ಪೆಟ್ಟು ತಿಂದ ಮೇಲೂ ಬುದ್ಧಿ ಕಲಿಯದ ಪಾಕಿಸ್ತಾನ ಉಗ್ರರು; ಹಿಂದೂಗಳ ವಿರುದ್ಧ ಹಿಂಸಾಚಾರಕ್ಕೆ ಕರೆ
ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾದ ಕಮಾಂಡರ್ ಅಬು ಮೂಸಾ ಕಾಶ್ಮೀರಿ ವಿಡಿಯೊ ಹಿಂದೂಗಳ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದಾನೆ. ಕಾಶ್ಮೀರಿ ಭಾರತದ ಮೇಲೆ ಮಾತ್ರವಲ್ಲದೆ ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ನಾಯಕತ್ವದ ಮೇಲೂ ಕಿಡಿಕಾರಿದ್ದಾನೆ.
ಅಬು ಮೂಸಾ ಕಾಶ್ಮೀರಿ (ಸಂಗ್ರಹ ಚಿತ್ರ) -
ದೆಹಲಿ, ಜ. 14: ಲಷ್ಕರ್-ಎ-ತೈಬಾ (Lashkar-e-Taiba) ಉಗ್ರ ಸಂಘಟನೆಯ ಅಬು ಮೂಸಾ ಕಾಶ್ಮೀರಿ (Abu Musa Kashmiri) ವಿಡಿಯೊ ಹಿಂದೂಗಳ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಲಷ್ಕರ್-ಎ-ತೈಬಾದ ಹಿರಿಯ ಕಮಾಂಡರ್ ಕಾಶ್ಮೀರಿ ಭಾರತದ ಮೇಲೆ ಮಾತ್ರವಲ್ಲದೆ ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ನಾಯಕತ್ವದ ಮೇಲೂ ಕಿಡಿಕಾರಿದ್ದಾನೆ. ಭಿಕ್ಷೆ ಬೇಡುವ ಮೂಲಕ ಮೂಲಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಬದಲಿಗೆ ಹಿಂದೂಗಳನ್ನು ಮಟ್ಟ ಹಾಕುವ ಮೂಲಕ ಇದನ್ನು ಸಾಧಿಸಬೇಕು ಎಂದು ನಾಲಗೆ ಹರಿಯಬಿಟ್ಟಿದ್ದು, ಸದ್ಯ ಈತನ ಈ ವಿಡಿಯೊ ಸದ್ದು ಭಾರಿ ಸಂಚಲನ ಸೃಷ್ಟಿಸಿದೆ.
ಭಾರತ ಕಳೆದ ವರ್ಷ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಮೂಲಕ ಉಗ್ರರ ತಾಣಗಳನ್ನು ಭಾರತೀಯ ಸೇನೆ ನಾಶಪಡಿಸಿದ್ದು, ಭಯೋತ್ಪಾದಕರಿಗೆ ಹಿನ್ನಡೆಯಾಗಿದೆ. ಅದಾಗ್ಯೂ ಉಗ್ರರು ಇನ್ನೂ ಬುದ್ಧಿ ಕಲಿತ್ತಿಲ್ಲ.
ವಿಡಿಯೊದಲ್ಲಿ ಏನಿದೆ?
ಕಾಶ್ಮೀರಿ "ಭಿಕ್ಷೆ ಬೇಡುವುದರಿಂದ ಸ್ವಾತಂತ್ರ್ಯ ಬರುವುದಿಲ್ಲ. ಹಿಂದೂಗಳ ಕುತ್ತಿಗೆ ಕತ್ತರಿಸುವ ಮೂಲಕ, ಜಿಹಾದ್ ಧ್ವಜ ಹಾರಿಸುವ ಮೂಲಕ, ಬದ್ರ್‌ನ ಇತಿಹಾಸವನ್ನು ಪುನರಾವರ್ತಿಸುವ ಮೂಲಕ ಮತ್ತು ಮೆಕ್ಕಾ ವಿಜಯದ ಇತಿಹಾಸವನ್ನು ಮತ್ತೊಮ್ಮೆ ತರುವ ಮೂಲಕ ಸ್ವಾತಂತ್ರ್ಯ ಪಡೆಯಬೇಕು" ಎಂದು ಹೇಳಿದ್ದಾನೆ. ಪಹಲ್ಗಾಮ್ ಹತ್ಯಾಕಾಂಡದ ಬಳಿಕವೂ ಈತ ಇದೇ ರೀತಿಯ ಹೇಳಿಕೆ ನೀಡಿದ್ದ.
ವಿಡಿಯೊ ಇಲ್ಲಿದೆ:
🚨🚨🚨 Exclusive 🇵🇰👹:
— OsintTV 📺 (@OsintTV) January 14, 2026
"Yeh bheek maangne se nahi milegi; Hinduon ki Gardan'ein kaatne se azaadi milegi."
