ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ 1 ವರ್ಷ: ಆ ದಿನ ಏನಾಗಿತ್ತು, ಬಳಿಕ ನಡೆದ ಬೆಳವಣಿಗೆಗಳು ಏನೇನು?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ 2025ರ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಧರ್ಮದ ಆಧಾರದಲ್ಲಿ ಪುರುಷ ಪ್ರವಾಸಿಗರನ್ನು ಹತ್ಯೆ ಮಾಡಲಾಗಿತ್ತು. ಈ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ದಾಳಿಯ ವರ್ಷಾಚರಣೆಗೂ ಮುನ್ನ ಜಮ್ಮು ಕಾಶ್ಮೀರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸಂಗ್ರಹ ಚಿತ್ರ

ಶ್ರೀನಗರ, ಏ. 22: ಅಲ್ಲಿದ್ದವರೆಲ್ಲರೂ 2025ರ ಏಪ್ರಿಲ್ 22ರಂದು ತುಂಬಾ ಖುಷಿಯಲ್ಲಿದ್ದರು. ಪ್ರಕೃತಿಯ ಮಡಿಲಲ್ಲಿ ಎಲ್ಲವೂ ಅತ್ಯಂತ ಸುಂದರ ಕ್ಷಣ ಎಂದೆನಿಸುತ್ತಿತ್ತು. ಆದರೆ ಕ್ಷಣ ಮಾತ್ರದಲ್ಲಿ ಎಲ್ಲವೂ ಬದಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ (Jammu and kashmir) ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ (Pahalgam) ಬೈಸರನ್ ಕಣಿವೆಯಲ್ಲಿ ಆ ದುರಂತ (Pahalgam terror attack anniversary) ಘಟನೆ ನಡೆದು ಇವತ್ತಿಗೆ ಒಂದು ವರ್ಷ. ಕಳೆದ ವರ್ಷ ಇದೇ ದಿನ ಲಷ್ಕರ್-ಎ-ತೈಬಾದ (Lashkar-e-Taiba) ಭಯೋತ್ಪಾದಕರು (terror attack) ಓರ್ವ ಸ್ಥಳೀಯ ವ್ಯಕ್ತಿ ಸೇರಿದಂತೆ 26 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಬಳಿಕ ಜಿಲ್ಲೆಯಾದ್ಯಂತ ಪ್ರವಾಸಿ ತಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಜ್ಯದ ಆರ್ಥಿಕತೆಯ ಜೀವನಾಡಿಯಾಗಿದ್ದ ಪ್ರವಾಸೋದ್ಯಮದ ಮೇಲೆ ಈ ದಾಳಿ ಭಾರಿ ಪರಿಣಾಮವನ್ನು ಬೀರಿತ್ತು. ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ 2025ರ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ ಪ್ರವಾಸಿಗರ ಆಗಮನ ಅಪಾರ ಪ್ರಮಾಣದಲ್ಲಿ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶದಾದ್ಯಂತ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳು, ಪ್ರಮುಖ ಸ್ಥಾಪನಾ ಸ್ಥಳಗಳಲ್ಲಿ ಸಮಗ್ರ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.

“ನ್ಯಾಯ ಸಿಕ್ಕಿದೆ, ಭಾರತ ಮರೆಯುವುದಿಲ್ಲ”: ಪಹಲ್ಗಾಮ್ ದಾಳಿ ವಾರ್ಷಿಕೋತ್ಸವಕ್ಕೂ ಮುನ್ನ ಭಾರತೀಯ ಸೇನೆಯ ಮಹತ್ವದ ಸಂದೇಶ

