ಶ್ರೀನಗರ, ಏ. 22: ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 2025ರ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ರಕ್ತಪಾತ ನಡೆಸಿದಾಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು (Pahalgam Attack). ಮಿನಿ ಸ್ವಿಟ್ಜರ್ಲೆಂಡ್ (Mini Switzerland) ಎಂದು ಕರೆಯಲ್ಪಡುವ ಆ ಸುಂದರ ತಾಣದಲ್ಲಿ ಸಾವು-ನೋವಿನ ಚೀರಾಟ ಕೇಳಿಬರುತ್ತಿದ್ದಾಗ, ತನ್ನ ಪ್ರಾಣವನ್ನು ಪಣಕ್ಕಿಟ್ಟು ಛತ್ತೀಸ್‌ಗಢದ 11 ಪ್ರವಾಸಿಗರನ್ನು ರಕ್ಷಿಸಿದ ನಜಾಕತ್ ಅಲಿ (Nazakat Ali) ಎಂಬ ಯುವಕ ಈಗ ಕಣಿವೆಯ ಅಪ್ರತಿಮ ಹೀರೋ ಆಗಿ ಹೊರಹೊಮ್ಮಿದ್ದಾರೆ.
30 ವರ್ಷದ ಪ್ರವಾಸಿ ಮಾರ್ಗದರ್ಶಿ ಮತ್ತು ಶಾಲು ವ್ಯಾಪಾರಿ ನಜಾಕತ್ ಅಲಿ ಕಳೆದ ವರ್ಷ ಏಪ್ರಿಲ್ 22ರಂದು ಛತ್ತೀಸ್‌ಗಢದಿಂದ ಬಂದಿದ್ದ 11 ಪ್ರವಾಸಿಗರನ್ನು ಬೈಸರನ್ ಕಣಿವೆಗೆ ಕರೆದೊಯ್ದಿದ್ದರು. ಜಿಪ್‌ಲೈನ್ ಬಳಿ ಮಕ್ಕಳೊಂದಿಗೆ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುತ್ತಿದ್ದಾಗ ದಿಢೀರನೆ ಗುಂಡಿನ ಸದ್ದು ಕೇಳಿಸಿತು. ಆರಂಭದಲ್ಲಿ ಇದು ಸೇನೆ ಮತ್ತು ಉಗ್ರರ ನಡುವಿನ ಕಾಳಗ ಇರಬಹುದು ಎಂದು ಭಾವಿಸಿದ್ದ ನಜಾಕತ್‌ಗೆ ಉಗ್ರನೊಬ್ಬ ನೇರವಾಗಿ ಪ್ರವಾಸಿಗರ ಮೇಲೆ ಗುಂಡು ಹಾರಿಸುತ್ತಿರುವುದನ್ನು ಕಂಡಾಗ ಪರಿಸ್ಥಿತಿಯ ಗಂಭೀರತೆ ಅರಿವಾಯಿತು.
250 ಕಿಲೋ ಮೀಟರ್ ಬೆನ್ನಟ್ಟಿ ಉಗ್ರರ ಬೇಟೆಯಾಡಿದ ಭಾರತೀಯ ಸೇನೆ
ಪ್ರಾಣ ಉಳಿಸಿದ ಏಳು ಕಿಲೋ ಮೀಟರ್ ನಡಿಗೆ
ತಕ್ಷಣವೇ ಕಾರ್ಯಪ್ರವೃತ್ತರಾದ ನಜಾಕತ್, ತಮ್ಮ ಜತೆಯಿದ್ದ 11 ಪ್ರವಾಸಿಗರಿಗೆ ನೆಲದ ಮೇಲೆ ಮಲಗುವಂತೆ ಸೂಚಿಸಿದರು. ಕಣಿವೆಯ ಪ್ರತಿಯೊಂದು ಕಾಲುದಾರಿಯ ಅರಿವಿದ್ದ ಅವರು, ದಟ್ಟ ಅರಣ್ಯದ ಮೂಲಕ ಪ್ರವಾಸಿಗರನ್ನು ಸುಮಾರು ಏಳು ಕಿಲೋ ಮೀಟರ್ ದೂರ ಪಹಲ್ಗಾಮ್‌ವರೆಗೆ ಸುರಕ್ಷಿತವಾಗಿ ಕರೆತಂದರು. ಅಷ್ಟೇ ಅಲ್ಲದೆ, ಇಬ್ಬರು ಮಹಿಳೆಯರು ಕಾಡಿನಲ್ಲಿ ಬಾಕಿಯಾಗಿದ್ದಾರೆ ಎಂದು ತಿಳಿದಾಗ, ಮತ್ತೆ ಪ್ರಾಣದ ಹಂಗು ತೊರೆದು ಸಾವಿನ ವಲಯಕ್ಕೆ ಮರಳಿ ಅವರನ್ನು ಸುರಕ್ಷಿತವಾಗಿ ಕರೆತಂದರು. ಈ ದಾಳಿಯಲ್ಲಿ ನಜಾಕತ್ ಅವರ ಸೋದರ ಸಂಬಂಧಿ ಸೈಯದ್ ಆದಿಲ್ ಶಾ ಎಂಬುವವರು ಮೃತಪಟ್ಟಿದ್ದರು.
ಪಹಲ್ಗಾಮ್ ದಾಳಿಯ ದೃಶ್ಯ:
ಗೌರವ ಮತ್ತು ವಿಶ್ವಾಸ
ನಜಾಕತ್ ಅವರ ಈ ಧೈರ್ಯಶಾಲಿ ಕೃತ್ಯವನ್ನು ಗುರುತಿಸಿರುವ ಛತ್ತೀಸ್‌ಗಢ ಸರ್ಕಾರ, ರಾಯ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಕ ನೀಡಿ ಗೌರವಿಸಿದೆ. ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದಂತೆ ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದರು. "ಕಾಶ್ಮೀರಕ್ಕೆ ಈಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಿಂತಿರುಗುತ್ತಿದ್ದಾರೆ. ಅವರನ್ನು ಸ್ವಾಗತಿಸಲು ನಾನೊಬ್ಬನೇ ಅಲ್ಲ, ನನ್ನಂತಹ ನೂರಾರು ನಜಾಕತ್‌ಗಳು ಸಿದ್ಧರಿದ್ದಾರೆ" ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. ಅಮಾಯಕ ಪ್ರವಾಸಿಗರನ್ನು ರಕ್ಷಿಸಿದ ಈ ಮಾನವೀಯತೆಯ ಕಥೆ ಈಗ ದಾಳಿಯ ಕರಾಳ ನೆನಪುಗಳ ನಡುವೆ ಭರವಸೆಯ ಬೆಳಕಾಗಿ ಮೂಡಿಬಂದಿದೆ.