Notorious Abu Musa Kashmiri, senior LeT (JKUM) commander, speaking near LoC in Tatrinote, Hajira tehsil, Rawalakot, Poonch dist, PoJK.
He says he has told the Prime… pic.twitter.com/jGnLQPhcCi
ಜತೆಗೆ ಪಾಕಿಸ್ತಾನದ ಆಡಳಿತಗಾರರು ಧಾರ್ಮಿಕ ತತ್ವಗಳಿಗೆ ದ್ರೋಹ ಬಗೆಯುತ್ತಿದ್ದಾರೆ ಮತ್ತು ಜಿಹಾದಿ ಆದರ್ಶಗಳನ್ನು ಎತ್ತಿಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾನೆ. ಅಲ್ಲಿನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಕಾಶ್ಮೀರಿ ಜಿಹಾದ್‌ಗೆ ಬದ್ಧವಾಗಿರದ ಯಾವುದೇ ನಾಯಕನಿಗೆ ಪಾಕಿಸ್ತಾನವನ್ನು ಆಳುವ ಹಕ್ಕು ಇಲ್ಲ ಎಂದು ಪ್ರತಿಪಾದಿಸಿದ್ದಾನೆ.
"ಪ್ರಾರ್ಥನೆಯ ಬಗ್ಗೆ ಕಾಳಜಿ ವಹಿಸದ, ಕಲಿಮಾಗೆ ನಿಷ್ಠನಲ್ಲದ, ಹುತಾತ್ಮರ ರಕ್ತಕ್ಕೆ ಬೆಲೆ ಕೊಡದ ಮತ್ತು ಜಿಹಾದ್‌ನ ಧ್ವಜಧಾರಿಯಲ್ಲದ ರಾಜಕಾರಣಿ ಅಥವಾ ಆಡಳಿತಗಾರನಿಗೆ ಈ ದೇಶವನ್ನು ಆಳುವ ಹಕ್ಕಿಲ್ಲ" ಎಂದು ಘೋಷಿಸಿದ್ದಾನೆ.
Pahalgam Terror Attack: ಎರಡು ದಶಕಗಳಲ್ಲೇ ಅತಿದೊಡ್ಡ ದಾಳಿ ಇದು...!
ಪಾಕಿಸ್ತಾನದ ಪ್ರಧಾನಿಯೊಂದಿಗಿನ ಮುಜಫರಾಬಾದ್‌ನಲ್ಲಿ ನಡೆದ ಸಭೆಯಲ್ಲಿಯೂ ಆತ ಇದೇ ರೀತಿಯ ಹೇಳಿಕೆ ನೀಡಿದ್ದ. "ನಾವು ಕೈಗಳಿಂದ, ನಾಲಗೆಯಿಂದ ಮತ್ತು ಲೇಖನಿಯಿಂದ ಜಿಹಾದ್ ಮಾಡುತ್ತೇವೆ. ಈ ಕರ್ತವ್ಯವನ್ನು ನಿರ್ವಹಿಸುವಾಗ, ನಾವು ನಮ್ಮ ಅಲ್ಲಾಹನ ಬಳಿಗೆ ಹಿಂತಿರುಗುತ್ತೇವೆ" ಎಂದು ಹೇಳಿದ್ದ.
ಪಾಕ್ ಸೇನೆ ಜತೆ ಭಯೋತ್ಪಾದಕರಿಗೆ ಲಿಂಕ್‌ಗೆ ಸಿಕ್ತು ಪ್ರೂಫ್
ಪಾಕಿಸ್ತಾನ ಸೇನೆಯೊಂದಿಗೆ ಭಯೋತ್ಪಾದಕಾ ಸಂಘಟನೆ ಹೊಂದಿರುವ ನಂಟನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯ ಲಷ್ಕರ್-ಎ-ತೈಬಾದ ನಾಯಕ ಸೈಫುಲ್ಲಾ ಕಸೂರಿ ಇತ್ತೀಚೆಗೆ ಒಪ್ಪಿಕೊಂಡಿದ್ದ. ಪಾಕಿಸ್ತಾನದ ಒಂದು ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಕಸೂರಿ ಈ ವಿಚಾರವನ್ನು ದೃಢಪಡಿಸಿದ್ದ. ʼʼಪಾಕಿಸ್ತಾನದ ಸೇನೆಯು ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಮುನ್ನಡೆಸಲು ನನ್ನನ್ನು ಆಹ್ವಾನಿಸುತ್ತದೆ. ನಿಮಗೆ ಗೊತ್ತೇ? ಭಾರತ ಕೂಡ ನನ್ನನ್ನು ನೋಡಿ ಹೆದರುತ್ತದೆʼʼ ಎಂದು ನಾಲಗೆ ಹರಿಯಬಿಟ್ಟಿದ್ದ.