ಲೋಕಸಭಾ ಕ್ಷೇತ್ರ 815ಕ್ಕೆ ಏರಿಕೆ; ವಿಧಾನಸಭಾ ಕ್ಷೇತ್ರಗಳೂ ಹೆಚ್ಚಳ: ವಿಧೇಯಕಗಳಿಗೆ ಕೇಂದ್ರ ಸಂಪುಟ ಅಸ್ತು
Explainer: ಎಲ್ಲವೂ ಅಂದುಕೊಂಡಂತೆ ನಡೆದರೆ, ಸಂಸತ್ತಿನ ಅನುಮೋದನೆಯನ್ನು ಗಳಿಸಿದರೆ, ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಈಗಿನ 543ರಿಂದ 815ಕ್ಕೆ ಏರಿಕೆಯಾಗಲಿದೆ. ಶೇ. 33 ಮಹಿಳಾ ಮೀಸಲು ವಿಧೇಯಕವೂ ಜಾರಿಯಾಗಲಿದೆ. ಜತೆಗೆ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಾಗಲಿದೆ.
ಸಾಂದರ್ಭಿಕ ಚಿತ್ರ -
- ಕೇಶವ ಪ್ರಸಾದ್
ದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, ಸಂಸತ್ತಿನ ಅನುಮೋದನೆಯನ್ನು ಗಳಿಸಿದರೆ, ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಈಗಿನ 543ರಿಂದ 815ಕ್ಕೆ ಏರಿಕೆಯಾಗಲಿದೆ. ಶೇ. 33 ಮಹಿಳಾ ಮೀಸಲು ವಿಧೇಯಕವೂ ಜಾರಿಯಾಗಲಿದೆ. ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ. ಈ ಐತಿಹಾಸಿಕ ಕ್ಷಣಗಳಿಗೋಸ್ಕರ ಕೇಂದ್ರ ಸಚಿವ ಸಂಪುಟ ಮತ್ತೊಮ್ಮೆ ತನ್ನ ಅನುಮೋದನೆಯನ್ನು ಕೊಟ್ಟಿದೆ.
ನವೆಂಬರ್ 30ರಂದು ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನವೇ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ನವೆಂಬರ್ 27ರಂದು ಹೊಸ ಕ್ಷೇತ್ರ ಪುನರ್ವಿಂಡಣೆ ಮತ್ತು ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಿದೆ.
ದೇಶದ ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವುದು ಮತ್ತು ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೆ ತರುವುದು ಈ ಪ್ರಸ್ತಾವಿತ ಶಾಸನದ ಮುಖ್ಯ ಗುರಿ. ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಳವಾಗಲಿದೆ.
ಈ ಬಾರಿ ಡಿಎಂಕೆ (DMK), ಶರದ್ ಪವಾರ್ ಬಣದ ಎನ್ಸಿಪಿ (NCP) ಮತ್ತು ವೈಎಸ್ಆರ್ಸಿಪಿ (YSRCP) ಪಕ್ಷಗಳು ತಮ್ಮ ಬೆಂಬಲವನ್ನು ಘೋಷಿಸಿರುವುದರಿಂದ ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ವಿಧೇಯಕಗಳಿಗೆ ಬಲ ತುಂಬಿದಂತಾಗಿದೆ. ರಾಜಕೀಯ ವಲಯದಲ್ಲಿ ಈ ಬೆಂಬಲ ಹೆಚ್ಚುತ್ತಿರುವ ಬೆನ್ನಲ್ಲೇ, ಕೇಂದ್ರ ಸಚಿವ ಸಂಪುಟ ಮಹತ್ವದ ಶಾಸನಕ್ಕೆ ಹಸಿರು ನಿಶಾನೆ ತೋರಿದೆ.
