ನೋಯ್ಡಾ, ಸೆ.18: ಯುಪಿಐ ಪಾವತಿಗಳ (UPI Charges) ಮೇಲಿನ ಶುಲ್ಕಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ (Central government) ಇತ್ತೀಚಿನ ಕ್ರಮವನ್ನು ಹಿಂಪಡೆಯಬೇಕು ಎಂಬ ಒತ್ತಾಯಗಳು ದೇಶಾದ್ಯಂತ ಹೆಚ್ಚುತ್ತಿರುವ ಬೆನ್ನಲ್ಲೇ, ನೋಯ್ಡಾದ ವ್ಯಾಪಾರಿಗಳು ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ನಿಯಮಾವಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೆಚ್ಚುವರಿ ವೆಚ್ಚವು ಈಗಾಗಲೇ ಅತ್ಯಂತ ಕಡಿಮೆ ಇರುವ ತಮ್ಮ ಲಾಭದ ಪ್ರಮಾಣವನ್ನು ಮತ್ತಷ್ಟು ಕುಗ್ಗಿಸಬಹುದು ಹಾಗೂ ಕೆಲವು ವ್ಯವಹಾರಗಳು ಮತ್ತೆ ನಗದು ವಹಿವಾಟಿನತ್ತ ಪ್ರೇರೇಪಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಎಂಡಿಆರ್ ಅನ್ನು ಖರೀದಿದಾರರಿಗೆ ಅಥವಾ ಗ್ರಾಹಕರ ತಲೆ ಮೇಲೆ ಹಾಕಬಾರದು ಎಂಬ ನಿರ್ದೇಶನದ ಹೊರತಾಗಿಯೂ, ಹಲವಾರು ವ್ಯಾಪಾರಿಗಳು ವೆಚ್ಚವನ್ನು ತಾವೇ ಭರಿಸಬೇಕಾಗಬಹುದು ಅಥವಾ ಗ್ರಾಹಕರಿಂದ ವಸೂಲಿ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಬಹುದು ಎಂದು ಹೇಳಿದ್ದಾರೆ. ಅಕ್ಟೋಬರ್ 15 ರಿಂದ ಜಾರಿಗೆ ಬರಲಿರುವ ಪರಿಷ್ಕೃತ ನಿಯಮಾವಳಿಯ ಪ್ರಕಾರ, ವ್ಯಾಪಾರಿಗಳು ರೂ. 2000 ಕ್ಕಿಂತ ಹೆಚ್ಚಿನ ವ್ಯಾಪಾರ ನಡೆಯುವ ಯುಪಿಐ ವಹಿವಾಟುಗಳ ಮೇಲೆ ಶೇ. 0.4ರಷ್ಟು ಎಂಡಿಆರ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಈ ಶುಲ್ಕವು ಪ್ರತಿ ವಹಿವಾಟಿಗೆ ಗರಿಷ್ಠ ರೂ. 300ರ ಮಿತಿಗೆ ಒಳಪಟ್ಟಿರುತ್ತದೆ.
ಆದರೆ, ವ್ಯಕ್ತಿಗಳ ನಡುವೆ ನಡೆಯುವ ಹಣ ವರ್ಗಾವಣೆಗಳು ಎಂದಿನಂತೆ ಸಂಪೂರ್ಣ ಉಚಿತವಾಗಿರಲಿವೆ. ಹಾಗೆಯೇ, ರೂ. 2000 ವರೆಗಿನ ಪಾವತಿಗಳು ಮತ್ತು ಅರ್ಹ ಸಣ್ಣ ವ್ಯಾಪಾರಿಗಳಿಗಾಗಿ ಇರುವ ಶೂನ್ಯ-ಎಂಡಿಆರ್ ವ್ಯಾಪ್ತಿಗೆ ಒಳಪಡುವ ವಹಿವಾಟುಗಳು ಸಹ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮುಂದುವರಿಯಲಿವೆ.
ಎಂಡಿಆರ್ ಎನ್ನುವುದು ವ್ಯಾಪಾರಿಗಳ ಕಡೆಯಿಂದ ಪಾವತಿಸಬೇಕಾದ ಒಂದು ಸೇವಾ ಶುಲ್ಕವೇ ಹೊರತು, ಇದು ಸರ್ಕಾರವು ಸಾರ್ವಜನಿಕರಿಂದ ವಸೂಲಿ ಮಾಡುತ್ತಿರುವ ಯಾವುದೇ ರೀತಿಯ ತೆರಿಗೆಯಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಆದರೆ, ಸರ್ಕಾರದ ಈ ಹೊಸ ಕ್ರಮವು ಡಿಜಿಟಲ್ ಪಾವತಿಗಳನ್ನೇ ಹೆಚ್ಚಾಗಿ ಅವಲಂಬಿಸಿರುವ ವ್ಯವಹಾರಗಳಿಗೆ ಭಾರಿ ತೊಂದರೆಗಳನ್ನು ಉಂಟುಮಾಡಬಹುದು ಎಂಬ ಆತಂಕವನ್ನು ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ಶಾಪಿಂಗ್ ಪೈಪೋಟಿ ಮತ್ತು ಮಾರುಕಟ್ಟೆಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಈಗಾಗಲೇ ತಮ್ಮ ವ್ಯಾಪಾರವು ತೀವ್ರ ಆರ್ಥಿಕ ಒತ್ತಡದಲ್ಲಿದೆ ಎಂದು ಹಾರ್ಡ್‌ವೇರ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿ ವಹಿವಾಟು ನಡೆಸುವ ನೋಯ್ಡಾದ ವಿಕಾಸ್ ಜೈನ್ ಎಂಬ ವ್ಯಾಪಾರಿಯು ತಿಳಿಸಿದ್ದಾರೆ.
ಈ ಕ್ರಮವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದ್ದು, ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಕರೆ ನೀಡಿವೆ, ಆದರೆ, ಕೇಂದ್ರವು ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದೆ. ಅಲ್ಲದೆ, ವಿದೇಶಿ ಒತ್ತಡದ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಆರೋಪಗಳನ್ನು ತಿರಸ್ಕರಿಸಿದೆ.