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಭಯೋತ್ಪಾದಕ ದಾಳಿಯ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 50 ಪ್ರವಾಸಿ ತಾಣಗಳನ್ನು ಮುಚ್ಚಲಾಯಿತು. ಭದ್ರತಾ ಲೆಕ್ಕ ಪರಿಶೋಧನೆಯ ಅನಂತರ ಅವುಗಳಲ್ಲಿ ಹಲವನ್ನು ಹಂತಹಂತವಾಗಿ ತೆರೆಯಲಾಯಿತು. ಪ್ರವಾಸಿಗರ ಸುರಕ್ಷತೆ ಹೆಚ್ಚಳಕ್ಕೆ ಮತ್ತು ಉತ್ತಮ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಪಹಲ್ಗಾಮ್‌ನಲ್ಲಿ ಪ್ರವಾಸೋದ್ಯಮ ಸೇವಾ ಪೂರೈಕೆದಾರರಿಗೆ ಈಗ ಕ್ಯುಆರ್ ಕೋಡ್ ಆಧಾರಿತ ಗುರುತಿನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಥುವಾ ಮತ್ತು ಸಾಂಬಾ ಸೇರಿದಂತೆ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಜಿಲ್ಲೆಗಳಲ್ಲಿ ಉಗ್ರರ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದ್ದು, ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ. ತ್ರಿಕೂಟ ಬೆಟ್ಟಗಳಲ್ಲಿರುವ ವೈಷ್ಣೋದೇವಿ ದೇವಾಲಯ ಸೇರಿ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕ್ರಮ ಕೈಗೊಳ್ಳಲಾಗಿದೆ.

ಸಾಂಬಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುಜ್ ಕುಮಾರ್ ರಾಮಗಢ ವಲಯಕ್ಕೆ ಭೇಟಿ ನೀಡಿ, ಗಡಿ ಪ್ರದೇಶಗಳಲ್ಲಿನ ಭದ್ರತಾ ವ್ಯವಸ್ಥೆಗಳು, ಕೌಲ್ಪುರ್ ಮತ್ತು ಕಮೋರ್ ಸೇರಿದಂತೆ ಚೆಕ್‌ಪೋಸ್ಟ್‌ಗಳು, ಗಡಿ ಪೊಲೀಸ್ ಪೋಸ್ಟ್‌ಗಳನ್ನು ಪರಿಶೀಲಿಸಿದರು. ಹೆಚ್ಚಿನ ಎಚ್ಚರಿಕೆಯಿಂದ ಇರುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಗಡಿ ಭದ್ರತಾ ಪಡೆ ಹೊರ ಠಾಣೆಗಳಿಗೂ ಭೇಟಿ ನೀಡಿ ಏಜೆನ್ಸಿಗಳ ನಡುವೆ ಸಮನ್ವಯವನ್ನು ನಿರಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು.

ದಾಳಿ ಬಳಿಕ ಏನೆಲ್ಲಾ ನಡೆಯಿತು?

ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪಹಲ್ಗಾಮ್ ದಾಳಿಯ ಬಳಿಕ ಘಟನೆಗೆ ಸಂಬಂಧಿಸಿ ಸುಮಾರು 46 ಉಗ್ರರು ಸಾವನ್ನಪ್ಪಿದ್ದಾರೆ.

ಕಳೆದ ಫೆಬ್ರವರಿ 22ರಂದು ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಕಿಶ್ತ್ವಾರ್ ಜಿಲ್ಲೆಯ ಚತ್ರೂ ಅರಣ್ಯ ಪ್ರದೇಶದಲ್ಲಿ ಲಷ್ಕರ್‌ನ ಉನ್ನತ ಕಮಾಂಡರ್ ಸೈಫುಲ್ಲಾ ಸೇರಿ ಜೈಶ್-ಎ-ಮೊಹಮ್ಮದ್ ಉಗ್ರರ ಗುಂಪನ್ನು ನಿರ್ಮೂಲನೆ ಮಾಡಿತ್ತು. ಇದಕ್ಕೂ ಮೊದಲು ಫೆಬ್ರವರಿ 4ರಂದು ಉಧಂಪುರ ಜಿಲ್ಲೆಯ ಬಸಂತ್‌ಗಢ ಪ್ರದೇಶದಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ. ಜನವರಿ 23ರಂದು ಕಥುವಾದ ಬಿಲ್ಲಾವರ್ ಪ್ರದೇಶದಲ್ಲಿ ಮತ್ತೊಬ್ಬ ಕಮಾಂಡರ್ ಉಸ್ಮಾನ್ ಅಲಿಯಾಸ್ ಅಬು ಮಾವಿಯಾನನ್ನ ಹತ್ಯೆ ಮಾಡಲಾಗಿದೆ.