ದಕ್ಷಿಣ ರಾಜ್ಯಗಳ ಒತ್ತಡಕ್ಕೆ ಮಣಿದ ಸರ್ಕಾರ; ಲೋಕಸಭಾ ಸ್ಥಾನ ಶೇ. 50ಕ್ಕೆ ಏರಿಕೆ
ಏಕರೂಪದಲ್ಲಿ ಹೆಚ್ಚಳ
ಈ ವಿಧೇಯಕದ ಪ್ರಕಾರ, ಪ್ರತಿ ರಾಜ್ಯದಲ್ಲೂ ಏಕರೂಪವಾಗಿ ಶೇ. 50ರಷ್ಟು ಕ್ಷೇತ್ರಗಳನ್ನು ಹೆಚ್ಚಿಸುವ ಮೂಲಕ ಲೋಕಸಭೆಯ ಗರಿಷ್ಠ ಸದಸ್ಯ ಬಲವನ್ನು 550 ರಿಂದ 850 ಕ್ಕೆ ಏರಿಸಲಾಗುವುದು ಹಾಗೂ 2051ರವರೆಗೆ ಸೀಟುಗಳ ಸಂಖ್ಯೆಯನ್ನು ಪರಿಷ್ಕರಿಸುವ ಯಾವುದೇ ಹೊಸ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ತಡೆಹಿಡಿಯಲಾಗುವುದು.
ಕೆಲವೇ ತಿಂಗಳ ಹಿಂದೆ ಒಗ್ಗಟ್ಟಿನ ಪ್ರತಿಪಕ್ಷಗಳು ಇದೇ ಉದ್ದೇಶದ 'ಸಂವಿಧಾನ (131ನೇ ತಿದ್ದುಪಡಿ) ವಿಧೇಯಕವನ್ನು ಸೋಲಿಸಿದ್ದವು. ಆದರೆ ಈಗ ಸಂಸತ್ತಿನ ಅನುಮೋದನೆ ಪಡೆಯಲು ಅಗತ್ಯವಿರುವ ಸಂಖ್ಯಾಬಲ ಕೂಡಿಬರುತ್ತಿರುವಂತೆ ಕಾಣುತ್ತಿರುವುದರಿಂದ, ಸರ್ಕಾರ ಶುಕ್ರವಾರ ಸಂಸದರಿಗೆ ಸಂವಿಧಾನ (132ನೇ ತಿದ್ದುಪಡಿ) ವಿಧೇಯಕ (2029ರಿಂದ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಜಾರಿಗಾಗಿ) ಹಾಗೂ ಕ್ಷೇತ್ರ ಪುನರ್ವಿಂಗಡಣೆ ಆಯೋಗ ರಚನೆ ವಿಧೇಯಕಗಳ ಪ್ರತಿಗಳನ್ನು ಹಂಚಿದೆ. ಇವುಗಳ ಜತೆಗೆ ವಿಧಾನಸಭೆ ಹೊಂದಿರುವ ದೆಹಲಿ, ಜಮ್ಮು-ಕಾಶ್ಮೀರ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಟುಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುವ ಮೂರನೇ ವಿಧೇಯಕವನ್ನೂ ಸರ್ಕಾರ ತರಲಿದೆ.
ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಏನಿದೆ?
"ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಮೂಲಕ ಲೋಕಸಭೆ ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರೂ ಸೇರಿ ಒಟ್ಟು ಮೂರನೇ ಒಂದರಷ್ಟು (33%) ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರುವುದು ಈ ಮಸೂದೆಯ ಉದ್ದೇಶ. ಈ ಪ್ರಕ್ರಿಯೆಯು ಪ್ರಸ್ತುತ ಇರುವ ಸ್ಥಾನಗಳಿಗಿಂತ ಶೇ. 50ರಷ್ಟು ಹೆಚ್ಚುವರಿ ಸ್ಥಾನಗಳನ್ನು ನೀಡಲಿದೆ" ಎಂದು ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ವಿವರಿಸಲಾಗಿದೆ.
ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಮನವೊಲಿಸಿದ ಹೊಸ ತಂತ್ರ ಇದೀಗ ಗಮನ ಸೆಳೆಯುತ್ತಿದೆ. ಹಿಂದಿನ ವಿಧೇಯಕಕ್ಕಿಂತ ಭಿನ್ನವಾಗಿ, "ಲೋಕಸಭೆಯಲ್ಲಿ ರಾಜ್ಯಗಳ ಪ್ರಸ್ತುತ ಪ್ರಾತಿನಿಧ್ಯದ ಪಾಲು ಕಡಿಮೆಯಾಗುವುದಿಲ್ಲʼʼ ಎಂಬ ಸ್ಪಷ್ಟ ಸಾಂವಿಧಾನಿಕ ಭರವಸೆಯನ್ನು ಈ ಹೊಸ ವಿಧೇಯಕದಲ್ಲಿ ನೀಡಲಾಗಿದೆ. ಇದು ಡಿಎಂಕೆ ಮತ್ತು ಶರದ್ ಪವಾರ್ ಅವರ ಎನ್ಸಿಪಿ ಪಕ್ಷಗಳ ಆತಂಕವನ್ನು ದೂರ ಮಾಡಿದ್ದು, ಅವು ತಮ್ಮ ಹಳೆಯ ವಿರೋಧವನ್ನು ಕೈಬಿಟ್ಟು, ಮೂರನೇ ಎರಡರಷ್ಟು ಬಹುಮತ ಬೇಕಿರುವ ಈ ಮಸೂದೆಗೆ ಬಿಜೆಪಿ ನೇತೃತ್ವದ ಎನ್ಡಿಎ ಜತೆ ಕೈಜೋಡಿಸಲು ಹಾದಿ ಸುಗಮಗೊಳಿಸಿದೆ.
ಈ ಎರಡೂ ಉದ್ದೇಶಗಳನ್ನು ಏಕಕಾಲದಲ್ಲಿ ಸಾಧಿಸಲು ವಿಧೇಯಕದಲ್ಲಿ ಎರಡು ಜನಗಣತಿಗಳ ಅಂಕಿಅಂಶಗಳನ್ನು ಬಳಸಿಕೊಳ್ಳಲಾಗಿದೆ: ಲೋಕಸಭೆಯಲ್ಲಿ ರಾಜ್ಯಗಳ ಪಾಲನ್ನು ನಿರ್ಧರಿಸಲು ಪ್ರಸ್ತುತ ಚಾಲ್ತಿಯಲ್ಲಿರುವ 1971ರ ಜನಗಣತಿಯನ್ನೇ ಉಳಿಸಿಕೊಳ್ಳಲಾಗಿದೆ.
ಆದರೆ ರಾಜ್ಯಗಳ ಒಳಗೆ ಲೋಕಸಭಾ ಕ್ಷೇತ್ರಗಳ ಗಡಿಗಳನ್ನು ಪುನರ್ನಿಗದಿಪಡಿಸಲು 2011ರ ಜನಗಣತಿಯನ್ನು ಬಳಸಲಾಗುವುದು. ಇದರಿಂದಾಗಿ ಹೊಸ ಜನಗಣತಿಯ ವರದಿ ಬರುವವರೆಗೆ ಸರ್ಕಾರ ಕಾಯಬೇಕಾದ ಅಗತ್ಯವಿರುವುದಿಲ್ಲ. ಪ್ರಸ್ತಾವಿತ 850 ಗರಿಷ್ಠ ಸ್ಥಾನಗಳಲ್ಲಿ 815 ಸ್ಥಾನಗಳು ರಾಜ್ಯಗಳಿಗೆ ಮತ್ತು 35 ಸ್ಥಾನಗಳು ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಿಗೆ (ದೆಹಲಿ, ಪುದುಚೇರಿ, ಜಮ್ಮು-ಕಾಶ್ಮೀರ) ಮೀಸಲಿರಲಿವೆ. ಲೋಕಸಭೆಯ ನೈಜ ಒಟ್ಟು ಬಲ ಸುಮಾರು 816ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ (ಪ್ರಸ್ತುತ 550 ಗರಿಷ್ಠ ಮಿತಿಯಲ್ಲಿ 543 ಸ್ಥಾನಗಳಿವೆ).
ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯುವ 2029ರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಜಾರಿಗೊಳಿಸುವ ಗುರಿಯೊಂದಿಗೆ, ಸರ್ಕಾರ ನವೆಂಬರ್ 30ರಂದು ಲೋಕಸಭೆಯಲ್ಲಿ ಈ ವಿಧೇಯಕಗಳನ್ನು ಮಂಡಿಸಲಿದೆ.

