ದೆಹಲಿ, ನ. 29: ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು (Delimitation Bill) ಮತ್ತೊಮ್ಮೆ ಸಂಸತ್ನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಲೋಕಸಭೆಯಲ್ಲಿ ಮಸೂದೆ ಪಾಸ್ ಆಗಲು 2/3ರಷ್ಟು ಬಹುಮತದ ಅಗತ್ಯವಿದೆ. ಈ ಸಂಖ್ಯಾ ಬಲದ ಆಟದಲ್ಲಿ ಕೇಂದ್ರ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದೆ. ಪ್ರಸ್ತುತ ಲೋಕಸಭೆಯಲ್ಲಿ 3 ಸ್ಥಾನಗಳು ಖಾಲಿ ಇದ್ದು, ಸಂಖ್ಯಾ ಬಲ 540ಕ್ಕೆ ಕುಸಿದಿದೆ. ಹೀಗಾಗಿ 3ನೇ 2 ಬಹುಮತಕ್ಕೆ 360 ಸ್ಥಾನ ಬೇಕು. ಸದ್ಯ ಎನ್ಡಿಎ ಬಳಿ 320 ಸ್ಥಾನಗಳಿವೆ. ವಿವಿಧ ಪಕ್ಷಗಳು ಮಸೂದೆ ಬೆಂಬಲಿಸುವ ಭರವಸೆ ನೀಡಿದ್ದು, ಹೀಗಾಗಿ ಕೇಂದ್ರ ಸರ್ಕಾರ 40 ಸ್ಥಾನ ಗಳಿಸುವ ವಿಶ್ವಾಸದಲ್ಲಿದೆ. ಇದಾದ ಬಳಿಕ ಒಂದು ರಾಷ್ಟ್ರ, ಒಂದು ಚುನಾವಣೆ (One Nation One Election) ಮಸೂದೆ ಮಂಡಿಸಲು ಕೇಂದ್ರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಒಂದು ರಾಷ್ಟ್ರ, ಒಂದು ಚುನಾವಣೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ವರದಿಯನ್ನು ಸರ್ಕಾರವು ಈ ವಿಶೇಷ ಅಧಿವೇಶನದಲ್ಲಿ ಮಂಡಿಸುತ್ತದೆಯೇ ಎಂಬುದು ಈಗಿರುವ ಪ್ರಮುಖ ಪ್ರಶ್ನೆ. 2029ರ ಲೋಕಸಭಾ ಚುನಾವಣೆ ವೇಳೆಗೆ ಇದನ್ನು ಜಾರಿಗೆ ತರುವ ಉದ್ದೇಶವನ್ನು ಕೇಂದ್ರ ಹೊಂದಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಕ್ಷೇತ್ರ ಮರುವಿಂಗಡೆ ಮಸೂದೆ ಪಾಸ್ ಆದ ಬಳಿಕ ಒಂದು ರಾಷ್ಟ್ರ, ಒಂದು ಚುನಾವಣೆ ಸರ್ಕಾರದ ಮುಖ್ಯ ಅಜೆಂಡಾ ಆಗಿರಲಿದೆ ಎಂದು ಕೇಂದ್ರದ ಮೂಲಗಳು ಹೇಳಿವೆ.
