ಯುಪಿಐ ಪಾವತಿಗೆ ಜಿಎಸ್‌ಟಿ ಎಂಬುದು ವದಂತಿ; ಹೊಸ ಶುಲ್ಕದ ಬಗ್ಗೆ ಸರ್ಕಾರದ ಸ್ಪಷ್ಟನೆ
2,000 ರು.ಗಳಿಗಿಂತ ಹೆಚ್ಚಿನ ಕೆಲವು ಯುಪಿಐ ವಹಿವಾಟುಗಳಿಗೆ ವ್ಯಾಪಾರಿ ರಿಯಾಯಿತಿ ದರ ಜಾರಿಗೆ ಬರಲಿದೆ. ಆದರೆ ಯುಪಿಐ ಪಾವತಿಸಿದ ಒಟ್ಟು ಮೊತ್ತದ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂಬುದು ವದಂತಿ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಹೊಸ ವ್ಯವಸ್ಥೆ ಅಕ್ಟೋಬರ್ 15ರಿಂದ ಜಾರಿಗೆ ಬರಲಿದ್ದು, ಈ ಶುಲ್ಕವನ್ನು ಗ್ರಾಹಕರಿಂದ ನೇರವಾಗಿ ವಸೂಲಿ ಮಾಡುವಂತಿಲ್ಲ.
ಸಾಂದರ್ಭಿಕ ಚಿತ್ರ -
ನವದೆಹಲಿ: ಎರಡು ಸಾವಿರ ರು. ಗಳಿಗಿಂತ ಹೆಚ್ಚಿನ ಕೆಲವು ಯುಪಿಐ ವಹಿವಾಟುಗಳಿಗೆ (UPI payments) ವ್ಯಾಪಾರಿ ರಿಯಾಯಿತಿ ದರ ಜಾರಿಗೆ ಬರಲಿದೆ ಎಂಬ ಘೋಷಣೆಯ ಬೆನ್ನಲ್ಲೇ, ಯುಪಿಐ ಪಾವತಿಗಳ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಯುಪಿಐ ಪಾವತಿ ಮೊತ್ತದ ಮೇಲೆ ಪ್ರತ್ಯೇಕ ಜಿಎಸ್‌ಟಿ (GST) ವಿಧಿಸಲಾಗುವುದಿಲ್ಲ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ಹೊಸ ವ್ಯವಸ್ಥೆಯು 2026ರ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. 2,000 ರು. ಗಳಿಗಿಂತ ಕಡಿಮೆ ಮೊತ್ತದ ಯುಪಿಐ ವಹಿವಾಟುಗಳಿಗೆ ಯಾವುದೇ ವ್ಯಾಪಾರಿ ರಿಯಾಯಿತಿ ದರ ಇರುವುದಿಲ್ಲ. 2,000 ರು. ಗಳಿಗಿಂತ ಹೆಚ್ಚಿನ ಹಣ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ಕೆಲವು ವಹಿವಾಟುಗಳಿಗೆ ಶೇಕಡಾ 0.4ರಷ್ಟು ವ್ಯಾಪಾರಿ ರಿಯಾಯಿತಿ ದರ ಅನ್ವಯವಾಗಲಿದೆ.
UPI: ಯುಪಿಐ ಶುಲ್ಕದ ಚರ್ಚೆ: ಸಣ್ಣ ವ್ಯಾಪಾರಿಗಳಲ್ಲಿ ಆತಂಕ
ಈ ಶುಲ್ಕವನ್ನು ಗ್ರಾಹಕರಿಂದ ನೇರವಾಗಿ ವಸೂಲಿ ಮಾಡುವಂತಿಲ್ಲ. ಉದಾಹರಣೆಗೆ, ಒಬ್ಬ ಗ್ರಾಹಕ 5,000 ರು. ಮೌಲ್ಯದ ವಸ್ತುವನ್ನು ಖರೀದಿಸಿ ಯುಪಿಐ ಮೂಲಕ ಹಣ ಪಾವತಿಸಿದರೆ, ವ್ಯಾಪಾರಿ ಹೆಚ್ಚುವರಿಯಾಗಿ 20 ರು ಶುಲ್ಕವನ್ನು ಗ್ರಾಹಕರಿಂದ ಪಡೆಯಲು ಅವಕಾಶವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಸಾಮಾನ್ಯ ಹಣ ವರ್ಗಾವಣೆಗೆ ಈ ಶುಲ್ಕ ಅನ್ವಯಿಸುವುದಿಲ್ಲ. 2,000 ರು. ಗಳ ವರೆಗಿನ ವ್ಯಾಪಾರ ಸಂಬಂಧಿತ ಯುಪಿಐ ಪಾವತಿಗಳಿಗೂ ಶುಲ್ಕ ಇರುವುದಿಲ್ಲ.
ರೈಲ್ವೆ, ದೂರಸಂಪರ್ಕ, ವಿಮೆ ಮತ್ತು ಇಂಧನ ಸೇರಿದಂತೆ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ 2,000 ರು ಗಳಿಗಿಂತ ಹೆಚ್ಚಿನ ವಹಿವಾಟುಗಳಿಗೆ ಶೇಕಡಾ 0.4ರ ಬದಲಾಗಿ ಪ್ರತಿ ವಹಿವಾಟಿಗೆ 5ರ ನಿಗದಿತ ಶುಲ್ಕ ಅನ್ವಯಿಸುವ ವ್ಯವಸ್ಥೆ ಮಾಡಲಾಗಿದೆ. ಇನ್ನು ವ್ಯಾಪಾರಿ ರಿಯಾಯಿತಿ ದರದ ಮೇಲೆ ಶೇಕಡಾ 18ರಷ್ಟು ಜಿಎಸ್‌ಟಿ ಅನ್ವಯಿಸುವ ಸಾಧ್ಯತೆ ಕುರಿತು ಚರ್ಚೆ ನಡೆದಿದೆ. ಆದರೆ ಇದು ಯುಪಿಐ ಮೂಲಕ ಪಾವತಿಸಿದ ಒಟ್ಟು ಮೊತ್ತದ ಮೇಲೆ ವಿಧಿಸುವ ತೆರಿಗೆಯಲ್ಲ. ವ್ಯಾಪಾರಿ ಪಾವತಿಸುವ ಸೇವಾ ಶುಲ್ಕದ ಮೇಲಿನ ತೆರಿಗೆ ಎಂಬುದನ್ನು ಗಮನಿಸಬೇಕು.
ಹೀಗಾಗಿ, “ಇನ್ನು ಮುಂದೆ ಯುಪಿಐ ಮೂಲಕ ಹಣ ಪಾವತಿಸಿದರೆ ಜಿಎಸ್‌ಟಿ ಕಟ್ಟಬೇಕು” ಎಂಬ ಮಾಹಿತಿ ತಪ್ಪು. ಹೊಸ ನಿಯಮವು ನಿರ್ದಿಷ್ಟ ಮೊತ್ತದ ವ್ಯಾಪಾರಿ ವಹಿವಾಟುಗಳಿಗೆ ಅನ್ವಯಿಸುವ ಶುಲ್ಕಕ್ಕೆ ಸಂಬಂಧಿಸಿದೆ.