Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಯಾರೆಂದು ಬಹಿರಂಗಪಡಿಸಿದ ಎನ್‌ಐಎ!
Pahalgam Terror Attack: ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಜಾಟ್ ತಲೆಗೆ 10 ಲಕ್ಷ ರು. ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಘೋಷಿಸಿದೆ. ತನಿಖೆ ಪೂರ್ಣಗೊಳಿಸಲು ಎನ್‌ಐಎ ಹೆಚ್ಚುವರಿ 45 ದಿನಗಳನ್ನು ಕೋರಿತ್ತು. ಅದರಂತೆ ಇದೀಗ ಈ ಕೃತ್ಯವನ್ನು ಯಾರು ಮಾಡಿದ್ದಾರೆಂದು ತನ್ನ ವರದಿಯಲ್ಲಿ ತಿಳಿಸಿದೆ.
ಫಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಯಾರೆಂದು ಪತ್ತೆ ಹಚ್ಚಿದ ಎನ್‌ಐಎ! -
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Terror Attack) ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೋಮವಾರ (ಡಿಸೆಂಬರ್ 15, 2025) ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಲಷ್ಕರ್-ಎ-ತೈಬಾ ಭಯೋತ್ಪಾದಕ ಸಾಜಿದ್ ಸೈಫುಲ್ಹಾ ಜಟ್ (Sajid Saifullah Jutt) ಅವರನ್ನು ದಾಳಿಯ ಮಾಸ್ಟರ್ ಮೈಂಡ್ ಎಂದು ಹೆಸರಿಸಿದೆ. ಎನ್ಐಎ ಸಾಜಿದ್ ಜಟ್ ಅವರನ್ನು ಪತ್ತೆ ಹಚ್ಚಿ ಹಿಡಿದುಕೊಟ್ಟರೆ ಅವರಿಗೆ 10 ಲಕ್ಷ ರು. ನಗದು ಬಹುಮಾನವನ್ನು ಘೋಷಿಸಿದೆ.
ಪಹಲ್ಗಾಮ್ ಪ್ರದೇಶದ ಇಬ್ಬರು ನಿವಾಸಿಗಳಾದ ಬಶೀರ್ ಅಹ್ಮದ್ ಜೋಥರ್ ಮತ್ತು ಪರ್ವೇಜ್ ಅಹ್ಮದ್ ಜೋಥರ್ ಅವರನ್ನು 2025ರ ಜೂನ್ 22 ರಂದು ಬಂಧಿಸಲಾಗಿತ್ತು. ಬಂಧಿತ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರಾದ ಸುಲೇಮಾನ್ ಶಾ, ಹಮ್ಜಾ ಅಫ್ಘಾನಿ ಅಲಿಯಾಸ್ ಅಫ್ಘಾನಿ ಮತ್ತು ದಾಳಿ ನಡೆಸಿದ ಜಿಬ್ರಾನ್ ಅವರಿಗೆ ಆಶ್ರಯ ಮತ್ತು ಲಾಜಿಸ್ಟಿಕಲ್ ಬೆಂಬಲ ನೀಡಿದ ಆರೋಪ ಹೊತ್ತಿದ್ದಾರೆ. ಆರೋಪಪಟ್ಟಿ ಸಲ್ಲಿಸಲು ನೀಡಲಾಗಿದ್ದ 180 ದಿನಗಳ ಗಡುವು ಡಿಸೆಂಬರ್ 18 ರಂದು ಮುಕ್ತಾಯಗೊಳ್ಳಲಿದ್ದು, ಡಿಸೆಂಬರ್ 15 ರಂದು ನಿಗದಿತ ಗಡುವಿನೊಳಗೆ ಸಂಸ್ಥೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ.
ನ್ಯಾಯಾಲಯವು ನೀಡಿದ ಆರಂಭಿಕ 90 ದಿನಗಳ ಅವಧಿಯನ್ನು ಮೀರಿ, ತನಿಖೆಯನ್ನು ಪೂರ್ಣಗೊಳಿಸಲು ಎನ್‌ಐಎ ಹೆಚ್ಚುವರಿ 45 ದಿನಗಳನ್ನು ಕೋರಿತ್ತು. ದಾಳಿ ನಡೆಸುವಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜೊತೆ ಸಂಬಂಧ ಹೊಂದಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕರು ಭಾಗಿಯಾಗಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಈ ಹಿಂದೆ ದೃಢಪಡಿಸಿದ್ದರು.
ಲಷ್ಕರ್ ತಂಡದ ಉನ್ನತ ಕಮಾಂಡರ್ ಸಾಜಿದ್ ಜಟ್ ಯಾರು?