ಬೆಂಬಲ ನೀಡಿದ ಡಿಎಂಕೆ
ತಮ್ಮ ನಿಲುವಿನಲ್ಲಿ ಬದಲಾವಣೆಯ ಸುಳಿವು ನೀಡಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, "39 ಲೋಕಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನ ಪಾಲು ಪ್ರಸ್ತುತ ಇರುವ ಶೇ. 7.18ಕ್ಕಿಂತ ಕಡಿಮೆಯಾಗಬಾರದು ಮತ್ತು 1971ರ ಜನಗಣತಿಯ ಆಧಾರದ ಮೇಲೆ ನಿಗದಿಯಾಗಿರುವ ರಾಜ್ಯಗಳ ಪ್ರಾತಿನಿಧ್ಯದ ಅನುಪಾತವನ್ನು ಮುಂದಿನ 25 ವರ್ಷಗಳ ಕಾಲ ಬದಲಾಯಿಸಬಾರದು" ಎಂದು ಷರತ್ತು ಹಾಕಿದ್ದರು.
ಸರ್ಕಾರ ಏಪ್ರಿಲ್ನಲ್ಲೇ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಹೊಸ ವಿಧೇಯಕದಲ್ಲಿ ಸ್ಟಾಲಿನ್ ಅವರ ಎರಡೂ ಬೇಡಿಕೆಗಳನ್ನು ಈಡೇರಿಸಲಾಗಿದೆ. ಇತ್ತ ಇಂಡಿಯಾ (INDIA) ಮೈತ್ರಿಕೂಟದ ಭಾಗವಾಗಿರುವ ಶರದ್ ಪವಾರ್ ಅವರ ಎನ್ಸಿಪಿ ಕೂಡ ಕ್ಷೇತ್ರ ಪುನರ್ವಿಂಗಡಣೆಯನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಪಕ್ಷದ ಹಿರಿಯ ನಾಯಕ ಜಿತೇಂದ್ರ ಅವ್ಹಾದ್ ಸ್ಪಷ್ಟಪಡಿಸಿದ್ದಾರೆ.
ಎನ್ಡಿಎಗೆ ಈಗ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಅದಕ್ಕೂ ಕಾರಣ ಇದೆ. ಸಂಖ್ಯಾಬಲದ ಲೆಕ್ಕಾಚಾರ ಮತ್ತು ಟಿಎಂಸಿ ಒಡಕು ಎನ್ಡಿಎಗೆ ಅನುಕೂಲಕರವಾಗುವ ನಿರೀಕ್ಷೆ ಉಂಟಾಗಿದೆ.
ಡಿಎಂಕೆಯ 22, ಎನ್ಸಿಪಿ (ಶರದ್ ಪವಾರ್) ಬಣದ 8 ಮತ್ತು ವೈಎಸ್ಆರ್ ಕಾಂಗ್ರೆಸ್ನ 4 ಸಂಸದರು ಬೆಂಬಲ ನೀಡುವುದರಿಂದ ಲೋಕಸಭೆಯಲ್ಲಿ ಎನ್ಡಿಎ ಬಲ 355ಕ್ಕೆ ಏರಲಿದೆ. ಮೂರು ಸ್ಥಾನಗಳು ಖಾಲಿ ಇರುವ ಸದನದಲ್ಲಿ ಈ ವಿಧೇಯಕಗಳು ಅಂಗೀಕಾರವಾಗಲು 360 ಮತಗಳ ಅಗತ್ಯವಿದ್ದು, ಇನ್ನೂ ಕೆಲವು ಸಂಸದರು ಮತದಾನದಿಂದ ದೂರ ಉಳಿಯುವ ಅಥವಾ ಬೆಂಬಲಿಸುವ ಸೂಚನೆ ಇರುವುದರಿಂದ ಎನ್ಡಿಎ ಈ ಗಡಿಯನ್ನು ದಾಟುವುದು ಬಹುತೇಕ ಖಚಿತವಾಗಿದೆ.
ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ವಿಧೇಯಕಕ್ಕೆ ಡಿಎಂಕೆ (DMK) ಅಧಿಕೃತವಾಗಿ ಬೆಂಬಲ ಸೂಚಿಸಿದೆ. ತಿದ್ದುಪಡಿ ಮಾಡಲಾದ ಈ ನೂತನ ಪ್ರಸ್ತಾವನೆಯು ತಮಿಳುನಾಡಿಗೆ ಸಿಕ್ಕ "ದೊಡ್ಡ ಜಯ" ಎಂದು ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಬಣ್ಣಿಸಿದ್ದಾರೆ.
ಚೆನ್ನೈನಲ್ಲಿ ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಲೋಕಸಭೆಯಲ್ಲಿ ತಮಿಳುನಾಡಿನ ಸ್ಥಾನಗಳ ಪಾಲನ್ನು ರಕ್ಷಿಸುವ ವಿಚಾರದಲ್ಲಿ ಅಚಲವಾಗಿ ನಿಲ್ಲುವುದರ ಜತೆಗೆ, ಪರಿಷ್ಕೃತ ಮಸೂದೆಗೆ ಬೆಂಬಲ ನೀಡುವುದಾಗಿ ಪಕ್ಷ ಸ್ಪಷ್ಟಪಡಿಸಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ, ನಟ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡಿ ಸರ್ಕಾರ ರಚಿಸಲು ಕೈಜೋಡಿಸಿದ ನಂತರ ಡಿಎಂಕೆ (DMK) ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿದೆ. ಆದ್ದರಿಂದ ಅದಕ್ಕೆ ಇಂಡಿ ಒಕ್ಕೂಟದ ಹಂಗಿಲ್ಲ. 22 ಸ್ಥಾನವಿರುವ ಡಿಎಂಕೆ ಒಂದು ವೇಳೆ ಮತದಾನಕ್ಕೆ ಗೈರು ಹಾಜರಿಯಾದರೂ, ವಿಧೇಯಕ ಅಂಗೀಕಾರವಾಗಲಿದೆ.
ಮತ್ತೊಂದೆಡೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿನ ಒಡಕಿನಿಂದಾಗಿ ಎನ್ಡಿಎ ಜತೆ ಗುರುತಿಸಿಕೊಂಡಿರುವ 20 ಸಂಸದರ ನಡೆಯ ಕಾನೂನುಬದ್ಧತೆಯ ಬಗ್ಗೆ ಲೋಕಸಭಾ ಸ್ಪೀಕರ್ ಯಾವ ತೀರ್ಪು ನೀಡಲಿದ್ದಾರೆ ಎಂಬುದರ ಮೇಲೂ ಎಲ್ಲರ ಕಣ್ಣಿದೆ. ಸ್ಪೀಕರ್ ಅವರಿಂದ ಪೂರಕ ತೀರ್ಪು ಬಂದರೆ, ಆ ಸಂಸದರು ಯಾವುದೇ ಕಾನೂನು ತೊಡಕಿಲ್ಲದೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ವಿಧಾನಸಭೆಗಳ ಗಾತ್ರವೂ ಏರಿಕೆ
ಸಂವಿಧಾನದ 8 ವಿಧಿಗಳಿಗೆ ತಿದ್ದುಪಡಿ ತರುವ ಈ 132ನೇ ತಿದ್ದುಪಡಿ ಮಸೂದೆಯು ರಾಜ್ಯ ವಿಧಾನಸಭೆಗಳ ಗರಿಷ್ಠ ಸದಸ್ಯ ಬಲದ ಮಿತಿಯನ್ನು 500 ರಿಂದ 650 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ. ದೇಶದ ಅತಿದೊಡ್ಡ ವಿಧಾನಸಭೆಯಾದ ಉತ್ತರ ಪ್ರದೇಶದಲ್ಲಿ ಪ್ರಸ್ತುತ 403 ಶಾಸಕರಿದ್ದು, ಶೇ. 50 ರಷ್ಟು ಹೆಚ್ಚಳಕ್ಕೆ ಅವಕಾಶ ಕಲ್ಪಿಸಲು ವಿಶೇಷವಾಗಿ ಈ ಬದಲಾವಣೆ ಮಾಡಲಾಗುತ್ತಿದೆ.
ಮುಂಬರುವ ನಿರ್ಣಾಯಕ ರಾಜ್ಯ ವಿಧಾನಸಭಾ ಚುನಾವಣೆಗಳ ಹೊಸ್ತಿಲಲ್ಲಿ ಈ ಮಸೂದೆಯ ಅಂಗೀಕಾರವು ಸರ್ಕಾರಕ್ಕೆ ತನ್ನ 'ಮಹಿಳಾ ಪರ' ನಿಲುವನ್ನು ಪ್ರದರ್ಶಿಸಲು ಪ್ರಬಲ ಅಸ್ತ್ರವಾಗಲಿದೆ. ಬಿಜೆಪಿ ಮತ್ತು ಮಿತ್ರಪಕ್ಷಗಳ ಆಡಳಿತವಿರುವ ರಾಜ್ಯಗಳ ವಿಧಾನಸಭೆಗಳಿಂದ ಇದಕ್ಕೆ ಅನುಮೋದನೆ ಪಡೆಯುವ ಮೂಲಕ ರಾಜಕೀಯ ಲಾಭ ಪಡೆಯಲು ಸರ್ಕಾರ ಮುಂದಾಗಿದೆ. ಈ ಹೊಸ ಮಸೂದೆ ಮಂಡನೆಯಾಗುತ್ತಿರುವುದರಿಂದ, ಲೋಕಸಭೆಯಲ್ಲಿ ಬಾಕಿ ಇರುವ ಹಳೆಯ ಮಸೂದೆಯನ್ನು ಸರ್ಕಾರ ಹಿಂಪಡೆಯಲಿದೆ.
ಲೋಕಸಭಾ ಕ್ಷೇತ್ರಗಳ ಚಿತ್ರಣವೇ ಬದಲು
ಕ್ಷೇತ್ರ ಮರು ವಿಂಗಡಣೆಯ ಬಳಿಕ ಕರ್ನಾಟಕದ ಲೋಕಸಭೆ ಕ್ಷೇತ್ರಗಳ ಸಂಖ್ಯೆಯು ಈಗಿನ 28ರಿಂದ 42ಕ್ಕೆ ಹಾಗೂ ವಿಧಾನ ಸಭೆ ಸೀಟುಗಳ ಸಂಖ್ಯೆ ಈಗಿನ 224ರಿಂದ 336ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಈಗಿನ 4ರಿಂದ 6 ಅಥವಾ 7ಕ್ಕೆ ಏರಿಕೆಯಾಗಬಹುದು. ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಈಗಿನ 28ರಿಂದ 40ಕ್ಕೆ ಹೆಚ್ಚಳವಾಗಬಹುದು.
ಉದರಿಂದ ಬಿಜೆಪಿ ನೇತೃತ್ವದ ಎನ್ಡಿಎಗೆ ಅನುಕೂಲವಾಗಲಿದೆಯೇ? ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟಕ್ಕೆ ಅನಾನುಕೂಲವಾಗಲಿದೆಯೇ? ಪ್ರಸ್ತುತ ವಿಧೇಯಕದಲ್ಲಿ ಮಾಡಲಾಗಿರುವ ಬದಲಾವಣೆಯಿಂದಾಗಿ, ಸೀಟುಗಳ ಹಂಚಿಕೆಯ ಲೆಕ್ಕಾಚಾರದಲ್ಲಿ ಉತ್ತರ ಭಾರತಕ್ಕೆ ಅಥವಾ ಬಿಜೆಪಿಗೆ ಯಾವುದೇ ಹೆಚ್ಚುವರಿ ಲಾಭವಾಗುವುದಿಲ್ಲ. ಹಾಗೆಯೇ ದಕ್ಷಿಣ ಭಾರತಕ್ಕೆ ಅಥವಾ ಕಾಂಗ್ರೆಸ್ಗೆ ಸೀಟುಗಳ ಪಾಲಿನಲ್ಲಿ ನಷ್ಟವೂ ಆಗುವುದಿಲ್ಲ.
