ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಹಲ್ಗಾಮ್‌ ಭಯೋತ್ಪಾದಕ ದಾಳಿ; ಇಂದು ಜಾರ್ಜ್‌ಶೀಟ್‌ ಸಲ್ಲಿಸಲಿದೆ ಎನ್ಐಎ

Pahalgam terror attack: ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ಸಲ್ಲಿಸಲು ಸಿದ್ಧವಾಗಿದೆ. ಈ ದಾಳಿಯಿಂದ ದೇಶವೇ ಬೆಚ್ಚಿ ಬಿದ್ದಿತ್ತು. ಎನ್‌ಐಎ ಇಂದು ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ತನ್ನ ಆರೋಪಪಟ್ಟಿಯನ್ನು ಸಲ್ಲಿಸಲಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಡಿ. 15: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ (Pahalgam terror attack case) ನಡೆದು ಸುಮಾರು ಎಂಟು ತಿಂಗಳಾಗಿದೆ. ಹೀಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ (NIA Court) ತನ್ನ ಆರೋಪಪಟ್ಟಿ ಸಲ್ಲಿಸಲು ಸಜ್ಜಾಗಿದೆ. ಈ ಆರೋಪ ಪಟ್ಟಿಯಲ್ಲಿ ದಾಳಿಯ ಪ್ರಮುಖ ವಿವರಗಳು, ಅದರ ಸೂತ್ರಧಾರರು ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ಥಳೀಯ ಜಾಲದ ಕುರಿತು ಮಹತ್ವದ ಮಾಹಿತಿಗಳು ಬಹಿರಂಗವಾಗುವ ನಿರೀಕ್ಷೆಯಿದೆ.

2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಉಗ್ರಗಾಮಿಗಳು ಗುಂಡಿನ ದಾಳಿ ನಡೆಸುವ ಮುನ್ನ ಧರ್ಮವನ್ನು ಕೇಳಿ ಮುಸ್ಲಿಮೇತರರನನು ಹತ್ಯೆ ಮಾಡಿದ್ದರು. ಕೆಲವರನ್ನು ಕಲ್ಮಾ ಪಠಿಸಲು ಬಲವಂತಪಡಿಸಿದ್ದರು. ಭಯೋತ್ಪಾದಕರು ನಡೆಸಿದ ಈ ದಾಳಿಯಲ್ಲಿ 25 ಪ್ರವಾಸಿಗರು ಹಾಗೂ ಓರ್ವ ಕುದುರೆ ಸವಾರ ಮೃತಪಟ್ಟಿದ್ದರು.

ಪಹಲ್ಗಾಮ್ ದಾಳಿ ಬಗ್ಗೆ ಮತ್ತಷ್ಟು ಆಘಾತಕಾರಿ ಸಂಗತಿ ಬಯಲಿಗೆ

ಎನ್‌ಐಎ ಆರೋಪಪಟ್ಟಿಯಲ್ಲಿ ಬಸೀರ್ ಅಹ್ಮದ್ ಜೋಠರ್, ಪರ್ವೇಜ್ ಅಹ್ಮದ್ ಜೋಠರ್ ಹಾಗೂ ಮೊಹಮ್ಮದ್ ಯೂಸೂಫ್ ಕಟಾರಿ ಎಂಬ ಮೂರು ಸ್ಥಳೀಯ ಸಹಚರರ ಹೆಸರುಗಳನ್ನು ಉಲ್ಲೇಖಿಸುವ ಸಾಧ್ಯತೆಯಿದೆ. ಇವರು ಸುಲೈಮಾನ್ ಶಾ, ಹಂಝಾ ಅಫ್ಘಾನಿ ಅಲಿಯಾಸ್ ಅಫ್ಘಾನ್ ಮತ್ತು ಜಿಬ್ರಾನ್ ಎಂದು ಗುರುತಿಸಲಾದ ಮೂವರು ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡಿದ್ದರೆಂದು ಆರೋಪಿಸಲಾಗಿದೆ.

ದಾಳಿಯ ಮರುದಿನವೇ ಆರಂಭಿಸಲಾದ ವ್ಯಾಪಕ ಶೋಧ ಕಾರ್ಯಾಚರಣೆಯ ಬಳಿಕ, 2025ರ ಜುಲೈ 28ರಂದು ದಾಚಿಗಾಮ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಈ ಭಯೋತ್ಪಾದಕರನ್ನು ಹತ್ಯೆಗೈದಿದ್ದರು.

