ಮಸ್ಕತ್‌ನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಭಾರಿ ಹಾನಿ: ಕೇರಳಂಗೆ ಹೊರಟಿದ್ದ ಪ್ರಯಾಣಿಕರು ಕೂದಲೆಳೆ ಅಂತರದಿಂದ ಪಾರು
ಒಮಾನ್‌ನ ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ 737-800 ವಿಮಾನ ನಿಯಂತ್ರಣ ತಪ್ಪಿ ರನ್‌ವೇ ಬದಿಯ ಲೈಟ್ ಕಂಬಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭಾರಿ ಹಾನಿಯಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಒಮಾನ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಒಮಾನ್, ಮೇ 25: ಮೇ 15ರ ರಾತ್ರಿ ಒಮಾನ್ ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Muscat International Airport) ರನ್‌ವೇ ಮೇಲೆ ಟೇಕಾಫ್ ಆಗಲು ಯತ್ನಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಸಂಸ್ಥೆಗೆ ಸೇರಿದ ಬೋಯಿಂಗ್ 737-800 ವಿಮಾನವು ನಿಯಂತ್ರಣ ತಪ್ಪಿ ರನ್‌ವೇಯಿಂದ ಪಕ್ಕಕ್ಕೆ ಸರಿದು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಆ ಮೂಲಕ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಈ ಅಂತಾರಾಷ್ಟ್ರೀಯ ವಿಮಾನವು ಒಮಾನ್‌ನ ಮಸ್ಕತ್ ನಗರದಿಂದ ಕೇರಳಂನ ಕಣ್ಣೂರಿಗೆ ಆಗಮಿಸುತ್ತಿತ್ತು. ಸ್ಥಳೀಯ ಕಾಲಮಾನ ರಾತ್ರಿ ಸುಮಾರು 9:10ಕ್ಕೆ ವಿಮಾನವು ಟ್ಯಾಕ್ಸಿವೇ E7ರಿಂದ ರನ್‌ವೇ 26Lಗೆ ಪ್ರವೇಶಿಸಿದಾಗ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ಟೇಕಾಫ್‌ಗಾಗಿ ವಿಮಾನದ ವೇಗವನ್ನು ತೀವ್ರವಾಗಿ ಹೆಚ್ಚಿಸುತ್ತಿದ್ದಾಗ, ಅದು ರನ್‌ವೇ ಬದಿಯಲ್ಲಿದ್ದ ವಿದ್ಯುತ್ ಲೈಟ್ ಕಂಬಗಳಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಹಲವು ದೀಪಗಳು ಒಡೆದುಹೋಗಿದ್ದು, ವಿಮಾನದ ಮುಂಭಾಗದ ಚಕ್ರದ ಭಾಗಕ್ಕೆ (ನೋಸ್ ಗೇರ್) ತೀವ್ರ ಸ್ವರೂಪದ ಹಾನಿಯಾಗಿದೆ.
ಮಸ್ಕತ್‌ನಲ್ಲಿ ಭಾರತದ ವಿಮಾನಕ್ಕೆ ಹಾನಿ:
The AIX Oman incident:
— manisha singhal (@manishasinghal) May 25, 2026
The chatter puts it as QTA flight and hence…. The chatter also puts it as a red-eye and expat combo .. but none has confirmed … Mails are sent to all pilots with details and the ‘boss’ apprised! Apparently , not too stoked!
