ರೇಮಿಗಳ ದಿನ'ವಲ್ಲ ಭಾರತೀಯರ ಪಾಲಿಗೆ 'ಕರಾಳ ದಿನ' ವಾಯಿತು.
ಗುರುತೇ ಸಿಗದಂತಾದ ವಾಹನ
ಸ್ಫೊಟದ ತೀವ್ರತೆ ಎಷ್ಟು ತೀವ್ರವಾಗಿತ್ತೆಂದರೆ, ದಾಳಿಗೆ ತುತ್ತಾದ ವಾಹನವು ಸಂಪೂರ್ಣ ಸಿಡಿದು, ಸುಟ್ಟು ಕರಕಲಾಗಿದ್ದು ಲೋಹದ ಮುದ್ದೆಯಂತಾಗಿತ್ತು. ಗುರುತೇ ಸಿಗದ ಮಟ್ಟಕ್ಕೆ ವಿರೂಪಗೊಂಡಿತ್ತು. ವಾಹನದ ಹಲವು ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ದಾಳಿಕೋರ ಯಾರು?
ದಾಳಿಕೋರನನ್ನು ಜೈಷೆ ಸಂಘಟನೆಯ ಸ್ಥಳೀಯ ಉಗ್ರ ಆದಿಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಪುಲ್ವಾಮಾ ಜಿಲ್ಲೆಯ ಕಾಕಪೋರಾ ಮೂಲದ ಈತ 2018ರಲ್ಲಿ ಜೈಷೆ ಸಂಘಟನೆ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದರು.
ಸ್ಫೋಟದ ಬಳಿಕ ಗುಂಡು, ಗ್ರನೇಡ್ ದಾಳಿ?
ವಾಹನ ಸ್ಫೋಟದ ಬಳಿಕ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡು ಮತ್ತು ಗ್ರನೇಡ್ ದಾಳಿಯನ್ನೂ ನಡೆಸಿದ್ದರು. ಸ್ಫೊಟದ ಬೆನ್ನಲ್ಲೇ ಗುಂಡಿನ ಮೊರೆತ ಮತ್ತು ಗ್ರನೇಡ್ ಸ್ಫೋಟದ ಸದ್ದು ಕೇಳಿಸಿತು ಎಂದು ಪೊಲೀಸರು ಹೇಳಿದ್ದರು.
ಈ ಸುದ್ದಿಯನ್ನು ಓದಿ: Viral Video: ಕಾರಿಗೆ ಒಂದು ರೂಪಾಯಿ ನಾಣ್ಯದ ಸಿಂಗಾರ! ಯುವಕನ ಕ್ರಿಯಾಶೀಲ ಕಲೆಗೆ ನೆಟ್ಟಿಗರು ಫಿದಾ..
ಎದುರೇಟು ನೀಡಿದ ಭಾರತ
ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಭಾರತ ಸಂಕಲ್ಪ ಮಾಡಿತು. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಬಾಲಾಕೋಟ್ನಲ್ಲಿರುವ ಜೈಷ್ ಉಗ್ರಗಾಮಿಗಳ ತಾಣಗಳ ಮೇಲೆ ಪುಲ್ವಾಮಾ ದಾಳಿಯ 12 ದಿನಗಳ ನಂತರ, ಅಂದ್ರೆ ಫೆ. 26ರಂದು ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿತು. ಪರಿಣಾಮ ಅಪಾರ ಸಂಖ್ಯೆಯಲ್ಲಿ ಜೈಶ್ ಜೈಷ್-ಎ-ಮೊಹಮ್ಮದ್ ಸಂಘಟನೆಯ 300ಕ್ಕೂ ಹೆಚ್ಚು ಉಗ್ರಗಾಮಿಗಳು ಸತ್ತಿದ್ದಾರೆ ಎಂದು ಭಾರತ ಹೇಳಿತು. ಆದರೆ ಪಾಕಿಸ್ತಾನ ಮಾತ್ರ ಬಾಲಾಕೋಟ್ ದಾಳಿಯಲ್ಲಿ ಯಾರೊಬ್ಬರು ಮೃತಪಟ್ಟಿಲ್ಲ ಎಂದು ವಾದಿಸಿತ್ತು.
ಇನ್ನು ಭೀಕರ ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಯಿತು. ಪುಲ್ವಾಮಾ ದಾಳಿ ನಡೆಯುತ್ತಲೇ ಪಾಕ್ನ ಉನ್ನತ ರಾಯಭಾರಿಯನ್ನು ಕರೆಸಿಕೊಂಡ ಭಾರತ ಪ್ರಬಲ ಪ್ರತಿಭಟನೆಯನ್ನು ದಾಖಲಿಸಿತು. ದಾಳಿಗೆ ಪ್ರತಿಯಾಗಿ ಕಾರ್ಯಾಚರಣೆ ನಡೆಸುವ ಪೂರ್ಣ ಸ್ವಾತಂತ್ರ್ಯವನ್ನು ಭದ್ರತಾ ಪಡೆಗಳಿಗೆ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಉಗ್ರರ ಅಮಾನುಷ ಕೃತ್ಯಕ್ಕೆ ಇಡೀ ದೇಶದಲ್ಲಿ ಆಕ್ರೋಶದ ಅಲೆ ಎದ್ದಿತು.
ಇಷ್ಟಾದರೂ ದಾಳಿ ನಡೆದು 6 ವರ್ಷ ಕಳೆದರೂ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸೇರಿದಂತೆ ಪ್ರಮುಖ ಸಂಚುಕೋರರು ಈವರೆಗೂ ಸಿಕ್ಕಿಲ್ಲ ಎಂಬುದೇ ವಿಷಾದನೀಯ.