NSA Ajit Doval: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಷ್ಯಾಗೆ ಭೇಟಿ; ಅಮೆರಿಕದ ತೆರಿಗೆ ಬೆದರಿಕೆಯ ನಡುವೆ ಗಮನಾರ್ಹ ಚರ್ಚೆ
ರಷ್ಯಾದೊಂದಿಗಿನ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮಂಗಳವಾರ ಮಾಸ್ಕೋಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಕಾರ್ಯತಂತ್ರದ ಪಾಲುದಾರಿಕೆ ಮತ್ತು ರಷ್ಯಾದೊಂದಿಗಿನ ರಕ್ಷಣಾ ಸಂಬಂಧಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಟಾಸ್ (TASS) ವರದಿ ಮಾಡಿದೆ.

ಅಜಿತ್ ದೋವಲ್ -

ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Adviser ) ಅಜಿತ್ ದೋವಲ್ (Ajit Doval) ಅವರು ನವದೆಹಲಿ ಮತ್ತು ಮಾಸ್ಕೋ (Moscow) ನಡುವಿನ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸಲು ಉನ್ನತ ಮಟ್ಟದ ಭೇಟಿಗಾಗಿ ರಷ್ಯಾಗೆ (Russia) ತೆರಳಿದ್ದಾರೆ. ಭಾರತವು ರಷ್ಯಾದ ತೈಲ ಮತ್ತು ರಕ್ಷಣಾ ಸಾಮಗ್ರಿಗಳ ಖರೀದಿಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ (United States) ನಡುವಿನ ರಾಜತಾಂತ್ರಿಕ ಘರ್ಷಣೆ ತೀವ್ರಗೊಂಡಿರುವ ಸಂದರ್ಭದಲ್ಲಿ ಅಜಿತ್ ದೋವಲ್ ಭೇಟಿಕುತೂಹಲ ಮೂಡಿಸಿದೆ.
ವರದಿಯ ಪ್ರಕಾರ, ಈ ಭೇಟಿಯನ್ನು ಮೊದಲೇ ಯೋಜಿಸಲಾಗಿತ್ತಾದರೂ, ಭಾರತದ ರಷ್ಯಾ ಸಂಬಂಧದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಆಕ್ಷೇಪವು ಈ ಭೇಟಿಗೆ ಹೊಸ ಪ್ರಾಮುಖ್ಯತೆಯನ್ನು ನೀಡಿದೆ. ದೋವಲ್ ಅವರು ರಷ್ಯಾದ ಹಿರಿಯ ಭದ್ರತಾ ಮತ್ತು ರಕ್ಷಣಾ ಅಧಿಕಾರಿಗಳೊಂದಿಗೆ ಗೌಪ್ಯ ಚರ್ಚೆಗಳನ್ನು ನಡೆಸಲಿದ್ದಾರೆ. ಪ್ರಾದೇಶಿಕ ಸ್ಥಿರತೆ, ಭಯೋತ್ಪಾದನೆ ವಿರುದ್ಧ ಸಹಕಾರ ಮತ್ತು ಇಂಧನ ಭದ್ರತೆಯ ಕುರಿತು ಚರ್ಚೆಗಳು ಕೇಂದ್ರೀಕೃತವಾಗಿರಲಿವೆ.
ಟ್ರಂಪ್‌ರ ತೆರಿಗೆ ಬೆದರಿಕೆ
ದೋವಲ್‌ರ ಮಾಸ್ಕೋ ಭೇಟಿಯ ಕೆಲವೇ ದಿನಗಳ ಮೊದಲು, ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್‌ನಲ್ಲಿ ಭಾರತವು ರಷ್ಯಾದ ಕಚ್ಚಾ ತೈಲವನ್ನು “ದೊಡ್ಡ ಪ್ರಮಾಣದಲ್ಲಿ” ಖರೀದಿಸಿ, ಮುಕ್ತ ಮಾರುಕಟ್ಟೆಯಲ್ಲಿ ಮರುಮಾರಾಟ ಮಾಡಿ ಲಾಭ ಗಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಭಾರತೀಯ ಸರಕುಗಳ ಮೇಲೆ 24 ಗಂಟೆಗಳ ಒಳಗೆ ತೀವ್ರ ತೆರಿಗೆ ವಿಧಿಸುವ ಬೆದರಿಕೆ ಹಾಕಿದ್ದಾರೆ. “ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದಿಂದ ಎಷ್ಟು ಜನ ಕೊಲ್ಲಲ್ಪಡುತ್ತಿದ್ದಾರೆ ಎಂಬುದರ ಬಗ್ಗೆ ಅವರಿಗೆ ಕಾಳಜಿಯಿಲ್ಲ” ಎಂದು ಟ್ರಂಪ್ ಬರೆದಿದ್ದಾರೆ.
ಈ ಸುದ್ದಿಯನ್ನು ಓದಿ: viral video: 'ದಿ ಹಂಡ್ರೆಡ್' ಲೀಗ್ ಉದ್ಘಾಟನ ಪಂದ್ಯಕ್ಕೆ ಅಡ್ಡಿಪಡಿಸಿದ ನರಿ
ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ
ಭಾರತದ ವಿದೇಶಾಂಗ ಸಚಿವಾಲಯವು ಟ್ರಂಪ್‌ರ ಟೀಕೆಯನ್ನು “ರಾಜಕೀಯ ಉದ್ದೇಶದಿಂದ ಕೂಡಿದ, ಆಧಾರರಹಿತ ಮತ್ತು ಅಸಮಂಜಸ” ಎಂದು ತಿರಸ್ಕರಿಸಿದೆ. ಭಾರತದ ಇಂಧನ ಆಮದುಗಳು ರಾಷ್ಟ್ರೀಯ ಅಗತ್ಯತೆಗಳು ಮತ್ತು ಮಾರುಕಟ್ಟೆ ಸ್ಥಿರತೆಯಿಂದ ನಿರ್ಧರಿತವಾಗಿವೆ ಎಂದು ಸ್ಪಷ್ಟಪಡಿಸಿತು. ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದೊಂದಿಗೆ ಗಾಢವಾದ ವಾಣಿಜ್ಯ ಸಂಬಂಧಗಳನ್ನು ಹೊಂದಿವೆ ಎಂದು ಸಚಿವಾಲಯ ತಿಳಿಸಿದೆ.