ಸ್ಥಳೀಯ ನಿವಾಸಿಗಳಾದ ಜೋಠರ್ ಸಹೋದರರು, ಏಪ್ರಿಲ್ 21ರ ರಾತ್ರಿ ಹಿಲ್ ಪಾರ್ಕ್ ಪ್ರದೇಶದ ಗುಡಿಸಲಿನಲ್ಲಿ ಉಗ್ರರಿಗೆ ಆಶ್ರಯ ನೀಡಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ. ದಾಳಿಯ ಬಳಿಕ ಸುಮಾರು ಎರಡು ತಿಂಗಳ ನಂತರ ಜೂನ್ 22ರಂದು ಇಬ್ಬರನ್ನೂ ಬಂಧಿಸಲಾಯಿತು. ಗಾಂಧಿನಗರದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಅವರ ಮೊಬೈಲ್ ಫೋನ್‌ಗಳ ವಿಧಿವಿಜ್ಞಾನ ಪರೀಕ್ಷೆಗಳು, ಪಾಕಿಸ್ತಾನಿ ಸಂಖ್ಯೆಗಳೊಂದಿಗೆ ಇರುವ ಮಹತ್ವದ ಸಂಪರ್ಕಗಳು ಪತ್ತೆಯಾಗಿದ್ದು, ಈ ಮೂಲಕ ದಾಳಿಯ ಹಿಂದೆ ಇರುವ ವ್ಯಾಪಕ ಜಾಲದ ಕುರಿತು ಪ್ರಮುಖ ಸುಳಿವುಗಳು ಲಭಿಸಿವೆ.

ಎನ್‌ಐಎ ಮೂಲಗಳ ಪ್ರಕಾರ, ಪ್ರವಾಸಿಗರು, ಕುದುರೆ ಸವಾರರು, ಛಾಯಾಗ್ರಾಹಕರು ಹಾಗೂ ಅಂಗಡಿ ಮಾಲೀಕರು ಸೇರಿದಂತೆ 1,000ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ತನಿಖೆಯಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಅದರ ಸ್ಥಳೀಯ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಭಾಗಿಯಾಗಿರುವುದನ್ನು ದೃಢಪಡಿಸಿದೆ.

ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಸಮಯದ ಅಗತ್ಯವಿದೆ ಎಂದು ಎನ್‌ಐಎ ಸೆಪ್ಟೆಂಬರ್‌ನಲ್ಲಿ ಜಮ್ಮು ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. ಜತೆಗೆ 45 ದಿನಗಳ ಹೆಚ್ಚುವರಿ ಅವಧಿಯನ್ನು ಪಡೆದುಕೊಂಡಿತ್ತು. ಉಳಿದ ವಿಚಾರಣೆಗಳನ್ನು ಅಂತಿಮಗೊಳಿಸುವ ಜತೆಗೆ ಬಾಕಿ ಇರುವ ಸಾಕ್ಷ್ಯಗಳನ್ನು ಪರಿಶೀಲಿಸಲು, ಅಕ್ಟೋಬರ್ 18ರಂದು ಜೋಠರ್ ಸಹೋದರರನ್ನು ಮರು ವಿಚಾರಣೆಗೆ ಒಳಪಡಿಸಲಾಗಿತ್ತು.

ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7ರಂದು ಆಪರೇಷನ್ ಸಿಂದೂರ್‌ ಕಾರ್ಯಾಚರಣೆ ಆರಂಭಿಸಿತು. ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳನ್ನು ನಡೆಸಿತು. ವರದಿಗಳ ಪ್ರಕಾರ, ಈ ದಾಳಿಗಳಲ್ಲಿ ಸುಮಾರು 100 ಭಯೋತ್ಪಾದಕರು ನಿರ್ನಾಮವಾಗಿದ್ದಾರೆ.

ಈ ವೈಮಾನಿಕ ದಾಳಿಗಳ ಪರಿಣಾಮವಾಗಿ ಗಡಿ ದಾಟಿದ ಗುಂಡಿನ ದಾಳಿ, ಕ್ಷಿಪಣಿ ದಾಳಿಗಳು ಮತ್ತು ವಾಯು ಸಮರಗಳಿಂದ ನಾಲ್ಕು ದಿನಗಳ ಕಾಲ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೇ 10ರಂದು ಎರಡೂ ರಾಷ್ಟ್ರಗಳು ಕದನ ವಿರಾಮ ಘೋಷಿಸಿದವು.