ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor delegations: ಆಪರೇಷನ್ ಸಿಂದೂರ್ ನಿಯೋಗ- 51 ನಾಯಕರು 32 ದೇಶಗಳಿಗೆ ಭೇಟಿ

ಆಪರೇಷನ್ ಸಿಂದೂರ್ ನಿಯೋಗವು ಏಳು ತಂಡಗಳಾಗಿ 32 ದೇಶಗಳಿಗೆ ಮತ್ತು ಬ್ರಸೆಲ್ಸ್‌ನಲ್ಲಿರುವ ಇಯು ಪ್ರಧಾನ ಕಚೇರಿಗೆ ಭೇಟಿ ನೀಡಲಿದೆ. ಭಯೋತ್ಪಾದನೆಯನ್ನು ನಿಭಾಯಿಸುವ ಭಾರತದ ಸಂಕಲ್ಪವನ್ನು ವ್ಯಕ್ತಪಡಿಸುವುದು ಈ ರಾಜತಾಂತ್ರಿಕ ಸಂಪರ್ಕ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಅಪರೂಪದ ಹೆಜ್ಜೆಯಾಗಿ ಎಲ್ಲ ಪಕ್ಷಗಳನ್ನು ಒಟ್ಟುಗೂಡಿಸಿದೆ.

32 ದೇಶಗಳಿಗೆ ಭೇಟಿ ನೀಡಲಿದೆ ಆಪರೇಷನ್ ಸಿಂದೂರ್ ನಿಯೋಗ

ನವದೆಹಲಿ: ನಿರಂತರ ಭಯೋತ್ಪಾದನೆಯ (terrorism) ಬಲಿಪಶು ಆಗುತ್ತಿದ್ದ ಭಾರತ ಈಗ ಭಯೋತ್ಪಾದನೆ (Terror attack) ವಿರುದ್ಧ ಸಮರ ಸಾರಿದೆ. ಈ ನಿಟ್ಟಿನಲ್ಲಿ ಇದೀಗ ಮತ್ತೊಂದು ಬಲವಾದ ಹೆಜ್ಜೆ ಇಟ್ಟಿದೆ. ಭಯೋತ್ಪಾದನೆ ಬಗ್ಗೆ ತನ್ನ ಶೂನ್ಯ ಸಹಿಷ್ಣುತೆ ನೀತಿಯನ್ನು (Zero tolerance policy) ವಿಶ್ವಕ್ಕೆ ಸಾರಲು ಹೊರಟಿದೆ. ಇದಕ್ಕಾಗಿ ಈಗಾಗಲೇ 51 ನಾಯಕರು 32 ದೇಶಗಳಿಗೆ ಭಾರತದ ಆಪರೇಷನ್ ಸಿಂದೂರ್ ನಿಯೋಗದ (Operation Sindoor delegations) ಹೆಸರಲ್ಲಿ ಹೊರಡಲು ಸಿದ್ದರಾಗಿದ್ದಾರೆ. ಈ ರಾಜತಾಂತ್ರಿಕ ಹೆಜ್ಜೆಯು ಭಯೋತ್ಪಾದನೆಯನ್ನು ನಿಭಾಯಿಸುವ ಭಾರತದ ಸಂಕಲ್ಪವನ್ನು ವಿಶ್ವಕ್ಕೆ ತಿಳಿಸುವುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಸುಮಾರು ನಾಲ್ಕೈದು ಮಂದಿ ಭಯೋತ್ಪಾದಕರು ದಾಳಿ ನಡೆಸಿ 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಉಗ್ರರಿಗೆ ಪೋಷಣೆ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಹಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿತ್ತು. ಇದರಲ್ಲಿ ಸಿಂಧೂ ನದಿ ನೀರು ಒಪ್ಪಂದ ರದ್ದು, ಪಾಕಿಸ್ತಾನ ಪ್ರಜೆಗಳ ವೀಸಾ ರದ್ದು ಸೇರಿದೆ. ಬಳಿಕ ಭಾರತೀಯ ಸೇನೆ

ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಉಗ್ರರ ನೆಲೆಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಲಾಗಿತ್ತು. ಬಳಿಕ ಎರಡು ರಾಷ್ಟ್ರಗಳ ನಡುವೆ ಉಂಟಾಗಿದ್ದ ಸಂಘರ್ಷ ಮೇ 11ರಂದು ಕದನ ವಿರಾಮದ ಮೂಲಕ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಇದೀಗ ಭಯೋತ್ಪಾದನೆಯ ವಿರುದ್ಧ ತನ್ನ ನಿಲುವನ್ನು ವಿಶ್ವಕ್ಕೆ ತಿಳಿಸಲು ನಿಯೋಗವನ್ನು ರಚಿಸಿದೆ.