ಏಪ್ರಿಲ್ನಲ್ಲಿ ತಂದಿದ್ದ ಹಳೆಯ 131ನೇ ತಿದ್ದುಪಡಿ ವಿಧೇಯಕದಂತೆ, ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆದಿದ್ದರೆ, ಜನಸಂಖ್ಯೆ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳಿಗೆ (ಉದಾ: ಉತ್ತರ ಪ್ರದೇಶ, ಬಿಹಾರ) ಅತಿ ಹೆಚ್ಚು ಹೊಸ ಸೀಟುಗಳು ಸಿಕ್ಕಿ ಬಿಜೆಪಿಗೆ ಭಾರಿ ಅನುಕೂಲವಾಗುತ್ತಿತ್ತು ಮತ್ತು ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕುಸಿಯುತ್ತಿತ್ತು. ಈ ಹೊಸ ವಿಧೇಯಕದಲ್ಲಿ ಸರ್ಕಾರ ಆ ಸೂತ್ರವನ್ನು ಕೈಬಿಟ್ಟಿದೆ.
ದೇಶದ ಪ್ರತಿಯೊಂದು ರಾಜ್ಯದಲ್ಲೂ (ಉತ್ತರ ಮತ್ತು ದಕ್ಷಿಣ ಎರಡೂ ಕಡೆ) ಏಕರೂಪವಾಗಿ ಶೇ. 50ರಷ್ಟು ಸೀಟುಗಳನ್ನು ಮಾತ್ರ ಹೆಚ್ಚಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಈಗ 80 ಸೀಟುಗಳಿವೆ (ದೇಶದ ಒಟ್ಟು 543 ಸೀಟುಗಳಲ್ಲಿ ಸುಮಾರು 14.7%). ಶೇ. 50ರಷ್ಟು ಹೆಚ್ಚಾದರೆ ಅದು 120 ಆಗುತ್ತದೆ (ಒಟ್ಟು 815 ಸೀಟುಗಳಲ್ಲಿ ಅದೇ 14.7%). ಅದೇ ರೀತಿ ತಮಿಳುನಾಡಿನ ಪಾಲು 39ರಿಂದ 58 ಅಥವಾ 59ಕ್ಕೆ ಏರಿದರೂ, ಲೋಕಸಭೆಯಲ್ಲಿ ಅದರ ಶೇಕಡಾವಾರು ಪ್ರಾತಿನಿಧ್ಯ (7.18%) ಯಥಾಸ್ಥಿತಿಯಲ್ಲಿರುತ್ತದೆ.
ಹಾಗಾದರೆ ಬಿಜೆಪಿಗೆ ರಾಜಕೀಯವಾಗಿ ಹೇಗೆ ಅನುಕೂಲವಾಗಬಹುದು? ಸೀಟುಗಳ ಅನುಪಾತ ಬದಲಾಗದಿದ್ದರೂ, ಈ ಮಸೂದೆ ಅಂಗೀಕಾರವಾದರೆ ಬಿಜೆಪಿಗೆ ಬೇರೆ ರೀತಿಯಲ್ಲಿ ರಾಜಕೀಯ ಲಾಭವಿದೆ:
'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಶರದ್ ಪವಾರ್ ಅವರ ಎನ್ಸಿಪಿ ಈ ವಿಧೇಯಕವನ್ನು ಬೆಂಬಲಿಸಲು ಮುಂದಾಗಿರುವುದು ಕಾಂಗ್ರೆಸ್ಗೆ ರಾಜಕೀಯವಾಗಿ ಹಿನ್ನಡೆಯಾಗಿದೆ. ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಮೂಡಿಸಲು ಬಿಜೆಪಿಗೆ ಇದು ನೆರವಾಗಿದೆ.
ಲೋಕಸಭೆಯ ಬಲ 815ಕ್ಕೆ ಏರಿ, ರಾಜ್ಯಸಭೆಯ ಬಲ 250 ರಲ್ಲೇ ಉಳಿಯುವುದರಿಂದ, ಭವಿಷ್ಯದಲ್ಲಿ ಎರಡೂ ಸದನಗಳ ಜಂಟಿ ಅಧಿವೇಶನ ನಡೆದರೆ ಲೋಕಸಭೆಯಲ್ಲಿ ಬಹುಮತವಿರುವ ಪಕ್ಷಕ್ಕೆ (ಬಿಜೆಪಿ/ಎನ್ಡಿಎ) ಮೇಲುಗೈ ಸಿಗಲಿದೆ.