ಪರಿಸ್ಥಿತಿ ಈಗ ಹೇಗಿದೆ ಸ್ಥಿತಿ?

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಬೈಸರನ್ ಕಣಿವೆಯಲ್ಲಿ ಪ್ರವಾಸಿ ಚಟುವಟಿಕೆಗಳು ಪುನರ್ ಆರಂಭಗೊಂಡಿವೆ. ಇಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕವೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪಹಲ್ಗಾಮ್ ರೆಸಾರ್ಟ್‌ನಲ್ಲಿ ಹಲವಾರು ಹೊಸ ಕ್ರಮಗಳನ್ನು ಅಳವಡಿಸಲಾಯಿಗದೆ. ಇದರಲ್ಲಿ ಪೋನಿವಾಲ್ಲಾಗಳು ಸೇರಿದಂತೆ ಸೇವಾ ಪೂರೈಕೆದಾರರು ಮತ್ತು ಮಾರಾಟಗಾರರನ್ನು ಕೂಡ ಸೇರಿಸಿಕೊಳ್ಳಲಾಗಿದೆ. ಸಂದರ್ಶಕರೊಂದಿಗೆ ಸಂವಹನ ನಡೆಸುವ ಮೊದಲು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಈಗ ಭದ್ರತಾ ವ್ಯವಸ್ಥೆ ಹೇಗಿದೆ?

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಎಲ್ಲಾ ಪ್ರವಾಸೋದ್ಯಮ ಸೇವಾ ಪೂರೈಕೆದಾರರಿಗೆ ವಿಶಿಷ್ಟವಾದ ಕ್ಯುಆರ್ ಕೋಡ್ ಆಧಾರಿತ ಗುರುತಿನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದರಲ್ಲಿ ಪೋನಿ-ರೈಡ್ ನಿರ್ವಾಹಕರು, ವ್ಯಾಪಾರಿಗಳು, ವ್ಯಾಪಾರ ಸಂಸ್ಥೆಗಳು ಮತ್ತು ಹೊರಗಿನ ಮಾರಾಟಗಾರರು ಸೇರಿದಂತೆ ನಿಜವಾದ ಮತ್ತು ನೋಂದಾಯಿತ ಸೇವಾ ಪೂರೈಕೆದಾರರನ್ನು ಸುಲಭವಾಗಿ ಗುರುತಿಸಲು ಮತ್ತು ಪರಿಶೀಲಿಸಲು ಸಾಧ್ಯವಾಗುತ್ತದೆ.

ವಿಶ್ವ ಪ್ರಸಿದ್ಧ ತ್ರಿಶೂರ್‌ ಪೂರಂ ಸಿದ್ಧತೆ ವೇಳೆ ಭಾರಿ ಅನಾಹುತ; ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ

ಪ್ರತಿಯೊಬ್ಬ ಸೇವಾ ಪೂರೈಕೆದಾರರ ಮೇಲೆ ಪೊಲೀಸರು ನಿಗಾ ವಹಿಸುತ್ತಿದ್ದಾರೆ. ನೋಂದಣಿ, ವಯಕ್ತಿಕ ಮಾಹಿತಿ, ಇತರ ವಿವರಗಳನ್ನು ಕ್ಯೂಆರ್ ಕೋಡ್ ಮೂಲಕ ದಾಖಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಇನ್ನು ಪ್ರವಾಸಿಗರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ಕ್ಯೂಆರ್ ಅನ್ನು ಸ್ಕ್ಯಾನ್ ಮಾಡಿದಾಗ ಸಂಬಂಧಪಟ್ಟ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author