ಶ್ರೀನಗರ, ಮೇ 31: ಜಮ್ಮು ಮತ್ತು ಕಾಶ್ಮೀರದ (Jammu-Kashmir) ಕಿಶ್ತ್ವಾರ್ ಜಿಲ್ಲೆಯ ಪರ್ವತಗಳಲ್ಲಿ ವಾಸಿಸುವ ಜನರು ಸೂಕ್ತ ರಸ್ತೆ ಸಂಪರ್ಕಕ್ಕಾಗಿ ಹೆಣಗಾಡುತ್ತಿದ್ದಾರೆ. ರೋಗಿಗಳು, ವೃದ್ಧರು, ಗರ್ಭಿಣಿಯರ ಪಾಡಂತೂ ಇಲ್ಲಿ ಹೇಳತೀರದು. ಆಸ್ಪತ್ರೆ ತಲುಪಬೇಕೆಂದರೆ ಗ್ರಾಮಸ್ಥರು ಹೊತ್ತುಕೊಂಡು ಸಾಗಬೇಕಿದೆ. ಅದೇ ರೀತಿ ಹೆಗಲ ಮೇಲೆ ಹೊತ್ತುಕೊಂಡ ಗರ್ಭಿಣಿಯೊಬ್ಬರನ್ನು (Villagers Carry Pregnant Woman) ಸಾಗಿಸಲಾಯಿತು. ಆದರೆ, ಮಗು ಗರ್ಭದೊಳಗೆಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮಾರ್ವಾ ತಹಸಿಲ್‌ನ ಡೆಹರ್ನಾ ಗ್ರಾಮದ ಶೈಸ್ತಾ ಬೇಗಂ ಎಂಬುವವರು ತನ್ನ ಮಗುವನ್ನು ಕಳೆದುಕೊಂಡವರು. ಬೇಗಂಗೆ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿತು. ಗ್ರಾಮದಲ್ಲಿ ಸರಿಯಾದ ರಸ್ತೆ ಮತ್ತು ಆಂಬ್ಯುಲೆನ್ಸ್ ಇಲ್ಲದ ಕಾರಣ, ಅವರ ಕುಟುಂಬವು ರಸ್ತೆ ತಲುಪಲು ಕಲ್ಲಿನ ಹಾದಿಗಳಲ್ಲಿ ಕಿಲೋಮೀಟರ್‌ಗಳಷ್ಟು ದೂರ ಹೆಗಲ ಮೇಲೆ ಹೊತ್ತುಕೊಂಡು ಸಾಗಿತು.
ನವಪಾಚಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಲು ಅವರು ಒಂದು ವಾಹನವನ್ನು ಬಾಡಿಗೆಗೆ ಪಡೆದರು. ಆದರೆ ಸ್ತ್ರೀರೋಗ ತಜ್ಞರು ಕರ್ತವ್ಯದಲ್ಲಿ ಇರಲಿಲ್ಲ. ಮಾರ್ವಾದಲ್ಲಿ ಯಾವುದೇ ವಿಶೇಷ ಆರೈಕೆ ಇಲ್ಲದ ಕಾರಣ, ಕುಟುಂಬವು ಸಮಯ ವ್ಯರ್ಥ ಮಾಡದೆ, ಅನಂತ್‌ನಾಗ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ 120 ಕಿ.ಮೀ ಪ್ರಯಾಣವನ್ನು ಪ್ರಾರಂಭಿಸಿತು. ಈ ಮಾರ್ಗವು ಮಾರ್ಗನ್ ಪಾಸ್ ಮೂಲಕ ಹಾದುಹೋಗುತ್ತದೆ. ಅಷ್ಟೊತ್ತಿಗಾಗಲೇ ಬಹಳ ತಡವಾಗಿದ್ದರಿಂದ ತಾಯಿಯ ಗರ್ಭದೊಳಗೆ ಮಗು ಮೃತಪಟ್ಟಿದೆ.
ಇಲ್ಲಿ ಪ್ರತಿಯೊಂದು ಗರ್ಭಧಾರಣೆಯೂ ಸಾವಿನೊಂದಿಗೆ ಒಂದು ಹೋರಾಟವಾಗಿದೆ ಎಂದು ಅವರ ಪತಿ ನಾಸಿರ್ ಹುಸೇನ್ ಲೋನ್ ಬೇಸರ ವ್ಯಕ್ತಪಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರವಿದೆ, ಆದರೆ ವೈದ್ಯರು ಇರುವುದಿಲ್ಲ. ಹೆರಿಗೆ ನೋವು ಆರಂಭವಾದಾಗ, ನಾವು ನಮ್ಮ ಮಹಿಳೆಯರನ್ನು ಹೊತ್ತೊಯ್ಯುತ್ತೇವೆ. ಮಾರ್ವಾ ಕಣಿವೆಯಲ್ಲಿ 30,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಯಾವುದೇ ವಿಶೇಷ ಆರೈಕೆ ಇಲ್ಲ.
ನವಪಾಚಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ಹಲವಾರು ಹಳ್ಳಿಗಳಿಗೆ ಸೇವೆ ಸಲ್ಲಿಸುತ್ತದೆ. ಆದರೆ ಅಲ್ಲಿ ವೈದ್ಯರೇ ಇರುವುದಿಲ್ಲ ಅನ್ನೋದು ಸ್ಥಳೀಯರ ದೂರು. ಗರ್ಭಿಣಿಯರನ್ನು ಅಪಾಯಕಾರಿ ರಸ್ತೆಗಳಲ್ಲಿ 100 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿರುವ ಅನಂತನಾಗ್ ಅಥವಾ ಕಿಶ್ತ್ವಾರ್ ಪಟ್ಟಣಗಳಿಗೆ ಕರೆದೊಯ್ಯಲಾಗುತ್ತದೆ.
ಚಳಿಗಾಲದಲ್ಲಿ ಮಾರ್ಗನ್ ಪಾಸ್ ಭಾರಿ ಹಿಮಪಾತದಿಂದಾಗಿ ಮುಚ್ಚಲ್ಪಟ್ಟಾಗ ಈ ಬಿಕ್ಕಟ್ಟು ಇನ್ನಷ್ಟು ಹದಗೆಡುತ್ತದೆ. ಇದರಿಂದಾಗಿ ಕಣಿವೆಯು ತಿಂಗಳುಗಟ್ಟಲೆ ಸಂಪರ್ಕ ಕಡಿತಗೊಳ್ಳುತ್ತದೆ. ಸ್ತ್ರೀರೋಗ ತಜ್ಞರು ಮತ್ತು 24 ಗಂಟೆಗಳ ಆಂಬ್ಯುಲೆನ್ಸ್ ನೀಡುವಂತೆ ಮಾರ್ವಾ ಪಿಎಚ್‌ಸಿ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ನಾವು ಇನ್ನೂ ಎಷ್ಟು ತಾಯಂದಿರನ್ನು ಹೊತ್ತುಕೊಳ್ಳಬೇಕು? ನಾವು ಇನ್ನೂ ಎಷ್ಟು ಮಕ್ಕಳನ್ನು ಕಳೆದುಕೊಳ್ಳಬೇಕು? ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.