ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಸ್ಟ್ರೇಲಿಯಾ ಗುಂಡಿನ ದಾಳಿ ವೇಳೆ ಆಪದ್ಬಾಂದವನಾದ ಹಣ್ಣಿನ ವ್ಯಾಪಾರಿ; ಬರಿಗೈಲೇ ಭಯೋತ್ಪಾದಕನ ಹೆಡೆಮುರಿ ಕಟ್ಟಿದ ಅಹ್ಮದ್ ಯಾರು?

Australia shooting: ಆಸ್ಟ್ರೇಲಿಯಾದ ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ನಡೆದ ಹನುಕ್ಕಾ ಹಬ್ಬದ ಸಂದರ್ಭದಲ್ಲಿ ಸಂಭವಿಸಿದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಶೌರ್ಯ ತೋರಿದ್ದಾನೆ. ಆತನ ಸಾಹಸದ ವಿಡಿಯೊ ವೈರಲ್ ಆಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ಗುಂಡಿನ ದಾಳಿಯಲ್ಲಿ  ಆಪದ್ಬಾಂದವನಾದ ಹಣ್ಣಿನ ವ್ಯಾಪಾರಿ

ಗುಂಡಿನ ದಾಳಿ ನಡೆದ ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಪರಿಶೀಲನೆ -

Priyanka P
Priyanka P Dec 15, 2025 1:49 PM

ಸಿಡ್ನಿ, ಡಿ. 15: ಭಾನುವಾರ ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ (Bondi Beach) ಜನರು ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಡಿನ ಸದ್ದು (Australia shooting) ಕೇಳಿಬಂತು. ಜನರು ಹನುಕ್ಕಾ ಆಚರಣೆಯಲ್ಲಿ ತೊಡಗಿದ್ದ ವೇಳೆ ಭಯೋತ್ಪಾದಕರು ದಾಳಿ ನಡೆಸಿದರು. ಜನರು ಭಯದಿಂದ ಕೂಗುತ್ತ ದಿಕ್ಕು ಪಾಲಾಗಿ ಓಡಿದರು. ಈ ವೇಳೆ ವ್ಯಕ್ತಿಯೊಬ್ಬ ಜೀವಭಯದಿಂದ ಓಡಿಹೋಗುವ ಬದಲು ಆಪತ್ಬಾಂಧವನಂತೆ ಮುಂದೆ ಬಂದಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಹೌದು, ಸಿರಿಯಾದಲ್ಲಿ ಜನಿಸಿದ ಇಬ್ಬರು ಮಕ್ಕಳ ತಂದೆ, 43 ವರ್ಷದ ಅಹ್ಮದ್ ಅಲ್ ಅಹ್ಮದ್ ಘಟನಾ ಸ್ಥಳದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ವ್ಯಕ್ತಿಯೊಬ್ಬ ಜನಸಮೂಹವನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸುವುದನ್ನು ನೋಡಿದ್ದಾರೆ. ಯಾವುದೇ ತರಬೇತಿ ಇಲ್ಲದೆ, ಕೈಯಲ್ಲಿ ಆಯುಧವೂ ಇಲ್ಲದಿದ್ದರೂ ಅವರು ತನ್ನ ಪ್ರಾಣ ಪಣಕ್ಕಿಟ್ಟು ಜನರ ಜೀವ ಉಳಿಸಲು ಮುಂದಾಗಿದ್ದಾರೆ. ಬಂದೂಕುಧಾರಿಯನ್ನು ಹಿಂದಿನಿಂದ ಹೋಗಿ ಹಿಡಿದುಕೊಂಡು, ಆತನ ಕೈಯಲ್ಲಿದ್ದ ರೈಫಲ್ ಅನ್ನು ಕಸಿದುಕೊಂಡಿದ್ದಾರೆ. ಇದರಿಂದ ಆಗಬಹುದಾಗಿದ್ದ ಮತ್ತಷ್ಟು ಅನಾಹುತವನ್ನು ತಪ್ಪಿಸಿದ್ದಾರೆ.

"ಅವನು ಒಳ್ಳೆಯ ಹುಡುಗ"' ಸಿಡ್ನಿ ಶೂಟರ್‌ನ ಭಯೋತ್ಪಾದನಾ ಕೃತ್ಯವನ್ನು ನಿರಾಕರಿಸಿದ ತಾಯಿ

ಅಹ್ಮದ್ ಅಲ್ ಅಹ್ಮದ್ ಯಾರು?

