ದೆಹಲಿಯಲ್ಲಿ 4,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ: ವಿಶ್ವಸಂಸ್ಥೆ ಕಳವಳ
Delhi Protests: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸುತ್ತಿದ್ದ 4,000ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿತ್ತು. ಸಾಮೂಹಿಕ ಬಂಧನಗಳ ವರದಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ ಕಳವಳ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರನ್ನು ನಿರ್ವಹಿಸುವಾಗ ಅಧಿಕಾರಿಗಳು ಸಂಯಮ ಪಾಲಿಸಬೇಕು ಮತ್ತು ಅವರ ಕಳವಳಗಳಿಗೆ ಪರಿಹಾರ ಕಂಡುಕೊಳ್ಳಲು ಅರ್ಥಪೂರ್ಣ ಸಂವಾದ ನಡೆಸಬೇಕು ಎಂದು ಮನವಿ ಮಾಡಿದೆ. ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೇರಿ ಮೂವರು ನಾಯಕರನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ. 10: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ (Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸುತ್ತಿದ್ದ 4,000ಕ್ಕೂ ಹೆಚ್ಚು ಜನರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೆ ಕರೆ ನೀಡಿತ್ತು.
ಈ ಬೆಳವಣಿಗೆಯ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ (Office of the UN High Commissioner for Human Rights) ಕಳವಳ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುವ ಮೊದಲು ಮತ್ತು ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು, ಹೋರಾಟದ ನಾಯಕರು, ನಾಗರಿಕ ಸಮಾಜದ ಸಂಘಟನೆಗಳ ಸದಸ್ಯರು, ವಕೀಲರು ಹಾಗೂ ಪತ್ರಕರ್ತರನ್ನು ಸಾಮೂಹಿಕವಾಗಿ ವಶಕ್ಕೆ ಪಡೆಯಲಾಗಿದೆ ಎಂಬ ವರದಿಗಳ ಬಗ್ಗೆ ಆತಂಕವಿದೆ ಎಂದು ಕಚೇರಿ ತಿಳಿಸಿದೆ.
ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ:
#Breaking: UN Human Rights expresses concern over mass detention of protestors in Delhi’s anti-SIR protests It says that the — right to peaceful assembly must be fulfilled — all those arbitrarily detained must be immediately released — calls for “meaningful dialogue” to address “broadly held concerns”
— Dhairrya Maheshwari (@dhairyam14) October 10, 2026
ಸಂಯಮದಿಂದ ವರ್ತಿಸಲು ವಿಶ್ವಸಂಸ್ಥೆ ಮನವಿ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಕ್ತಾರ ಥಮೀನ್ ಅಲ್-ಖೀತಾನ್ (Thameen Al-Kheetan) ಪ್ರತಿಭಟನಾಕಾರರನ್ನು ನಿರ್ವಹಿಸುವಾಗ ಅಧಿಕಾರಿಗಳು ಗರಿಷ್ಠ ಸಂಯಮವನ್ನು ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು ವ್ಯಕ್ತಪಡಿಸುತ್ತಿರುವ ವ್ಯಾಪಕ ಕಳವಳಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಅರ್ಥಪೂರ್ಣ ಸಂವಾದ ನಡೆಸಬೇಕು ಎಂದೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಮನವಿ ಮಾಡಿದೆ.
ಕಾಂಗ್ರೆಸ್ ಕಚೇರಿ ಮುಂದೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಣೆ
ದೆಹಲಿಯ ಕೇಂದ್ರ ಭಾಗದಲ್ಲಿರುವ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ ಯೋಜಿಸಿತ್ತು. ಆದರೆ ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದರು. ಸ್ಥಳದ ಸುತ್ತ ಭಾರೀ ಪೊಲೀಸ್ ಬಂದೋಬಸ್ತ್ ಹಾಗೂ ರಸ್ತೆ ತಡೆಗಳನ್ನು ನಿರ್ಮಿಸಿದ್ದರಿಂದ ಹೆಚ್ಚಿನ ಪ್ರತಿಭಟನಾಕಾರರಿಗೆ ಪ್ರತಿಭಟನಾ ಸ್ಥಳ ತಲುಪಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳನ್ನು ಮುಂದಿಟ್ಟುಕೊಂಡು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಪಕ್ಷ ಆಗ್ರಹಿಸಿದೆ.
ವಿಮಾನ ನಿಲ್ದಾಣದಿಂದಲೇ ಪಕ್ಷದ ನಾಯಕರ ವಶ
ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಇತರ ಇಬ್ಬರು ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪಕ್ಷ ತಿಳಿಸಿದೆ. ಮುಂಬೈಯಿಂದ ಆಗಮಿಸಿದ ಅವರಿದ್ದ ವಿಮಾನ ದೆಹಲಿಯಲ್ಲಿ ಇಳಿದ ಕೆಲವೇ ಕ್ಷಣಗಳಲ್ಲಿ ಈ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಆದರೆ, ಈ ನಾಯಕರನ್ನು ವಶಕ್ಕೆ ಪಡೆದಿರುವ ಕುರಿತು ದೆಹಲಿ ಪೊಲೀಸರು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಈ ಬೆಳವಣಿಗೆಯು ಪ್ರತಿಭಟನೆಯ ಹಕ್ಕು, ಕಾನೂನು ಸುವ್ಯವಸ್ಥೆ ಮತ್ತು ನಾಗರಿಕ ಸ್ವಾತಂತ್ರ್ಯಗಳ ಕುರಿತು ಚರ್ಚೆಗೆ ಕಾರಣವಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಸಂಯಮ ಮತ್ತು ಸಂವಾದಕ್ಕೆ ಕರೆ ನೀಡಿದೆ.