ಅಭೂತಪೂರ್ವ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ ರಚನೆಯಾಗಿರುವ ಈ ನಿಯೋಗದಲ್ಲಿ ಸರ್ವಪಕ್ಷಗಳ ಏಳು ಸಂಸದರು, ಮಾಜಿ ಮಂತ್ರಿಗಳು, ರಾಜಕಾರಣಿಗಳು ಸೇರಿ ಒಟ್ಟು 51 ನಾಯಕರು ಇದ್ದಾರೆ. ಈ 51 ರಾಜಕೀಯ ನಾಯಕರಲ್ಲಿ 31 ಮಂದಿ ಆಡಳಿತ ಪಕ್ಷವಾದ ಎನ್ ಡಿಎ ಗೆ ಸೇರಿದ್ದರೆ ಉಳಿದ 20 ಮಂದಿ ವಿಪಕ್ಷ ಸದಸ್ಯರಾಗಿದ್ದಾರೆ.

ಈ ನಿಯೋಗವು ಏಳು ತಂಡಗಳಾಗಿ 32 ದೇಶಗಳಿಗೆ ಮತ್ತು ಬ್ರಸೆಲ್ಸ್‌ನಲ್ಲಿರುವ ಇಯು ಪ್ರಧಾನ ಕಚೇರಿಗೆ ಭೇಟಿ ನೀಡಲಿದೆ. ಭಯೋತ್ಪಾದನೆಯನ್ನು ನಿಭಾಯಿಸುವ ಭಾರತದ ಸಂಕಲ್ಪವನ್ನು ವ್ಯಕ್ತಪಡಿಸುವುದು ಈ ರಾಜತಾಂತ್ರಿಕ ಸಂಪರ್ಕ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಅಪರೂಪದ ಹೆಜ್ಜೆಯಾಗಿ ಎಲ್ಲ ಪಕ್ಷಗಳನ್ನು ಒಟ್ಟುಗೂಡಿಸಿದೆ.

ಏಳು ನಿಯೋಗಗಳ ನಾಯಕರಾಗಿ ಕಾಂಗ್ರೆಸ್ ನ ಶಶಿ ತರೂರ್, ಬಿಜೆಪಿಯ ರವಿಶಂಕರ್ ಪ್ರಸಾದ್, ಜೆಡಿಯುನ ಸಂಜಯ್ ಕುಮಾರ್ ಝಾ, ಬಿಜೆಪಿಯ ಬೈಜಯಂತ್ ಪಾಂಡಾ, ಡಿಎಂಕೆಯ ಕನಿಮೋಳಿ ಕರುಣಾನಿಧಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆಯ ಶ್ರೀಕಾಂತ್ ಏಕನಾಥ್ ಶಿಂಧೆ ಕಾರ್ಯ ನಿರ್ವಹಿಸಲಿದ್ದಾರೆ.

ಲೋಕಸಭೆಯ ವಿಪಕ್ಷಗಳ ನಾಯಕ ರಾಹುಲ್‌ ಗಾಂಧಿ ಅವರು ನಾಲ್ಕು ಮಂದಿ ಸಂಸದರ ಹೆಸರನ್ನು ಸೂಚಿಸಿದ್ದರು. ಇದರಲ್ಲಿ ಆನಂದ್‌ ಶರ್ಮಾ, ಗೌರವ್‌ ಗೊಗೊಯ್‌, ರಾಜಾ ಬ್ರಾರ್‌ ಮತ್ತು ರಾಜ್ಯಸಭೆ ಸಂಸದ ಡಾ.ಸೈಯದ್‌ ನಾಸೀರ್‌ ಹುಸೇನ್‌ ಸೇರಿದ್ದು, ಇವರಲ್ಲಿ ಆನಂದ್ ಶರ್ಮಾ ಅವರು ಮಾತ್ರ ನಿಯೋಗದ ಸದಸ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕಾಂಗ್ರೆಸ್ ನ ಶಶಿ ತರೂರ್ ಜೊತೆಗೆ ಕಾಂಗ್ರೆಸ್ ನಾಯಕರಾದ ಮನೀಶ್ ತಿವಾರಿ, ಅಮರ್ ಸಿಂಗ್ ಮತ್ತು ಸಲ್ಮಾನ್ ಖುರ್ಷಿದ್ ಅವರು ಕೂಡ ನಿಯೋಗದ ಭಾಗವಾಗಿದ್ದಾರೆ. ಏಳು ನಿಯೋಗವು ತಲಾ ಒಬ್ಬ ಮುಸ್ಲಿಂ ಸದಸ್ಯರನ್ನು ಒಳಗೊಂಡಿದೆ.

