ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಷೇಧಿತ ಜಮಾತ್-ಎ-ಇಸ್ಲಾಮಿ ಸಂಘಟನೆ ವಿರುದ್ಧ ʼಸರ್ಜಿಕಲ್‌ ಸ್ಟ್ರೈಕ್‌ʼ; ಕಾಶ್ಮೀರದಾದ್ಯಂತ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ವ್ಯಾಪಕ ದಾಳಿ

ಜಮ್ಮು-ಕಾಶ್ಮೀರದಲ್ಲಿ ನಿಷೇಧಿತ ಜಮಾತ್-ಎ-ಇಸ್ಲಾಮಿ ಸಂಘಟನೆಯನ್ನು ಪುನಶ್ಚೇತನಗೊಳಿಸುವ ಹಾಗೂ ಪ್ರತ್ಯೇಕತಾವಾದವನ್ನು ಉತ್ತೇಜಿಸುವ ಸಂಚು ಆರೋಪದ ಹಿನ್ನೆಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರ ಸೇರಿ ಅನೇಕ ಕಡೆಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಭಯೋತ್ಪಾದನೆಗೆ ಧನಸಹಾಯ ಹಾಗೂ ಉಗ್ರ ಜಾಲಗಳ ಸಂಪರ್ಕದ ಕುರಿತು ತನಿಖೆ ಮುಂದುವರಿದಿದೆ.

ಸಾಂದರ್ಭಿಕ ಚಿತ್ರ

ಶ್ರೀನಗರ, ಮೇ 25: ಭಯೋತ್ಪಾದನೆ ಮತ್ತು ಭೂಗತ ಜಾಲಗಳ ವಿರುದ್ಧದ ತೀವ್ರ ಕಾರ್ಯಾಚರಣೆಯ ಭಾಗವಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ನಿಷೇಧಿತ 'ಜಮಾತ್-ಎ-ಇಸ್ಲಾಮಿ' (Jamaat-e-Islami) ಸಂಘಟನೆಯನ್ನು ಪುನಶ್ಚೇತನಗೊಳಿಸುವ ಮತ್ತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರತ್ಯೇಕತಾವಾದವನ್ನು ಉತ್ತೇಜಿಸುವ ಸಂಚನ್ನು ಭೇದಿಸಲು ಸೋಮವಾರ ಕಾಶ್ಮೀರದಾದ್ಯಂತ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.

ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯ ನೆರವಿನೊಂದಿಗೆ ಎನ್‌ಐಎ ತಂಡಗಳು ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿವೆ. ನಿಷೇಧಿತ ಜಮಾತ್-ಎ-ಇಸ್ಲಾಮಿ ಸಂಘಟನೆಯ ಕಾರ್ಯಕರ್ತರು, ಭಯೋತ್ಪಾದನೆಗೆ ಧನಸಹಾಯ ನೀಡುವ ಮಾರ್ಗಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಶ್ರೀನಗರದ ಲಾಲ್ ಬಜಾರ್ ಪ್ರದೇಶದ ಹಲವು ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹಿಬ್ ಪ್ರದೇಶದಲ್ಲಿರುವ 'ಸಿರಾಜ್-ಉಲ್-ಉಲೂಮ್' ಸಂಸ್ಥೆಯ ಮೇಲೆ ಪ್ರಮುಖವಾಗಿ ಗಮನ ಹರಿಸಲಾಗಿತ್ತು.

ಉಗ್ರಗಾಮಿ ಸದ್ಧಾಂತಗಳನ್ನು ಹರಡುವುದು, ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವುದು ಮತ್ತು ನಿಷೇಧಿತ ಸಂಘಟನೆಗಳಿಗೆ ಜನರನ್ನು ನೇಮಕ ಮಾಡುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇಲೆ ಗೃಹ ಇಲಾಖೆಯು 2022ರಲ್ಲಿಯೇ ಸಿರಾಜ್-ಉಲ್-ಉಲೂಮ್ ಸಂಸ್ಥೆಯನ್ನು ಮುಚ್ಚಲು ಆದೇಶಿಸಿತ್ತು. ಇದರ ಮುಂದುವರಿದ ಭಾಗವಾಗಿ, ಚಿತ್ರಗಾಮ್‌ನ ಮುಲು ಪ್ರದೇಶದಲ್ಲಿರುವ ಈ ಸಂಸ್ಥೆಯ ಮಾಜಿ ಸಹವರ್ತಿ ಶಹಜಾದಾ ಎಂಬುವವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.

ಮಸ್ಕತ್‌ನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಭಾರಿ ಹಾನಿ: ಕೇರಳಂಗೆ ಹೊರಟಿದ್ದ ಪ್ರಯಾಣಿಕರು ಕೂದಲೆಳೆ ಅಂತರದಿಂದ ಪಾರು

ಭಾರತ ವಿರೋಧಿ ಪ್ರಚಾರವನ್ನು ಉತ್ತೇಜಿಸಲು ಜಮಾತ್-ಎ-ಇಸ್ಲಾಮಿ ಜಾಲವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳ ಕುರಿತು ನಡೆಯುತ್ತಿರುವ ಭಯೋತ್ಪಾದನೆ ಸಂಬಂಧಿತ ತನಿಖೆಯ ಭಾಗವಾಗಿ ಈ ಶೋಧ ಕಾರ್ಯಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚೋದಿಸುವಲ್ಲಿ ಜಮಾತ್-ಎ-ಇಸ್ಲಾಮಿ ವಹಿಸಿದ್ದ ಪಾತ್ರವನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಫೆಬ್ರವರಿ 2019ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (UAPA) ಜಮಾತ್-ಎ-ಇಸ್ಲಾಮಿ ಜಮ್ಮು ಕಾಶ್ಮೀರ ಸಂಸ್ಥೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ ನಿಷೇಧಿಸಿತ್ತು.

ಈ ನಿಷೇಧವನ್ನು 2024ರ ಫೆಬ್ರವರಿಯಲ್ಲಿ ಮತ್ತೊಂದು ಐದು ವರ್ಷಗಳ ಅವಧಿಗೆ ವಿಸ್ತರಿಸಲಾಯಿತು. ಜಮಾತ್-ಎ-ಇಸ್ಲಾಮಿಯ ಚಟುವಟಿಕೆಗಳು ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿವೆ ಎಂದು ಕೇಂದ್ರ ಸರ್ಕಾರ ಗಮನಿಸಿತ್ತು. ಮುಸ್ಲಿಮರು ದಾನ ರೂಪದಲ್ಲಿ ನೀಡುವ ಕಡ್ಡಾಯ ಧಾರ್ಮಿಕ ಧನಸಹಾಯವಾದ 'ಜಕಾತ್' ಹಣವನ್ನು ಈ ಸಂಸ್ಥೆಯು ಭಯೋತ್ಪಾದಕ ಚಟುವಟಿಕೆಗಳಿಗೆ ದುರುಪಯೋಗಪಡಿಸಿಕೊಳ್ಳುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಸೋಮವಾರ ನಡೆದ ಈ ದಾಳಿ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಆರ್ಥಿಕ ಮತ್ತು ಸದ್ಧಾಂತಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಎನ್‌ಐಎ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.