ನವದೆಹಲಿ: ಪಾಕಿಸ್ತಾನವು ಫೆಬ್ರವರಿ 7 ರಿಂದ ಮಾರ್ಚ್ 8 ರ ತನಕ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ (Baloochistan) ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದೆ. ಫೆಬ್ರವರಿ 15ರಂದು ಶ್ರೀಲಂಕಾದಲ್ಲಿ ಪಂದ್ಯ ನಡೆಸಲು ಉದ್ದೇಶಿಸಲಾಗಿದೆ. ಹಾಗಾದರೆ ಪಾಕಿಸ್ತಾನ (Pakistan) ಏಕೆ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುತ್ತಿದೆ? ಇದಕ್ಕೆ ಕಾರಣ ಬಲೂಚಿಸ್ತಾನದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯಾ? ಪಾಕಿಸ್ತಾನದ ರಕ್ಷಣಾ ಸಚಿವರೇ ಅಲ್ಲಿನ ಸಂಸತ್ತಿನಲ್ಲಿ ಬಲೂಚಿ ರೆಬೆಲ್ಸ್ ಬಳಿ ಪಾಕಿಸ್ತಾನದ ಸೇನೆಯಲ್ಲೂ ಇರದ ಶಸ್ತ್ರಾಸ್ತ್ರಗಳು ಇವೆ ಎಂದು ಅಳಲು ತೋಡಿಕೊಂಡಿದ್ದೇಕೆ? ಈ ಎಲ್ಲ ವಿವರಗಳನ್ನು ತಿಳಿಯೋಣ ಬನ್ನಿ.
ಪಾಕಿಸ್ತಾನವು ಭಾರತ ವಿರುದ್ಧದ ಟಿ20 ಮ್ಯಾಚ್ ಬಹಿಷ್ಕರಿಸುವುದಕ್ಕೆ ಬಹಿರಂಗವಾಗಿ ಸ್ಪಷ್ಟ ಕಾರಣವನ್ನು ತಿಳಿಸಿಲ್ಲ. ಉದ್ದೇಶಪೂರ್ವಕವಾಗಿ ಬಹಿಷ್ಕರಿಸುತ್ತಿರುವುದಾಗಿ ಹೇಳಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮತ್ತು ಸಚಿವ ಮೊಹಿಸಿನ್ ನಕ್ವಿ ಇತ್ತೀಚೆಗೆ ಬಲೂಚಿಸ್ತಾನದಲ್ಲಿ ನಡೆದಿರುವ ಗಲಭೆಗಳಲ್ಲಿ ಭಾರತದ ಕೈವಾಡ ಇದೆ ಎಂದು ದೂರಿದ್ದರು. ಹೀಗಾಗಿ ಬಲೂಚಿಸ್ತಾನದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯೇ ಪಾಕಿಸ್ತಾನ ಚಡಪಡಿಸಲು ಕಾರಣವಾಗಿದೆ.
ಇತ್ತೀಚೆಗೆ ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿ ಹಾಗೂ ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿಯು ಸರಣಿ ದಾಳಿಗಳನ್ನು ನಡೆಸಿದೆ. ಈ ಕೃತ್ಯಗಳ ಹಿಂದೆ ಭಾರತ ಇದೆ ಎಂದು ಪಾಕಿಸ್ತಾನ ದೂರುತ್ತಿದೆ. ಗ್ವಾದರ್, ಕ್ವೆಟ್ಟಾ ಮತ್ತು ಪಸ್ನಿಯಲ್ಲಿ ನಡೆದಿರುವ ದಾಳಿಗಳ ಹಿಂದೆ ಭಾರತದ ಕೈವಾಡ ಇದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರರು ಆರೋಪಿಸಿದ್ದಾರೆ. ಇದನ್ನು ಭಾರತ ನಿರಾಕರಿಸಿದೆ. ಆದರೆ ಒಂದು ಮಾತನ್ನು ಭಾರತ ಸ್ಪಷ್ಟಪಡಿಸಿದೆ.
ಭಾರತದ ವಿದೇಶಾಂಗ ಇಲಾಖೆಯ ವಕ್ತಾರರಾದ ರಣಧೀರ್ ಜೈಸ್ವಾಲ್ ಪಾಕಿಸ್ತಾನಕ್ಕೆ ಕಠಿಣವಾದ ಸಂದೇಶ ತಿಳಿಸಿದ್ದಾರೆ. ಬಲೂಚಿಸ್ತಾನ ವಿವಾದ ನಿಮ್ಮ ಆಂತರಿಕ ಕಲಹ. ಅದಕ್ಕೂ ಭಾರತಕ್ಕೂ ಸಂಬಂದ ಇಲ್ಲ. ನಿಮ್ಮ ವೈಫಲ್ಯಕ್ಕೆ ಭಾರತವನ್ನು ದೂರಬೇಡಿ. ಆದರೆ ಬಲೂಚಿಸ್ತಾನದ ಜನರು, ಹೋರಾಟಗಾರರ ಸುದೀರ್ಘ ಕಾಲದ ಬೇಡಿಕೆಗಳನ್ನು ಈಡೇರಿಸಲು ಗಮನ ಕೊಡಿʼʼ ಎಂದು ಚಾಟಿಯಲ್ಲಿ ಹೊಡೆದಂತೆ ಹೇಳಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವ ಪಾಕಿಸ್ತಾನವನ್ನು ನಿಯಂತ್ರಿಸಲು ಭಾರತವು ಹಲವಾರು ವಿಧಗಳಲ್ಲಿ, ಆಯಾಮಗಳಲ್ಲಿ, ತಂತ್ರಗಾರಿಕೆಯೊಂದಿಗೆ ತಿರುಗೇಟು ಕೊಡುತ್ತಿದೆ. ಇದು ಅತ್ಯಂತ ಕುತೂಹಲಕರ, ಸಾಹಸಭರಿತ.
