ತಿರುವನಂತಪುರ, ಫೆ.14: 10 ತಿಂಗಳ ಮಗುವೊಂದರ ಅಂಗಾಂಗ ದಾನ ಮಾಡಿದ ಘಟನೆ ಕೇರಳದ (Kerala) ಎರ್ನಾಕುಲಂನಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ (Road accident) ಗಂಭೀರ ಗಾಯಗೊಂಡಿದ್ದ ಮಗುವಿನ ಮೆದುಳು ನಿಷ್ಕ್ರಿಯವಾಗಿತ್ತು. ಹೀಗಾಗಿ ಪೋಷಕರು ಕೂಸಿನ ಅಂಗಾಂಗ ದಾನ (Baby’s organ donated) ಮಾಡಿದ್ದಾರೆ. ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, 10 ತಿಂಗಳ ಮಗುವಿನ ಪೋಷಕರಾದ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಎಂಬುವವರು ಮಗುವಿನ ಯಕೃತ್ತು, ಮೂತ್ರಪಿಂಡಗಳು, ಹೃದಯ ಕವಾಟ ಮತ್ತು ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಆ ಮಗು ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿದ್ದಾಳೆ.
ತಿರುವನಂತಪುರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 6 ತಿಂಗಳ ಮಗುವಿಗೆ ಈ ಮಗುವಿನ ಯಕೃತ್ತನ್ನು ನೀಡಲಾಗುವುದು. ರಾಜ್ಯದಲ್ಲಿ ಮರಣೋತ್ತರ ಅಂಗಾಂಗ ದಾನದ ಮೂಲಕ ಯಕೃತ್ತು ಪಡೆದ ಅತ್ಯಂತ ಕಿರಿಯ ಮಗು ಇದಾಗಿದೆ.
ಪುಟ್ಟ ಕಂದಮ್ಮನ ಕಳೆದುಕೊಂಡ ದುಃಖ ಇಮ್ಮಡಿಗೊಂಡಿದ್ದರೂ, ಬೇರೆ ಮಕ್ಕಳ ಜೀವ ಉಳಿಸಲು ಪೋಷಕರು ತೆಗೆದುಕೊಂಡ ನಿರ್ಧಾರ ಬಹಳ ಮಹತ್ವದ್ದು. ಪೋಷಕರ ನಿರ್ಧಾರಕ್ಕೆ ಆರೋಗ್ಯ ಸಚಿವೆ ವೀಣಾ ಜಾರ್ಜ್ಗೆ ಕೃತಜ್ಞತೆ ಸಲ್ಲಿಸಿದರು. ಕುಟುಂಬದ ದುಃಖದಲ್ಲಿ ತಾವು ಸಹ ಭಾಗಿಯಾಗಿರುವುದಾಗಿ ಸಚಿವರು ಹೇಳಿದರು.
ಮದುವೆ ದಿನವೇ ಅಂಗಾಂಗ ದಾನ; ಅಥಣಿಯಲ್ಲೊಂದು ಮಾದರಿ ಜೋಡಿ
ಫೆಬ್ರವರಿ 5 ರಂದು ಮಧ್ಯಾಹ್ನ 2.30 ಕ್ಕೆ ಪತ್ತನಂತಿಟ್ಟದ ಮಲ್ಲಪ್ಪಲ್ಲಿ ನಿವಾಸಿಗಳ ಪುತ್ರಿ ಅಲಿನ್ ಶೆರಿನ್ ಅಬ್ರಹಾಂ ಎಂಬುವವರ 10 ತಿಂಗಳ ಮಗು ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿತ್ತು. ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆದರೆ, ಮಗುವಿನ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಪೋಷಕರು ಮಗುವಿನ ಅಂಗಾಂಗ ದಾನ ಮಾಡುವ ಮೂಲಕ ಬೇರೆ ಮಕ್ಕಳ ಜೀವಕ್ಕೆ ಬೆಳಕಾಗಿದ್ದಾರೆ.
ಕೊಟ್ಟಾಯಂನಿಂದ ಎಂಸಿ ರಸ್ತೆ ಮೂಲಕ ತಿರುವಲ್ಲಾಗೆ ಪ್ರಯಾಣಿಸುತ್ತಿದ್ದಾಗ, ವಿರುದ್ಧ ದಿಕ್ಕಿನಿಂದ ಬಂದ ಕಾರು ಜಂಕ್ಷನ್ ಬಳಿ ಮಗುವಿಗೆ ಡಿಕ್ಕಿ ಹೊಡೆದಿತ್ತು. ಮಗು ಗಂಭೀರವಾಗಿ ಗಾಯಗೊಂಡಿದ್ದು, ಮಗುವಿನ ತಾಯಿ ಮತ್ತು ಆಕೆಯ ಜೊತೆಗಿದ್ದ ತಾಯಿಯ ಪೋಷಕರು ಗಂಭೀರವಾಗಿ ಗಾಯಗೊಂಡಿದ್ದರು.
ಅಪಘಾತದ ನಂತರ, ಮಗುವನ್ನು ಚಂಗನಶ್ಯೇರಿ ಮತ್ತು ತಿರುವಲ್ಲಾ ಆಸ್ಪತ್ರೆಗಳಿಗೆ ಮತ್ತು ನಂತರ ಫೆಬ್ರವರಿ 7 ರಂದು ಕೊಚ್ಚಿಯ ಅಮೃತ ಆಸ್ಪತ್ರೆಗೆ ದಾಖಲಿಸಲಾಯಿತು. ಫೆಬ್ರವರಿ 13 ರಂದು, ಮಗುವಿನ ಮೆದುಳು ನಿಷ್ಕ್ರಿಯಗೊಂಡಿತು ಮತ್ತು ಮಗುವಿನ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.
Organ Donation: ಪತಿಯ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪತ್ನಿ
ತಿರುವನಂತಪುರಂ ವೈದ್ಯಕೀಯ ಕಾಲೇಜು ಎಸ್ಎಟಿ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ಶಾಸ್ತ್ರ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವೊಂದಕ್ಕೆ ಈ ಮಗುವಿನ ಎರಡು ಮೂತ್ರಪಿಂಡಗಳನ್ನು ನೀಡಲಾಗುವುದು. ಯಕೃತ್ತನ್ನು ತಿರುವನಂತಪುರದ ಕಿಮ್ಸ್ ಆಸ್ಪತ್ರೆಗೆ, ಹೃದಯ ಕವಾಟವನ್ನು ತಿರುವನಂತಪುರದ ಶ್ರೀ ಚಿತ್ರ ಸಂಸ್ಥೆಗೆ ಮತ್ತು ಎರಡು ಕಣ್ಣುಗುಡ್ಡೆಗಳನ್ನು ಅಮೃತ ಆಸ್ಪತ್ರೆಗೆ ದಾನ ಮಾಡಲಾಗಿದೆ.
ಗೃಹ ಇಲಾಖೆಯ ಸಹಕಾರದೊಂದಿಗೆ ಕೆ-ಸೊಟ್ಟೊ (ಕೇರಳ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ) ನೇತೃತ್ವದಲ್ಲಿ ಅಂಗಾಂಗ ದಾನವನ್ನು ಸಂಯೋಜಿಸಲಾಯಿತು. 10 ತಿಂಗಳ ಮಗು ಅಲಿನ್ ಶೆರಿನ್‌ನ ಅಂಗಗಳನ್ನು ಹೊತ್ತ ಆಂಬ್ಯುಲೆನ್ಸ್ ಕೇವಲ 3 ಗಂಟೆ 15 ನಿಮಿಷಗಳಲ್ಲಿ ಕೊಚ್ಚಿಯಿಂದ ತಿರುವನಂತಪುರ ತಲುಪಿದೆ. ಇದು ಎರ್ನಾಕುಲಂನಿಂದ ಸಾಮಾನ್ಯ 5–6 ಗಂಟೆಗಳ ಪ್ರಯಾಣಕ್ಕಿಂತ ಬಹಳ ವೇಗವಾಗಿತ್ತು. ಅಂಗಗಳನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆ, ಎಸ್ಎಟಿ ಆಸ್ಪತ್ರೆ ಮತ್ತು ಶ್ರೀ ಚಿತ್ರ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಇಂದು (ಫೆ.14) ರಾತ್ರಿ ಎರಡು ಶಸ್ತ್ರಚಿಕಿತ್ಸೆಗಳನ್ನು ನಿಗದಿಪಡಿಸಲಾಗಿದೆ.