ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಐಎಸ್‌ಐ, ಪಾಕಿಸ್ತಾನ ಸೇನೆ 2ನೇ ತಲೆಮಾರಿನ ಭಯೋತ್ಪಾದಕ ನಾಯಕರನ್ನು ರೂಪಿಸುತ್ತಿದೆ: ಗುಪ್ತಚರ ಇಲಾಖೆ ಎಚ್ಚರಿಕೆ

Intelligence Warns: ಪಾಕಿಸ್ತಾನದ ಐಎಸ್ಐ ಮತ್ತು ಸೇನೆ ಎರಡೂ ಕೂಡ ವಯಸ್ಸಾಗುತ್ತಿರುವ ಉಗ್ರ ನಾಯಕರಿಂದ ಮುಂದಿನ ತಲೆಮಾರಿನ ಭಯೋತ್ಪಾದಕ ನಾಯಕರನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಎನ್ನಲಾಗಿದೆ. ವಯಸ್ಸಾಗುತ್ತಿರುವ ಉಗ್ರ ಕಮಾಂಡರ್‌ಗಳ ಪುತ್ರರು ಹಾಗೂ ಆಪ್ತ ಸಂಬಂಧಿಕರಿಗೆ ತರಬೇತಿ ನೀಡಿ ಬೆಳೆಸಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಪಾಕ್ ಮೂಲದ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥರು

ನವದೆಹಲಿ, ಜ. 15: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (Inter-Services Intelligence) ಮತ್ತು ಪಾಕಿಸ್ತಾನಿ ಸೇನೆಯು (Pakistani Militory) ಭಯೋತ್ಪಾದಕ ನಾಯಕತ್ವದ ಎರಡನೇ ತಲೆಮಾರನ್ನು ರೂಪಿಸಲು ಕೆಲಸ ಮಾಡುತ್ತಿವೆ. ಇದಕ್ಕಾಗಿ ದೊಡ್ಡ ಪ್ರಮಾಣದ ಹಣಕಾಸು ನೆರವನ್ನು ಒದಗಿಸುವುದರ ಜತೆಗೆ, ವಯಸ್ಸಾಗುತ್ತಿರುವ ಉಗ್ರ ಕಮಾಂಡರ್‌ಗಳ ಪುತ್ರರು ಹಾಗೂ ಆಪ್ತ ಸಂಬಂಧಿಕರನ್ನು ತರಬೇತಿ ನೀಡಿ ಬೆಳೆಸಲಾಗುತ್ತಿದೆ ಎಂದು ಗುಪ್ತಚರ ಮೂಲಗಳು (Intelligence Warns) ಹೇಳಿವೆ.

ಗುಪ್ತಚರ ಮೂಲಗಳ ಪ್ರಕಾರ, ಇತ್ತೀಚೆಗೆ ಪಾಕಿಸ್ತಾನದ ಬಹವಾಲ್ಪುರದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಇದರಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಪಾಕಿಸ್ತಾನಿ ಸೇನೆಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಮುಂದಿನ ತಲೆಮಾರಿನ ನಾಯಕರು ಎಂದು ಗುರುತಿಸಲಾದ ಉಗ್ರ ಸಂಘಟನೆಗಳ ಹಿರಿಯ ಕಮಾಂಡರ್‌ಗಳು ಭಾಗವಹಿಸಿದ್ದರು. ಮೂಲಗಳ ಪ್ರಕಾರ, ಜಮ್ಮು-ಕಾಶ್ಮೀರಕ್ಕೆ ದೊಡ್ಡ ಪ್ರಮಾಣದಲ್ಲಿ ಅಕ್ರಮ ಒಳನುಸುಳುವಿಕೆಯನ್ನು ಯೋಜಿಸುವುದು ಹಾಗೂ ಮುಂದಿನ ಭಯೋತ್ಪಾದಕ ದಾಳಿಗಳನ್ನು ಸಂಯೋಜಿಸುವುದೇ ಈ ಸಭೆಯ ಪ್ರಮುಖ ಉದ್ದೇಶ.

ಪೆಟ್ಟು ತಿಂದ ಮೇಲೂ ಬುದ್ಧಿ ಕಲಿಯದ ಪಾಕಿಸ್ತಾನ ಉಗ್ರರು; ಹಿಂದೂಗಳ ವಿರುದ್ಧ ಹಿಂಸಾಚಾರಕ್ಕೆ ಕರೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಘಟಿತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಗಳು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಲಷ್ಕರ್ ಸಂಘಟನೆಯ ಹಿರಿಯ ಕಾರ್ಯಕರ್ತರಾದ ತಲ್ಹಾ ಸಯೀದ್ ಮತ್ತು ಸೈಫುಲ್ಲಾ ಕಸೂರಿ, ಜೈಶ್ ಕಮಾಂಡರ್ ಅಬ್ದುರ್ ರೌಫ್‌ನೊಂದಿಗೆ ಬಹಾವಲ್ಪುರದಲ್ಲಿ ಹಾಜರಿದ್ದ ಎಂದು ಗುಪ್ತಚರ ಮೂಲಗಳು ಹೇಳಿವೆ.

ಮೂಲಗಳ ಪ್ರಕಾರ, ತಲ್ಹಾ ಸಯೀದ್ ಮತ್ತು ಸೈಫುಲ್ಲಾ ಕಸೂರಿ ಬಹಾವಲ್‌ಪುರದಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಜತೆ ರಹಸ್ಯ ಸಭೆ ನಡೆಸಿದ್ದಾರೆ. ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ, ಪಹಲ್ಗಾಮ್ ದಾಳಿಗೂ ಮುನ್ನವೂ ಇದೇ ರೀತಿಯ ಸಭೆಗಳು ನಡೆದಿದ್ದವು. ಇದರಿಂದ ಈ ಎರಡು ಉಗ್ರ ಸಂಘಟನೆಗಳ ನಡುವೆ ಸಂಯೋಜನೆ ಮತ್ತು ಸಹಕಾರ ಇನ್ನಷ್ಟು ಗಾಢವಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಭದ್ರತಾ ಸಂಸ್ಥೆಗಳು ಹೇಳುವಂತೆ ಐಎಸ್‌ಐ ಈಗ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ರಂತಹ ವಯಸ್ಸಾದ ಭಯೋತ್ಪಾದಕ ನಾಯಕರಿಂದ ಗಮನವನ್ನು ಅವರ ಉತ್ತರಾಧಿಕಾರಿಗಳ ಕಡೆಗೆ ತಿರುಗಿಸಿದೆ. ನಾಯಕತ್ವ ಮತ್ತು ಕಾರ್ಯಾಚರಣೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಎರಡನೇ ತಲೆಮಾರಿನ ಭಯೋತ್ಪಾದಕ ಕಾರ್ಯಕರ್ತರನ್ನು ಉತ್ತೇಜಿಸುವುದು ಮತ್ತು ಹಣಕಾಸು ಒದಗಿಸುವುದು ಈ ತಂತ್ರದ ಭಾಗವಾಗಿದೆ ಎನ್ನಲಾಗಿದೆ.

