ನವದೆಹಲಿ, ಮೇ 15: ಜಾಗತಿಕ ಇಂಧನ ಬೆಲೆಯಲ್ಲಿನ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ(Petrol, diesel prices hiked) ತಲಾ 3 ರೂ. ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗಿನಿಂದಲೇ ಜಾರಿಗೆ ಬರಲಿದೆ. ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್‌ಗೆ 97.77 ರೂ. ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 99.67 ರೂ. ಆಗಲಿದೆ. ಬೆಂಗಳೂರಿನಲ್ಲಿ ಗುರುವಾರ 102.96 ರೂ ಇದ್ದ ಪೆಟ್ರೋಲ್ ಬೆಲೆ ಶುಕ್ರವಾರ 106.17ರೂ.ಗೆ ಏರಿಕೆ ಆಗಿದೆ. ಅದೇ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 90.99 ಇದ್ದ ಬೆಲೆ ಇಂದು 94.10 ರೂಪಾಯಿಗೆ ಏರಿಕೆ ಆಗಿದೆ. ಸಿಎನ್‌ಜಿ ಬೆಲೆಯನ್ನು 2 ರೂಪಾಯಿ ಹೆಚ್ಚಿಸಲಾಗಿದೆ.
ಚಿಲ್ಲರೆ ಇಂಧನ ಬೆಲೆಗಳ ಏರಿಕೆಗೂ ಮುನ್ನ, ಮಾರ್ಚ್‌ನಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಮೂರು ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದ್ದವು.
ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯಿಂದಾಗಿ ಇಂಧನ ಬೆಲೆ ಏರಿಕೆ ಆಗಿದೆ. ಪ್ರಧಾನಿ ಮೊನ್ನೆ ಒಂದು ವರ್ಷ ಬಂಗಾರ ಖರೀದಿಯನ್ನ ನಿಲ್ಲಿಸಿ, ಸಾರ್ವಜನಿಕ ಸಾರಿಗೆ ಬಳಕೆ ಮಾಡಿ ಎಂದು ನಾಗರಿಕರಿಗೆ ಸಲಹೆ ನೀಡಿದ್ದರು.
ಡೀಸೆಲ್ ಬೆಲೆ ಹೆಚ್ಚಾದರೆ ಅದರ ನೇರ ಪರಿಣಾಮ ಸರಕು ಸಾಗಣೆ ವಾಹನಗಳ ಮೇಲೆ ಬೀರುತ್ತದೆ. ಇದರಿಂದ ತರಕಾರಿ, ಹಣ್ಣು ಮತ್ತು ಇತರೆ ದಿನಬಳಕೆಯ ವಸ್ತುಗಳ ಸಾಗಣೆ ವೆಚ್ಚ ಹೆಚ್ಚಾಗಿ, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಇವುಗಳ ಬೆಲೆ ಕೂಡ ಏರಿಕೆಯಾಗುವ ಸಾಧ್ಯತೆಯಿದೆ.
Vishweshwar Bhat Column: ಪಂಡಾ ಎಕ್ಸ್‌ಪ್ರೆಸ್ ಎಂದರೇನು ?
ದೇಶದ ಆರ್ಥಿಕತೆ ಕಾಪಾಡಲು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಬೇಕಾಗುತ್ತದೆ ಎಂದು ಗುರುವಾರ(ಮೇ 14) ಆರ್ಬಿಐ ಗವರ್ನರ್ ಸಹ ಹೇಳಿದ್ದರು. ಈ ಬೆನ್ನಲ್ಲೇ ಇದೀಗ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಆಗಿದೆ. ಮಾರ್ಚ್ 2024 ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 2 ರಷ್ಟು ಕಡಿತಗೊಳಿಸಲಾಗಿತ್ತು.
ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಉಂಟಾಗಿರುವ ಸಮಸ್ಯೆ ಎದುರಿಸಲು ಜನತೆಯ ಸಹಕಾರ ಕೋರಿದ್ದ ಪ್ರಧಾನಿ ನರೇಂದ್ರ ಮೋದಿ ಸ್ವತಃ ಇಂಧನ ಉಳಿತಾಯದ ಮೂಲಕ ಮಾತನ್ನು ಕೃತಿಗೆ ಇಳಿಸಿದ್ದಾರೆ. ಕಳೆದ 2 ದಿನಗಳಿಂದಲೇ ಮೋದಿ ಅವರ ವಿವಿಧ ರಾಜ್ಯಗಳ ಸಂಚಾರದ ವೇಳೆ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ.50ರಷ್ಟು ಕಡಿತ ಮಾಡಿದ್ದರು. ಮೋದಿ ಕರೆಯ ಬೆನ್ನಲ್ಲೇ ಹಲವು ರಾಜ್ಯಗಳ ರಾಜ್ಯಪಾಲರು, ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಕೂಡಾ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆ ಕಡಿತ ಮಾಡಿದ್ದಾರೆ.