ಸಂಸತ್ ಸದಸ್ಯರಲ್ಲದ ಮಾಜಿ ಕೇಂದ್ರ ಸಚಿವರಾದ ಗುಲಾಮ್ ನಬಿ ಆಜಾದ್, ಎಂ.ಜೆ. ಅಕ್ಬರ್, ಆನಂದ್ ಶರ್ಮಾ, ವಿ. ಮುರಳೀಧರನ್, ಖುರ್ಷಿದ್ ಮತ್ತು ಎಸ್.ಎಸ್. ಅಹ್ಲುವಾಲಿಯಾ ಕೂಡ ಈ ನಿಯೋಗದಲ್ಲಿದ್ದಾರೆ.

ನಿಯೋಗ 1

ಬಿಜೆಪಿಯ ಬೈಜಯಂತ್ ಪಾಂಡಾ ನೇತೃತ್ವದ ಈ ನಿಯೋಗದಲ್ಲಿ ಬಿಜೆಪಿಯ ನಿಶಿಕಾಂತ್ ದುಬೆ, ಫಾಂಗ್ನಾನ್ ಕೊನ್ಯಾಕ್, ರೇಖಾ ಶರ್ಮಾ, ಎಐಎಂಐಎಂನ ಅಸಾದುದ್ದೀನ್ ಓವೈಸಿ, ನಾಮನಿರ್ದೇಶಿತ ಸತ್ನಮ್ ಸಂಧು, ಮಾಜಿ ಸಚಿವ ಗುಲಾಮ್ ನಬಿ ಆಜಾದ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರಿಂಗ್ಲಾ ಇದ್ದಾರೆ.

ನಿಯೋಗ 2

ಬಿಜೆಪಿಯ ರವಿಶಂಕರ್ ಪ್ರಸಾದ್ ನೇತೃತ್ವದ ನಿಯೋಗದಲ್ಲಿ ಬಿಜೆಪಿಯ ದಗ್ಗುಬಟ್ಟಿ ಪುರಂದೇಶ್ವರಿ, ಎಸ್‌ಎಸ್-ಯುಬಿಟಿಯ ಪ್ರಿಯಾಂಕಾ ಚತುರ್ವೇದಿ, ನಾಮನಿರ್ದೇಶಿತ ಗುಲಾಮ್ ನಬಿ ಖತಾನಾ, ಕಾಂಗ್ರೆಸ್ ನ ಅಮರ್ ಸಿಂಗ್, ಬಿಜೆಪಿಯ ಸಮಿಕ್ ಭಟ್ಟಾಚಾರ್ಯ, ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಮತ್ತು ಮಾಜಿ ರಾಜತಾಂತ್ರಿಕ ಪಂಕಜ್ ಸರನ್ ಇದ್ದಾರೆ.

ಈ ಎರಡು ತಂಡಗಳ ಸದಸ್ಯರು ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ, ಇಯು, ಇಟಲಿ ಮತ್ತು ಡೆನ್ಮಾರ್ಕ್‌ಗೆ ಪ್ರಯಾಣಿಸಲಿದ್ದಾರೆ.

ನಿಯೋಗ 3

ಜೆಡಿಯುನ ಸಂಜಯ್ ಕುಮಾರ್ ಝಾ ನೇತೃತ್ವದ ನಿಯೋಗದಲ್ಲಿ ಬಿಜೆಪಿಯ ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರಧಾನ್ ಬರುವಾ, ಹೇಮಾಂಗ್ ಜೋಶಿ, ತೃಣಮೂಲದ ಯೂಸುಫ್ ಪಠಾಣ್, ಸಿಪಿಐ-ಎಂನ ಜಾನ್ ಬ್ರಿಟ್ಟಾಸ್, ಮಾಜಿ ಸಚಿವ ಖುರ್ಷಿದ್ ಮತ್ತು ಮಾಜಿ ರಾಜತಾಂತ್ರಿಕ ಮೋಹನ್ ಕುಮಾರ್ ಇದ್ದಾರೆ. ಈ ನಿಯೋಗವು ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಲಿದೆ.

ನಿಯೋಗ 4

ಶಿವಸೇನೆಯ ಶ್ರೀಕಾಂತ್ ಏಕನಾಥ್ ಶಿಂಧೆ ಅವರ ನೇತೃತ್ವದ ನಿಯೋಗದಲ್ಲಿ ಬಿಜೆಪಿಯ ಬನ್ಸುರಿ ಸ್ವರಾಜ್, ಅತುಲ್ ಗರ್ಗ್, ಮನನ್ ಕುಮಾರ್ ಮಿಶ್ರಾ, ಐಯುಎಂಎಲ್ ನ ಇ.ಟಿ. ಮೊಹಮ್ಮದ್ ಬಶೀರ್, ಬಿಜೆಡಿಯ ಸಸ್ಮಿತ್ ಪಾತ್ರ, ಮಾಜಿ ಸಚಿವ ಎಸ್.ಎಸ್. ಅಹ್ಲುವಾಲಿಯಾ ಮತ್ತು ಮಾಜಿ ರಾಜತಾಂತ್ರಿಕ ಸುಜನ್ ಚಿನೋಯ್ ಇದ್ದಾರೆ. ರೀ ತಂಡ ಯುಎಇ, ಲೈಬೀರಿಯಾ, ಕಾಂಗೋ ಮತ್ತು ಸಿಯೆರಾ ಲಿಯೋನ್‌ಗೆ ಪ್ರಯಾಣಿಸಲಿದೆ.