Aircraft disabled with…
ಈ ಸಮಯದಲ್ಲಿ ಕಾಕ್‌ಪಿಟ್‌ನಲ್ಲಿದ್ದ ಪೈಲಟ್‌ಗಳಿಗೆ ಅತ್ಯಂತ ಜೋರಾದ ಶಬ್ದ ಕೇಳಿಸಿದ್ದು, ತಕ್ಷಣವೇ ಅವರು ಎಚ್ಚೆತ್ತುಕೊಂಡು ಟೇಕಾಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಡಿಕ್ಕಿಯ ತೀವ್ರತೆಗೆ ವಿಮಾನದ ಹೈಡ್ರಾಲಿಕ್ ವ್ಯವಸ್ಥೆ ಸೋರಿಕೆಯಾಗಿದ್ದು, ಚಕ್ರದ ಟೈರ್ ಸಂಪೂರ್ಣವಾಗಿ ಫ್ಲಾಟ್ ಆಗಿದೆ. ಎಂಜಿನ್ ಒಳಗೆ ಬಾಹ್ಯ ವಸ್ತುಗಳು ಸೇರಿದ ಕಾರಣ ಎರಡೂ ಎಂಜಿನ್‌ಗಳು ಸಂಪೂರ್ಣವಾಗಿ ಜಖಂಗೊಂಡಿವೆ. ತಕ್ಷಣವೇ ರನ್‌ವೇಯಲ್ಲಿದ್ದ ವಿಮಾನದಿಂದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಕರೆತರಲಾಯಿತು. ಘಟನೆಯ ನಂತರ ವಿಮಾನವು ಹಲವು ದಿನಗಳ ಕಾಲ ಮಸ್ಕತ್ ವಿಮಾನ ನಿಲ್ದಾಣದಲ್ಲೇ ಉಳಿದಿತ್ತು.
ಮರುದಿನ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಪರ್ಯಾಯ ಬೋಯಿಂಗ್ 737-800 ವಿಮಾನದ ಮೂಲಕ ಪ್ರಯಾಣಿಕರನ್ನು ಕಣ್ಣೂರಿಗೆ ತಲುಪಿಸಲಾಯಿತು. ಈ ಬದಲಿ ವಿಮಾನವು ನಿಗದಿತ ಸಮಯಕ್ಕಿಂತ 13 ಗಂಟೆಗಳಿಗೂ ಹೆಚ್ಚು ತಡವಾಗಿ ಹೊರಟಿತು.
ತಾಂತ್ರಿಕ ದೋಷದಿಂದ ಕೇಬಲ್ ಕಾರ್ ಸ್ಥಗಿತ; ಆಗಸದಲ್ಲೇ 300 ಪ್ರವಾಸಿಗರು ಬಾಕಿ
ಒಮಾನ್‌ನ ವಾಯು ಅಪಘಾತಗಳ ತನಿಖಾ ವಿಭಾಗವು ಇದನ್ನು ಗಂಭೀರ ಅಪಘಾತ ಎಂದು ವರ್ಗೀಕರಿಸಿದ್ದು, ಔಪಚಾರಿಕ ತನಿಖೆಯನ್ನು ಆರಂಭಿಸಿದೆ. ತಾವು ಒಮಾನ್ ಸಾರಿಗೆ ಸುರಕ್ಷತಾ ಬ್ಯೂರೋದೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿರುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಈ ಘಟನೆಯನ್ನು ಖಚಿತಪಡಿಸಿ ಪ್ರಕಟಣೆ ನೀಡಿದ್ದಾರೆ: "ಮೇ 15ರಂದು ಮಸ್ಕತ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ತನಿಖೆಗೆ ನಾವು ಒಮಾನ್ ಸಾರಿಗೆ ಸುರಕ್ಷತಾ ಬ್ಯೂರೋದೊಂದಿಗೆ ಸಹಕರಿಸುತ್ತಿದ್ದೇವೆ. ಮುಂದಿನ ವಿವರಗಳನ್ನು ಸಂಬಂಧಿತ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಬಹುದು. ಸಂತ್ರಸ್ತ ಅತಿಥಿಗಳ ಪ್ರಯಾಣಕ್ಕೆ ಪರ್ಯಾಯ ವಿಮಾನ ಮತ್ತು ವಸತಿ ಸೌಕರ್ಯವನ್ನು ಒದಗಿಸಲಾಗಿದೆ" ಎಂದಿದ್ದಾರೆ.