ಅಗತ್ಯ ಬಿದ್ದಾಗ ಸೇನಾಪಡೆಯ ಮೂಲಕ ಸರ್ಜಿಕಲ್ ದಾಳಿಯನ್ನು ನಡೆಸುವುದು, ವಾಯುಪಡೆಯ ಮೂಲಕ ವೈಮಾನಿಕ ದಾಳಿ ಕೈಗೊಳ್ಳುವುದು ಮತ್ತು ಮೂರನೆಯದಾಗಿ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಮೂಲೆಗುಂಪಾಗಿಸುವುದು, ನಾಲ್ಕನೆಯದಾಗಿ ಬಲೂಚಿಸ್ತಾನದಲ್ಲಿ ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಬೇಡಿಕೆಗಳನ್ನು ಪಾಕಿಸ್ತಾನವು ಬಗೆಹರಿಸಿಕೊಡಬೇಕು ಎಂದು ಬಲವಾಗಿ ಒತ್ತಾಯಿಸುತ್ತಿರುವುದು. ಆದರೆ ಬಲೂಚಿಸ್ತಾನದ ಜನ ಸ್ವತಂತ್ರ ದೇಶವನ್ನು ಕೇಳುತ್ತಿದ್ದಾರೆ. ಅಲ್ಲಿಗೆ ಭಾರತವು ಪರೋಕ್ಷವಾಗಿ ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿದಂತಾಯಿತು.
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಪಾಕಿಸ್ತಾನದ ಸಂಸತ್ತಿನಲ್ಲಿ ಬಲೂಚಿಸ್ತಾನದ ದಂಗೆ ಬಗ್ಗೆ ಮಾತನಾಡಿದ್ದಾರೆ. ಬಲೂಚಿ ಲಿಬರೇಷನ್ ಆರ್ಮಿ ಬಂಡುಕೋರರ ಬಳಿ ಪಾಕಿಸ್ತಾನದ ಸೇನೆಯಲ್ಲೂ ಇರದಿರುವ ಅಪಾಯಕಾರಿ ಶಸ್ತ್ರಾಸ್ತ್ರಗಳು ಇವೆ. ಅವುಗಳು ಬಂಡುಕೋರರ ಕೈಗೆ ಸಿಕ್ಕಿದ್ದು ಹೇಗೆ? ಬಲೂಚಿ ಬಂಡುಕೋರರ ಬಳಿ 2 ಕೋಟಿ ರುಪಾಯಿ ಬೆಲೆ ಬಾಳುವ ಅತ್ಯಾಧುನಿಕ ರೈಫಲ್‌ಗಳು ಇವೆ. ಪಾಕ್ ಸೇನೆಯ ಬಳಿ ಕೂಡ ಇಂಥದ್ದಿಲ್ಲ. ಈ ದುಬಾರಿ ಶಸ್ತ್ರಾಸ್ತ್ರಗಳು ಅವರಿಗೆ ಪೂರೈಕೆಯಾಗುತ್ತಿರುವುದು ಎಲ್ಲಿಂದ? ಎಂದು ಅಳಲು ತೋಡಿಕೊಂಡಿದ್ದಾರೆ.
ಐಪಿಎಲ್‌ನಿಂದ ಹೊರಬಿದ್ದ ಬಳಿಕ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲಿರುವ ಮುಸ್ತಾಫಿಝುರ್ ರೆಹಮಾನ್!
ಮೂಲತಃ 1948ರಲ್ಲಿ ಬಲೂಚಿಸ್ತಾನವನ್ನು ಬಲವಂತವಾಗಿ ಪಾಕಿಸ್ತಾನಕ್ಕೆ ಸೇರಿಸಲಾಗಿತ್ತು. ಭೌಗೋಳಿಕವಾಗಿ ಪಾಕಿಸ್ತಾನದ ಅತಿ ದೊಡ್ಡ ಪ್ರಾಂತ್ಯ ಬಲೂಚಿಸ್ತಾನವಾಗಿದೆ. 40 ಪರ್ಸೆಂಟ್ ಅದೇ ಆಗುತ್ತದೆ. ಆದರೆ ಬಲೂಚಿಸ್ತಾನದ ಜನರು ಪಾಕಿಸ್ತಾನದಿಂದ ಪ್ರತ್ಯೇಕವಾಗಲು ಬಯಸುತ್ತಿದ್ದಾರೆ. ಹೋರಾಟ ನಡೆಸುತ್ತಿದ್ದಾರೆ.