ನಿಯೋಗ 5

ಕಾಂಗ್ರೆಸ್ ನ ಶಶಿ ತರೂರ್ ನೇತೃತ್ವದ ಎಲ್‌ಜೆಪಿ-ಆರ್‌ವಿಯ ಶಾಂಭವಿ, ಜೆಎಂಎಂನ ಸರ್ಫರಾಜ್ ಅಹ್ಮದ್, ಟಿಡಿಪಿಯ ಜಿ ಎಂ ಹರೀಶ್ ಬಾಲಯೋಗಿ, ಬಿಜೆಪಿಯ ಶಶಾಂಕ್ ಮಣಿ ತ್ರಿಪಾಠಿ, ಭುವನೇಶ್ವರ ಕಲಿತಾ, ತೇಜಸ್ವಿ ಸೂರ್ಯ, ಶಿವಸೇನಾದ ಮಿಲಿಂದ್ ದಿಯೋರಾ ಮತ್ತು ಮಾಜಿ ರಾಜತಾಂತ್ರಿಕ ಅಧಿಕಾರಿ ತರಣ್‌ಜಿತ್ ಸಂಧು ಇದ್ದಾರೆ. ಇವರು ಯುಎಸ್, ಪನಾಮ, ಗಯಾನಾ, ಕೊಲಂಬಿಯಾ ಮತ್ತು ಬ್ರೆಜಿಲ್‌ಗೆ ಪ್ರಯಾಣಿಸಲಿದ್ದಾರೆ.

ಇದನ್ನೂ ಓದಿ: ISRO EOS-09: ಅದಮ್ಯ ಕನಸು ಹೊತ್ತಿದ್ದ ಇಸ್ರೋದ EOS-09 ಉಪಗ್ರಹ ಉಡಾವಣೆ ವಿಫಲ

ನಿಯೋಗ 6

ಕನಿಮೋಳಿ ನೇತೃತ್ವದ ನಿಯೋಗದಲ್ಲಿ ಎಸ್‌ಪಿಯ ರಾಜೀವ್ ರೈ, ಎನ್‌ಸಿಯ ಮಿಯಾನ್ ಅಲ್ತಾಫ್ ಅಹ್ಮದ್, ಬಿಜೆಪಿಯ ಬ್ರಿಜೇಶ್ ಚೌಟ, ಆರ್‌ಜೆಡಿಯ ಪ್ರೇಮ್ ಚಂದ್ ಗುಪ್ತಾ, ಎಎಪಿಯ ಅಶೋಕ್ ಕುಮಾರ್ ಮಿತ್ತಲ್ ಮತ್ತು ಮಾಜಿ ರಾಜತಾಂತ್ರಿಕರಾದ ಮಂಜೀವ್ ಪುರಿ ಮತ್ತು ಜಾವೇದ್ ಅಶ್ರಫ್ ಅವರು ಸ್ಪೇನ್, ಗ್ರೀಸ್, ಸ್ಲೊವೇನಿಯಾ, ಲಾಟ್ವಿಯಾ ಮತ್ತು ರಷ್ಯಾಕ್ಕೆ ಪ್ರಯಾಣಿಸಲಿದ್ದಾರೆ.

ನಿಯೋಗ 7

ಎನ್‌ಸಿಪಿಯ ಸುಪ್ರಿಯಾ ಸುಳೆ ನೇತೃತ್ವದ ಈ ನಿಯೋಗದಲ್ಲಿ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ, ಅನುರಾಗ್ ಠಾಕೂರ್, ಎಎಪಿಯ ವಿಕ್ರಮಜಿತ್ ಸಾಹ್ನಿ, ಕಾಂಗ್ರೆಸ್ ನ ಮನೀಷ್ ತಿವಾರಿ, ಟಿಡಿಪಿಯ ಲವು ಶ್ರೀಕೃಷ್ಣ ದೇವರಾಯಲು, ಮಾಜಿ ಸಚಿವರಾದ ಮುರಳೀಧರನ್ ಮತ್ತು ಆನಂದ್ ಶರ್ಮಾ ಅವರನ್ನು ಒಳಗೊಂಡಿದೆ. ಈ ತಂಡ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಲಿದೆ.