ಚೆನ್ನೈ, ನ. 19: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬುಧವಾರ (ನವೆಂಬರ್ 19) ತಮಿಳುನಾಡಿನ ಕೊಯಮತ್ತೂರಿನಲ್ಲಿ ಪಿಎಂ ಕಿಸಾನ್ ಸಮ್ಮಾನ್ (PM Kisan Yojana) ಯೋಜನೆಯ 21ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಿದರು. ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ- 2025 ಉದ್ಘಾಟಿಸಿದ ನಂತರ ಮೋದಿ ಈ ಕಂತನ್ನು ಬಿಡುಗಡೆ ಮಾಡಿದರು. ಈ ಬಾರಿ ದೇಶದ ಸುಮಾರು 9 ಕೋಟಿ ರೈತರ ಖಾತೆಗೆ 18,000 ಕೋಟಿ ರೂ. ಜಮೆ ಮಾಡಲಾಗಿದೆ. 2019ರ ಫೆಬ್ರವರಿ 24ರಂದು ಕೇಂದ್ರವು ಪ್ರಾರಂಭಿಸಿದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6,000 ರೂ. ಆರ್ಥಿಕ ನೆರವು ