ದೆಹಲಿ, ಡಿ. 17: ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಮುಖ್ಯ ಸೂಚನೆಯೊಂದನ್ನು ನೀಡಿದೆ. ಇನ್ಮುಂದೆ ನೀವು ವಿಮಾನ ಪ್ರಯಾಣದಂತೆ ರೈಲು ಪ್ರಯಾಣದ ವೇಳೆಯೂ ನಿಗದಿತ ಪ್ರಮಾಣಕ್ಕಿಂತ ಅಧಿಕ ತೂಕದ ಲಗೇಜ್ ಕೊಂಡೊಯ್ದರೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಮಾಹಿತಿ ನೀಡಿದರು. ವಿಮಾನ ನಿಲ್ದಾಣಗಳಲ್ಲಿ ಅನುಸರಿಸುತ್ತಿರುವ ಪದ್ಧತಿಯಂತೆಯೇ ರೈಲು ಪ್ರಯಾಣಿಕರಿಗೂ ಲಗೇಜ್ ನಿಯಮಗಳನ್ನು ರೈಲ್ವೆ ಇಲಾಖೆ ಜಾರಿಗೆ ತರುತ್ತದೆಯೇ? ಎಂದು ಸಂಸದ ವೇಮಿರೆಡ್ಡಿ ಪ್ರಭಾಕರ್ ರೆಡ್ಡಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
"ಪ್ರಸ್ತುತ ಪ್ರಯಾಣಿಕರು ತಮ್ಮೊಂದಿಗೆ ಕಂಪಾರ್ಟ್‌ಮೆಂಟ್‌ಗಳ ಒಳಗೆ ಲಗೇಜ್ ಕೊಂಡೊಯ್ಯಲು ವರ್ಗವಾರು ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ" ಎಂದು ವೈಷ್ಣವ್ ತಿಳಿಸಿದರು. ಅದರಂತೆ ದ್ವಿತೀಯ ದರ್ಜೆಯ ಪ್ರಯಾಣಿಕರು 35 ಕೆಜಿ ಲಗೇಜ್ ಉಚಿತವಾಗಿ ಸಾಗಿಸಬಹುದು. ಇನ್ನು ಶುಲ್ಕ ಪಾವತಿಸಿ ಗರಿಷ್ಠ 70 ಕೆಜಿವರೆಗಿನ ಬ್ಯಾಗೇಜ್ ಕೊಂಡೊಯ್ಯಲು ಅವಕಾಶವಿದೆ. ಸ್ಲೀಪರ್ ದರ್ಜೆಯ ಪ್ರಯಾಣಿಕರು 40 ಕೆಜಿವರೆಗೆ ಬ್ಯಾಗ್ ಉಚಿತವಾಗಿ ಸಾಗಿಸಬಹುದಾಗಿದ್ದು, ಶುಲ್ಕ ಪಾವತಿಸಿ ಗರಿಷ್ಠ 80 ಕೆಜಿ ಲಗೇಜ್ ಕೊಂಡೊಯ್ಯಬಹುದು.