ಲೋಕಸಭಾ ಕ್ಷೇತ್ರ 815ಕ್ಕೆ ಏರಿಕೆ; ವಿಧಾನಸಭಾ ಕ್ಷೇತ್ರಗಳೂ ಹೆಚ್ಚಳ: ವಿಧೇಯಕಗಳಿಗೆ ಕೇಂದ್ರ ಸಂಪುಟ ಅಸ್ತು
ಇದುವರೆಗೆ ಕ್ಷೇತ್ರ ವಿಂಗಡಣಾ ಆಯೋಗ ರಚನೆ
ಹೊಸದಾಗಿ ರಚನೆಯಾಗುವ ಕ್ಷೇತ್ರ ವಿಂಗಡಣಾ ಆಯೋಗಕ್ಕೆ 2 ವರ್ಷಗಳ ಒಳಗಾಗಿ ತನ್ನ ವರದಿಯನ್ನು ಸಲ್ಲಿಸಲು ಸಾಧ್ಯವಾಗುವುದೇ ಎಂಬ ಪ್ರಶ್ನೆಗಳೂ ಎದ್ದಿವೆ. ಇಲ್ಲಿಯವರೆಗೆ ಇಂತಹ 5 ಆಯೋಗಗಳನ್ನು ರಚಿಸಲಾಗಿದೆ. 1952ರಲ್ಲಿ ಸ್ಥಾಪನೆಯಾದ ಮೊದಲ ಆಯೋಗವು, 1951ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು, ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 498 ಮತ್ತು ವಿಧಾನಸಭೆ ಸ್ಥಾನಗಳ ಸಂಖ್ಯೆಯನ್ನು 3,280ರಷ್ಟು ಎಂದು ನಿಗದಿಪಡಿಸಿತು.
1963ರಲ್ಲಿ ರಚನೆಯಾದ 2ನೇ ಆಯೋಗವು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 522ಕ್ಕೆ ಮತ್ತು ವಿಧಾನಸಭೆ ಸ್ಥಾನಗಳ ಸಂಖ್ಯೆಯನ್ನು 3,771ಕ್ಕೆ ಹೆಚ್ಚಿಸಿತು. 1973ರ 3ನೇ ಆಯೋಗವು 1971ರ ಜನಗಣತಿಯನ್ನು ಆಧರಿಸಿತ್ತು. ಇದು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 522ರಿಂದ 543ಕ್ಕೆ ಹೆಚ್ಚಿಸಿತು ಹಾಗೂ ವಿಧಾನಸಭೆ ಸ್ಥಾನಗಳ ಸಂಖ್ಯೆಯು 3,997ಕ್ಕೆ ತಲುಪಿತು.
4ನೇ ಆಯೋಗವನ್ನು 2002ರಲ್ಲಿ ಸ್ಥಾಪಿಸಲಾಯಿತು. ಇದು 2001ರ ಜನಗಣತಿಯನ್ನು ಆಧಾರವಾಗಿ ಬಳಸಿಕೊಂಡಿತಾದರೂ, ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲಿಲ್ಲ. ಅದು 543ರಷ್ಟರಲ್ಲೇ ಉಳಿಯಿತು. ಈ ಆಯೋಗವು ವಿಧಾನಸಭೆ ಸ್ಥಾನಗಳ ಸಂಖ್ಯೆಯನ್ನು 3,997ರಿಂದ 4,123ಕ್ಕೆ ಹೆಚ್ಚಿಸಿತು. 2007ರಲ್ಲಿ ಸ್ಥಾಪನೆಯಾದ 5ನೇ ಆಯೋಗದ ವರದಿಯನ್ನು ಆಧರಿಸಿ 2008ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ನಡೆಸಲಾಯಿತು. ಇತ್ತೀಚೆಗೆ 2022ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ 2023ರಲ್ಲಿ ಅಸ್ಸಾಂನಲ್ಲಿ ಕ್ಷೇತ್ರ ಮರುವಿಂಗಡಣೆಯನ್ನು ಕೈಗೊಳ್ಳಲಾಯಿತು.
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಯನ್ನು ಬೆಂಬಲಿಸಿದ ರಾಷ್ಟ್ರಪತಿ ದ್ರೌಪದಿ ಮರ್ಮು
ವಿಪಕ್ಷಗಳ ಬೆಂಬಲ ದೊರೆಯುತ್ತ?
ಸದ್ಯದ ಪ್ರಶ್ನೆ ಎಂದರೆ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಇಂಡಿ ಒಕ್ಕೂಟದ ಹಲವು ಪಕ್ಷಗಳು ಬೆಂಬಲ ನೀಡಿದಂತೆ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ ಪರವೂ ಮತ ಚಲಾಯಿಸುತ್ತಾ ಎನ್ನುವುದು ಸದ್ಯದ ಪ್ರಶ್ನೆ. ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯು ಭಾರತದಾದ್ಯಂತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಗುರಿಯನ್ನು ಹೊಂದಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.