ಪ್ರಮುಖ ಉಗ್ರರಲ್ಲಿ ತಲ್ಹಾ ಸಯೀದ್‍ ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಸಯೀದ್‍ನ ಪುತ್ರ. ಗುಪ್ತಚರ ಮೂಲಗಳ ಪ್ರಕಾರ, ತಲ್ಹಾ ಸಯೀದ್‌ನನ್ನು ಕೇವಲ ಸೈದ್ಧಾಂತಿಕವಾಗಿ ಮಾತ್ರವಲ್ಲದೆ, ಸಂಘಟನಾ ನಿರ್ವಹಣೆ, ಹಣಕಾಸು ಜಾಲಗಳು ಹಾಗೂ ಅಂತಾರಾಷ್ಟ್ರೀಯ ಸಂಪರ್ಕಗಳ ವಿಷಯದಲ್ಲೂ ವ್ಯವಸ್ಥಿತವಾಗಿ ತರಬೇತಿ ನೀಡಿ ಬೆಳೆಸಲಾಗುತ್ತಿದೆ. ಉಗ್ರ ಜಾಲಗಳಿಗೆ ಹೊಸ ಚೈತನ್ಯ ತುಂಬುವುದರ ಜತೆಗೆ, ಕಾರ್ಯಾಚರಣೆಯ ನಿರಂತರತೆಯನ್ನು ಕಾಪಾಡಿಕೊಳ್ಳುವುದೇ ಈ ಕ್ರಮದ ಉದ್ದೇಶ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ, ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಸ್ಗರ್‌ಗೆ ಐಎಸ್‌ಐ ಬೆಂಬಲ ಮತ್ತು ತರಬೇತಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಜೈಶ್-ಎ-ಮೊಹಮ್ಮದ್ ಒಳಗೆ ಕಾರ್ಯಾಚರಣೆಗಳನ್ನು ಯೋಜಿಸುವುದು, ಭಯೋತ್ಪಾದಕ ಮಾಡ್ಯೂಲ್‌ಗಳನ್ನು ಸಿದ್ಧಪಡಿಸುವುದು ಮತ್ತು ಗಡಿಯಾಚೆಗಿನ ಚಟುವಟಿಕೆಗಳನ್ನು ಸಂಘಟಿಸುವುದು ಸೇರಿದಂತೆ ದೊಡ್ಡ ನಾಯಕತ್ವ ಜವಾಬ್ದಾರಿ ಹೊರಲು ಅವನು ಸಿದ್ಧನಾಗುತ್ತಿದ್ದಾನೆ ಎಂದು ಮಾಹಿತಿ ನೀಡಿವೆ.

ಪಾಕಿಸ್ತಾನ ಮೂಲದ ಯುಎಸ್‌ಎ ಕ್ರಿಕೆಟಿನಿಗೆ ಭಾರತದ ವೀಸಾ ನಿರಾಕರಣೆ!

ಪಾಕಿಸ್ತಾನವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಳ್ಳುತ್ತಲೇ ಇದ್ದರೂ, ಅದರ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಅದು ಭಯೋತ್ಪಾದನೆಯನ್ನು ಪೋಷಿಸುತ್ತಲೇ ಬಂದಿದೆ. ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿಯನ್ನು ಮತ್ತೊಮ್ಮೆ ಪುನರುಜ್ಜೀವನಗೊಳಿಸಲಾಗುತ್ತಿದೆ. ಪಾಕಿಸ್ತಾನಿ ಸೇನೆ, ಐಎಸ್ಐ ಮತ್ತು ರಾಜ್ಯ ಪ್ರಾಯೋಜಿತ ಎನ್‌ಜಿಒಗಳು ಇದಕ್ಕೆ ಹಣವನ್ನು ಒದಗಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಸಮಯದಲ್ಲಿ ಹಾನಿಗೊಳಗಾದ ಕಟ್ಟಡಗಳನ್ನು ದೊಡ್ಡ ಪ್ರಮಾಣದ ಹಣವನ್ನು ಬಳಸಿಕೊಂಡು ಪುನರ್ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಭಾರತೀಯ ಭದ್ರತಾ ಸಂಸ್ಥೆಗಳು ಹೆಚ್ಚಿನ ಕಟ್ಟೆಚ್ಚರ ವಹಿಸಿದ್ದು, ಯಾವುದೇ ಒಳನುಸುಳುವಿಕೆ ಅಥವಾ ಉಗ್ರಗಾಮಿ ಚಟುವಟಿಕೆಯನ್ನು ಪತ್ತೆಹಚ್ಚಲು ಪಾಕಿಸ್ತಾನ ಗಡಿಯುದ್ದಕ್ಕೂ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.