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಎಂದು ಎನ್‌ಐಎ ತನ್ನ ಆರೋಪ ಪಟ್ಟಿಯಲ್ಲಿ ಲಷ್ಕರ್ ತಂಡದ ಉನ್ನತ ಕಮಾಂಡರ್ ಸಾಜಿದ್‌ನನ್ನು ಹೆಸರಿಸಿದೆ. ಸಾಜಿದ್‌ನ ಪೂರ್ಣ ಹೆಸರು ಸೈಫುಲ್ಲಾ ಸಾಜಿದ್ ಜಟ್. ಈತ ಪಾಕಿಸ್ತಾನದ ಪಂಜಾಬ್ ರಾಜ್ಯದ ಕಸೂರ್ ಜಿಲ್ಲೆಯ ನಿವಾಸಿ. ಸೈಫುಲ್ಲಾ ಲಷ್ಕರ್ ತೈಬಾದ ಅತ್ಯಂತ ಕ್ರಿಯಾಶೀಲ ಕಮಾಂಡರ್ ಎಂದು ಪರಿಗಣಿಸಲಾಗಿದೆ. ಹಫೀಜ್ ಸಯೀದ್ ನಂತರ ಸಂಘಟನೆಯಲ್ಲಿ ಅವರು ಮೂರನೇ-ಇನ್-ಕಮಾಂಡ್ ಆಗಿದ್ದಾರೆ.
NIA Chargesheets Pak- Based LeT/TRF & 6 other Accused in Pahalgam Terror Attack Case pic.twitter.com/yDnFPw2DGi
— NIA India (@NIA_India) December 15, 2025
ಲಷ್ಕರ್ ತಂಡದ ಪ್ರಾಕ್ಸಿ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ಮುಖ್ಯಸ್ಥ ಸಾಜಿದ್. ಈ ಸಂಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತದೆ. ಈ ಟಿಆರ್‌ಎಫ್ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನಡೆಸಿತು. ಸರ್ಕಾರವು 2023 ರಲ್ಲಿ ಯುಎಪಿಎ ಅಡಿಯಲ್ಲಿ ಈ ಟಿಆರ್‌ಎಫ್ ಅನ್ನು ನಿಷೇಧಿಸಿತು. ಇದಲ್ಲದೆ, ಎನ್‌ಐಎ ಸೈಫುಲ್ಲಾ ಮೇಲೆ 10 ಲಕ್ಷ ರು ಬಹುಮಾನವನ್ನು ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ; 3 ದಿನ 3 ದೇಶಗಳಿಗೆ ಭೇಟಿ ನೀಡಲಿರುವ ಪಿಎಂ
ಎನ್‌ಐಎ ಸಾವಿರಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಿದೆ
ಎನ್‌ಐಎ ಇಲ್ಲಿಯವರೆಗೆ ಪ್ರವಾಸಿಗರು, ಪೋನಿ ಮಾಲೀಕರು, ಛಾಯಾಗ್ರಾಹಕರು, ಅಂಗಡಿಯವರು ಮತ್ತು ಉದ್ಯೋಗಿಗಳು ಸೇರಿದಂತೆ 1,000 ಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಿದೆ. ಭಯೋತ್ಪಾದಕ ಜಾಲದ ಸಂಪೂರ್ಣ ವ್ಯಾಪ್ತಿ ಮತ್ತು ಭೂಗತ ಕಾರ್ಮಿಕರ ಪಾತ್ರವನ್ನು ಸ್ಥಾಪಿಸಲು ಹೆಚ್ಚಿನ ವಿಧಿವಿಜ್ಞಾನ ವರದಿಗಳು, ಮೊಬೈಲ್ ಫೋನ್ ಡೇಟಾ ವಿಶ್ಲೇಷಣೆ ಮತ್ತು ಹೆಚ್ಚುವರಿ ಶಂಕಿತರ ಪರಿಶೀಲನೆ ನಡೆಯುತ್ತಿದೆ ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಯಾವಾಗ ನಡೆಯಿತು?
2025ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಶಸ್ತ್ರಸಜ್ಜಿತ ಭಯೋತ್ಪಾದಕರು ಹಿಂದೂಗಳನ್ನು ಅವರ ಧರ್ಮದ ಬಗ್ಗೆ ಕೇಳುವ ಮೂಲಕ ಮತ್ತು ಕಲ್ಮಾ ಪಠಿಸುವ ಮೂಲಕ ಗುರಿಯಾಗಿಸಿಕೊಂಡಿದ್ದರು. ಈ ಕ್ರೂರ ಭಯೋತ್ಪಾದಕ ದಾಳಿಯಲ್ಲಿ ಇಪ್ಪತ್ತಾರು ಜನರು ಪ್ರಾಣ ಕಳೆದುಕೊಂಡಿದ್ದರು. ಅವರಲ್ಲಿ ಒಬ್ಬರು ನೇಪಾಳಿ ಪ್ರಜೆ ಮತ್ತು ಇನ್ನೊಬ್ಬರು ಜಮ್ಮು ಮತ್ತು ಕಾಶ್ಮೀರದ ನಿವಾಸಿ.