ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರವಾಸಿಗರ ಸುರಕ್ಷತೆಗಾಗಿ ಜಮ್ಮು ಕಾಶ್ಮೀರದಲ್ಲಿ ಹೊಸ ನಿಯಮ; ಕ್ಯುಆರ್ ಕೋಡ್ ಆಧಾರಿತ ವಿಶಿಷ್ಟ ಗುರುತಿನ ವ್ಯವಸ್ಥೆ ಪರಿಚಯಿಸಿದ ಅಧಿಕಾರಿಗಳು

Jammu and Kashmir: ಪ್ರವಾಸಿಗರ ಸುರಕ್ಷತೆಗಾಗಿ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಎಲ್ಲ ಪ್ರವಾಸೋದ್ಯಮ ಸೇವಾ ಪೂರೈಕೆದಾರರಿಗೆ ವಿಶಿಷ್ಟವಾದ ಕ್ಯುಆರ್ ಕೋಡ್ ಆಧಾರಿತ ಗುರುತಿನ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಈ ವ್ಯವಸ್ಥೆಯು ನಿಜವಾದ ಮತ್ತು ನೋಂದಾಯಿತ ಸೇವಾ ಪೂರೈಕೆದಾರರನ್ನು ಸುಲಭವಾಗಿ ಗುರುತಿಸಲು ಮತ್ತು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಹೊಸ ಕ್ರಮ

ಸಾಂದರ್ಭಿಕ ಚಿತ್ರ -

Priyanka P
Priyanka P Apr 19, 2026 2:55 PM

ಶ್ರೀನಗರ, ಏ. 19: ಕಳೆದ ವರ್ಷ ಲಷ್ಕರ್-ಎ-ತೈಬಾ ಭಯೋತ್ಪಾದಕರು ನಡೆಸಿದ ಮಾರಕ ದಾಳಿಯಿಂದ ನಲುಗಿಹೋದ ಜಮ್ಮು ಮತ್ತು ಕಾಶ್ಮೀರದ (Jammu-Kashmir) ಪಹಲ್ಗಾಮ್‌ನಲ್ಲಿ (Pahalgam attack) ಪ್ರವಾಸಿಗರ ಸುರಕ್ಷತೆಗಾಗಿ ಅಧಿಕಾರಿಗಳು ಹೊಸ ನಿಯಮ ಜಾರಿಗಳಿಸಿದ್ದಾರೆ. ಎಲ್ಲ ಪ್ರವಾಸೋದ್ಯಮ ಸೇವಾ ಪೂರೈಕೆದಾರರಿಗೆ ವಿಶಿಷ್ಟ ಕ್ಯುಆರ್ ಕೋಡ್ (QR code) ಆಧಾರಿತ ಗುರುತಿನ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.

ಈ ವ್ಯವಸ್ಥೆಯು ನಿಜವಾದ ಮತ್ತು ನೋಂದಾಯಿತ ಸೇವಾ ಪೂರೈಕೆದಾರರನ್ನು ಸುಲಭವಾಗಿ ಗುರುತಿಸಲು ಮತ್ತು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಕುದುರೆ ಸವಾರಿ ನಿರ್ವಾಹಕರು, ವ್ಯಾಪಾರಿಗಳು, ವ್ಯಾಪಾರ ಸಂಸ್ಥೆಗಳು ಮತ್ತು ಮಾರಾಟಗಾರರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ರಮವನ್ನು ಅಧಿಕಾರಿಗಳು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಿದ್ದಾರೆ. ಕಳೆದ ವರ್ಷದ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಿಂದ ಕಂಗೆಟ್ಟಿದ್ದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಭೇಟಿ ನೀಡುವವರ ವಿಶ್ವಾಸವನ್ನು ಪುನಃಸ್ಥಾಪಿಸಲು ಇದರಿಂದ ಸಹಾಯವಾಗಬಹುದು ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಮುಚ್ಚಲಾಗಿದ್ದ ಜಮ್ಮು-ಕಾಶ್ಮೀರದ ಪ್ರವಾಸಿ ತಾಣಗಳು ಮತ್ತೆ ಓಪನ್

ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಸ್ಥಳೀಯ ಕುದುರೆ ಸವಾರಿ ನಿರ್ವಾಹಕ ಮೃತಪಟ್ಟಿದ್ದಾರೆ. ಈ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದರ ನಂತರ ಭಾರತವು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿ, ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಿತ್ತು.

ಇನ್ನು ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, “ಪ್ರತಿಯೊಬ್ಬ ಸೇವಾ ಪೂರೈಕೆದಾರರನ್ನು ಪೊಲೀಸರು ಸರಿಯಾಗಿ ಪರಿಶೀಲಿಸಿದ್ದಾರೆ. ಅಧಿಕಾರಿಗಳಿಂದ ನೋಂದಣಿ ಮಾಡಲಾಗಿದೆ ಮತ್ತು ಪ್ರತಿಯೊಬ್ಬರಿಗೆ ವೈಯಕ್ತಿಕ ಮಾಹಿತಿ ಹಾಗೂ ಇತರ ವಿವರಗಳನ್ನು ಒಳಗೊಂಡಿರುವ ವಿಶಿಷ್ಟ ಕ್ಯುಆರ್ ಕೋಡ್ ನೀಡಲಾಗಿದೆ” ಎಂದು ಹೇಳಿದರು.