ರೈಲ್ವೆ ಲಗೇಜ್ ಶುಲ್ಕ ಇಲ್ಲಿದೆ:
ಎಸಿ 3 ಟೈರ್‌ನಲ್ಲಿ ಪ್ರಯಾಣಿಸುವವರಿಗೆ 40 ಕೆಜಿ ಉಚಿತ ಲಗೇಜ್ ಸಾಗಿಸಲು ಅವಕಾಶ ನೋಡಲಾಗಿದೆ. ಇನ್ನು ಪ್ರಥಮ ದರ್ಜೆ ಮತ್ತು ಎಸಿ 2 ಪ್ರಯಾಣಿಕರು 50 ಕೆಜಿವರೆಗೆ ಉಚಿತ ಬ್ಯಾಗ್ ಸಾಗಿಸಬಹುದು. ಇವರಿಗೆ ಅನುಮತಿಸಿದ ಗರಿಷ್ಠ ಮಿತಿ 100 ಕೆಜಿ. ಎಸಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವವರಿಗೆ 70 ಕೆಜಿ ಲಗೇಜ್ ಉಚಿತವಾಗಿ ಸಾಗಿಸಲು ಅನುಮತಿ ನೀಡಲಾಗಿದ್ದು, ಶುಲ್ಕ ಪಾವತಿಸಿ 150 ಕೆಜಿ ಕೊಂಡೊಯ್ಯಬಹುದು ಎಂದು ಕೇಂದ್ರ ತಿಳಿಸಿದೆ.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಏನೆಲ್ಲಾ ಸಾಗಿಸಬಹುದು?; ಹೊಸ ಲಗೇಜ್ ರೂಲ್ಸ್ ಜಾರಿ
ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸುವ ಮೊದಲು ತಮ್ಮ ಲಗೇಜ್ ತೂಕ ಹಾಕಬೇಕು. ತೂಕದ ಜತೆಗೆ ಬ್ಯಾಗ್‌ಗಳ ಗಾತ್ರವನ್ನೂ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಲಗೇಜ್ ದೊಡ್ಡದಾಗಿದ್ದರೆ ಮತ್ತು ಕೋಚ್‌ನಲ್ಲಿ ಹೆಚ್ಚಿನ ಜಾಗವನ್ನು ಆಕ್ರಮಿಸಿದರೆ ತೂಕ ಮಿತಿಯೊಳಗಿದ್ದರೂ ದಂಡ ವಿಧಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಗಮನಿಸಿ, ಬುಕಿಂಗ್ ಮಾಡದೆ ಮಿತಿ ಮೀರಿದ ಲಗೇಜ್ ಕಂಡುಬಂದರೆ, ಸಾಮಾನ್ಯ ಲಗೇಜ್ ದರಕ್ಕಿಂತ 1.5 ಪಟ್ಟು ಹೆಚ್ಚುವರಿ ದಂಡ ಪಾವತಿಸಬೇಕು. ಇದರಿಂದ ಹೆಚ್ಚುವರಿ ಲಗೇಜ್ ಸಾಗಾಟ ದುಬಾರಿಯಾಗಬಹುದು.
ʼʼನಿಮ್ಮ ಲಗೇಜ್ ನಿಗದಿಪಡಿಸಿದ ಅಳತೆಗಿಂತ ಹೆಚ್ಚಾಗಿದ್ದರೆ ಅದನ್ನು ಪ್ರಯಾಣಿಕರ ವಿಭಾಗಗಳ ಬದಲು ಬ್ರೇಕ್‌ವ್ಯಾನ್ (SLRs) / ಪಾರ್ಸೆಲ್ ವ್ಯಾನ್‌ಗಳಲ್ಲಿ ಸಾಗಿಸಬೇಕಾಗುತ್ತದೆ" ಎಂದು ಸಚಿವರು ತಿಳಿಸಿದರು. ʼʼವಾಣಿಜ್ಯ ಸರಕುಗಳನ್ನು ವೈಯಕ್ತಿಕ ಸರಕುಗಳ ವಿಭಾಗದಲ್ಲಿ ಬುಕಿಂಗ್ ಮಾಡಲು ಮತ್ತು ಸಾಗಿಸಲು ಅನುಮತಿ ಇಲ್ಲʼʼ ಎಂದು ಅವರು ಹೇಳಿದರು.
ಯಾಕಾಗಿ ಈ ನಿಯಮ?
ರೈಲ್ವೆ ಅಧಿಕಾರಿಗಳ ಪ್ರಕಾರ, ಈ ನಿಯಮವು ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಅನೇಕರು ಅತಿಯಾದ ಲಗೇಜ್‌ಗಳನ್ನು ಒಯ್ಯುವುದರಿಂದ ಇತರ ಪ್ರಯಾಣಿಕರಿಗೆ ಅನಾನುಕೂಲವಾಗುತ್ತದೆ ಮತ್ತು ಅಪಾಯ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹಬ್ಬಗಳು ಮತ್ತು ಬೇಸಿಗೆ ರಜಾದಿನಗಳಲ್ಲಿ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಈ ವ್ಯವಸ್ಥೆ ಸಹಾಯಕವಾಗಲಿದೆ. ಜತೆಗೆ ನೈರ್ಮಲ್ಯ ಸಮಸ್ಯೆಯನ್ನೂ ನಿವಾರಿಸಲಿದೆ.