ಜತೆಗೆ ಬಿಜೆಪಿಯ ಭದ್ರ ಕೋಟೆಯಾಗಿರುವ ಉತ್ತರ ಭಾರತದಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳವಾಗುವುದರಿಂದ ರಾಜಕೀಯವಾಗಿ ಅದರ ಅಡ್ವಾಂಟೇಜ್ ಸಿಗಬಹುದು.
ನವೆಂಬರ್ 30ರಂದು ಲೋಕಸಭೆ, ಡಿಸೆಂಬರ್ 2ರಂದು ರಾಜ್ಯಸಭೆ ಕಲಾಪ ಆರಂಭ
ಕಾಂಗ್ರೆಸ್ನ ಆತಂಕ ಮತ್ತು ವಿರೋಧ ಏಕೆ?
ಸೀಟುಗಳ ಪಾಲು ಬದಲಾಗದಿದ್ದರೂ ಕಾಂಗ್ರೆಸ್ ಈ ಮಸೂದೆಯನ್ನು ವಿರೋಧಿಸುತ್ತಿರುವುದಕ್ಕೆ ಮುಖ್ಯವಾಗಿ ಮೂರು ಕಾರಣಗಳಿವೆ:
ಕ್ಷೇತ್ರಗಳ ಗಡಿ ಬದಲಾವಣೆ: ಪ್ರತಿ ರಾಜ್ಯದಲ್ಲೂ ಸೀಟುಗಳ ಸಂಖ್ಯೆ 50% ಹೆಚ್ಚಾದಾಗ, ಕ್ಷೇತ್ರಗಳ ಗಡಿಗಳನ್ನು ಹೊಸದಾಗಿ ಎಳೆಯಲಾಗುತ್ತದೆ. ಕೇಂದ್ರ ಸರ್ಕಾರ ನೇಮಿಸುವ ಆಯೋಗವು ತನಗೆ ಅನುಕೂಲವಾಗುವಂತೆ (ಹಿಂದೂ-ಮುಸ್ಲಿಂ ಅಥವಾ ಜಾತಿ ಸಮೀಕರಣದ ಆಧಾರದ ಮೇಲೆ) ಕ್ಷೇತ್ರಗಳ ಗಡಿಗಳನ್ನು ಮರುರಚನೆ ಮಾಡಬಹುದು ಎಂಬುದು ಕಾಂಗ್ರೆಸ್ನ ಪ್ರಮುಖ ಆತಂಕವಾಗಿದೆ.
2026ರ ನಂತರದ ಹೊಸ ಜನಗಣತಿಯನ್ನು ಕಾಯದೆ, 15 ವರ್ಷ ಹಳೆಯದಾದ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡುವುದು ಅವೈಜ್ಞಾನಿಕ ಎಂದು ಕಾಂಗ್ರೆಸ್ ವಾದಿಸುತ್ತಿದೆ.
ಮಹಿಳಾ ಮೀಸಲಾತಿ ಜಾರಿಯ ಕ್ರೆಡಿಟ್ ಮತ್ತು ಕ್ಷೇತ್ರಗಳ ಗಡಿ ಮರುರಚನೆಯ ಪ್ರಕ್ರಿಯೆಯಲ್ಲಿ ಆಡಳಿತ ಪಕ್ಷಕ್ಕೆ ರಾಜಕೀಯ ಲಾಭವಾಗಬಹುದು ಎಂಬುದು ವಿಪಕ್ಷಗಳ ಲೆಕ್ಕಾಚಾರ. ಒಟ್ಟಿನಲ್ಲಿ ಐತಿಹಾಸಿಕ ಕ್ಷೇತ್ರ ಮರುವಿಂಗಡಣೆಗೆ ಮೋದಿ ಸರಕಾರ ನಡೆಸುತ್ತಿರುವ ಈ ಸಾಹಸ ರಾಜಕೀಯ- ಸಾಮಾಜಿಕ ವಲಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.