ಪ್ರವಾಸಿಗರು ತಮ್ಮ ಮೊಬೈಲ್ ಫೋನ್‌ ಮೂಲಕ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಸಂಬಂಧಪಟ್ಟ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ವಂಚನೆಯನ್ನು ತಡೆಯುವ ಮತ್ತು ಯಾವುದೇ ಅನಧಿಕೃತ ವ್ಯಕ್ತಿಗಳು ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸರಿಯಾದ ಮತ್ತು ನೋಂದಾಯಿತ ಗುರುತಿನ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಪೂರೈಕೆದಾರರನ್ನು ಗುರುತಿಸಲು ಮತ್ತು ಸಂದರ್ಶಕರು ಅಧಿಕೃತ ಸೇವಾ ಪೂರೈಕೆದಾರರೊಂದಿಗೆ ವ್ಯವಹರಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯನ್ನು ನಂಬುವ ಮೊದಲು, ಪ್ರವಾಸಿಗರು ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಆ ವ್ಯಕ್ತಿಯ ಬಗ್ಗೆ ವಿವರಗಳನ್ನು ಪರಿಶೀಲಿಸಬಹುದು ಎಂದು ಅವರು ಹೇಳಿದರು.

ಕ್ಯುಆರ್ ಕೋಡ್‌ಗಳು ಸೇವಾ ಪೂರೈಕೆದಾರರ ಹೆಸರು, ಪೋಷಕರು, ವಿವರವಾದ ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ನೋಂದಣಿ ಸಂಖ್ಯೆ, ಕಾರ್ಯಾಚರಣೆಯ ಮಾರ್ಗ ಮತ್ತು ಪೊಲೀಸ್ ಪರಿಶೀಲನೆಗೆ ಒಳಪಟ್ಟಿದ್ದಾರೆಯೇ ಎಂಬುದನ್ನು ಒಳಗೊಂಡಿರುತ್ತವೆ ಎಂದು ಅಧಿಕಾರಿಗಳು ವಿವರಿಸಿದರು.

ಬಗೆದಷ್ಟು ಬಯಲಾಗುತ್ತಿದೆ ಪಹಲ್ಗಾಮ್ ಉಗ್ರರ ಸತ್ಯ; ತನಿಖಾಧಿಕಾರಿಗಳು ಬಿಚ್ಚಿಟ್ಟ ಆ ಸತ್ಯವೇನು?

ಭದ್ರತೆ ಹೆಚ್ಚಳ

ಕಳೆದ ವರ್ಷದ ದಾಳಿಯ ನಂತರ ಒಟ್ಟಾರೆ ಭದ್ರತೆಯನ್ನು ಬಲಪಡಿಸಲಾಗಿದೆ. ಸೇವಾ ಪೂರೈಕೆದಾರರ ವಿಷಯದಲ್ಲಿ, ದಾಖಲೆ ಪರಿಶೀಲನೆಯ ನಂತರ ನಮಗೆ ಕ್ಯುಆರ್ ಕೋಡ್‌ಗಳನ್ನು ನೀಡಲಾಗಿದೆ. ನಮ್ಮ ಆಧಾರ್ ಸಂಖ್ಯೆಗಳನ್ನು ಸಹ ಲಿಂಕ್ ಮಾಡಲಾಗಿದೆ ಎಂದು ಸೇವಾ ಪೂರೈಕೆದಾರ ಗುಲಾಮ್ ಹಸನ್ ಹೇಳಿದರು.

ಪಹಲ್ಗಾಮ್‌ನಲ್ಲಿ ಕೆಲಸ ಮಾಡುವ ಎಲ್ಲ ಸೇವಾ ಪೂರೈಕೆದಾರರು, ಪೋನಿ-ರೈಡ್ ಆಪರೇಟರ್‌ಗಳು, ಛಾಯಾಗ್ರಾಹಕರು, ಮಾರಾಟಗಾರರು ಸೇರಿ ಸರಿಯಾದ ಪರಿಶೀಲನೆಯ ನಂತರ ಅವರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ವಿಶಿಷ್ಟ ಕ್ಯುಆರ್ ಕೋಡ್ ಅನ್ನು ನೀಡಲಾಗಿದೆ ಎಂದು ಅಧಿಕಾರಿ ಹೇಳಿದರು.

ಪ್ರವಾಸಿಗರು ಸೇವಾ ಪೂರೈಕೆದಾರರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದರಿಂದ ಅವರು ಸುರಕ್ಷಿತ ಭಾವನೆ ಹೊಂದುತ್ತಾರೆ. ಇದು ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆಯನ್ನು ಬಲಪಡಿಸುವ ಉತ್ತಮ ಉಪಕ್ರಮ ಎಂದು ಅವರು ಅಭಿಪ್ರಾಯಪಟ್ಟರು.