ಯುದ್ಧಪೀಡಿತ ಸಿರಿಯಾದಲ್ಲಿ ಜನಿಸಿದ ಅಹ್ಮದ್, ದಶಕದ ಹಿಂದೆ ಆಸ್ಟ್ರೇಲಿಯಾಗೆ ಬಂದು ನೆಲೆಸಿದ್ದಾರೆ. ಅಹ್ಮದ್ ಸಿಡ್ನಿಯ ದಕ್ಷಿಣದಲ್ಲಿರುವ ಸದರ್ಲ್ಯಾಂಡ್ ಶೈರ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಪತ್ನಿ, ಇಬ್ಬರು ಮಕ್ಕಳ ಪುಟ್ಟ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಜೀವಾನೋಪಾಯಕ್ಕಾಗಿ ಸಣ್ಣ ಹಣ್ಣಿನ ಅಂಗಡಿಯನ್ನು ನಡೆಸುತ್ತಿದ್ದಾರೆ.

ಆ ದಿನ ಅಹ್ಮದ್ ಆ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗುಂಡಿನ ಚಕಮಕಿ ಕೇಳಿಬಂದಿದೆ. ಧೈರ್ಯಶಾಲಿಯಾದ ಈತ, ತನ್ನ ಪ್ರಾಣವನ್ನೂ ಲೆಕ್ಕಿಸದೆ ಜನರನ್ನು ರಕ್ಷಿಸಲು ಧಾವಿಸಿ ಬಂದಿದ್ದಾರೆ. ಈ ವೇಳೆ ಅಹ್ಮದ್ ಅವರ ಮೇಲೂ ಎರಡು ಬಾರಿ ಗುಂಡು ಹಾರಿಸಲಾಗಿದೆ. ಅಹ್ಮದ್ ಅವರ ತೋಳು ಮತ್ತು ಕೈಗೆ ಗಾಯಗಳಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಡಿಯೊ ವೀಕ್ಷಿಸಿ:



ಅಹ್ಮದ್‌ಗೆ ಬಂದೂಕು ಕಾರ್ಯಾಚರಣೆಯ ಬಗ್ಗೆ ಯಾವುದೇ ಅನುಭವವವಿಲ್ಲ. ಆದರೂ ಧೈರ್ಯದಿಂದ ನಿಲ್ಲಿಸಿದ್ದ ಕಾರುಗಳ ಮೂಲಕ ಓಡಿ ಹೋಗಿ ಹಿಂದಿನಿಂದ ಬಂದೂಕುಧಾರಿಯನ್ನು ಹಿಡಿದು ಲಾಕ್ ಮಾಡಿದ್ದರು. ಸುಮಾರು ಐದು ಸೆಕೆಂಡುಗಳ ಕಾಲ ನಡೆದ ಹೋರಾಟದ ನಂತರ, ಅಹ್ಮದ್ ಬಂದೂಕನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ಮತ್ತಷ್ಟು ನಡೆಯಬಹುದಾಗಿದ್ದ ರಕ್ತಪಾತ ನಿಂತಿತು. ತನ್ನ ಧೈರ್ಯದ ಮೂಲಕ ಮುಗ್ಧ ಜನರನ್ನು ಕೊಲೆಪಾತಕಿಯಿಂದ ರಕ್ಷಿಸಿ ಅವರ ನಡೆಗೆ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ.

ಅಹ್ಮದ್ ಅವರ ಶೌರ್ಯಕ್ಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಧೈರ್ಯಶಾಲಿ ವ್ಯಕ್ತಿಯು ಗುಂಡು ಹಾರಿಸುತ್ತಿದ್ದ ವ್ಯಕ್ತಿಯ ಮೇಲೆಯೇ ದಾಳಿ ಮಾಡಿದ್ದಾರೆ. ಈ ಮೂಲಕ ಅನೇಕ ಜೀವಗಳನ್ನು ಉಳಿಸಿದ್ದಾರೆ. ಆ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧೈರ್ಯವಂತ ವ್ಯಕ್ತಿಯ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಭಾನುವಾರ ಸಂಜೆ ಸಿಡ್ನಿಯ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ ನಡೆದ ಯಹೂದಿಗಳ 8 ದಿನಗಳ ಪವಿತ್ರ ಹನುಕ್ಕಾ ಹಬ್ಬವನ್ನು ಗುರಿಯಾಗಿಟ್ಟುಕೊಂಡು ತಂದೆ-ಮಗ ಈ ದಾಳಿ ನಡೆಸಿದ್ದಾರೆ. ದಾಳಿಕೋರರಲ್ಲೊಬ್ಬ ಸೇರಿದಂತೆ ಒಟ್ಟು 16 ಜನರು ಮೃತಪಟ್ಟಿದ್ದು, ಸುಮಾರು 42 ಮಂದಿ ಗಾಯಗೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸುಮಾರು 30 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿ ಇದಾಗಿದ್ದು, ಮೃತರಲ್ಲಿ 10 ವರ್ಷದ ಬಾಲಕಿಯೂ ಸೇರಿದ್ದಾಳೆ.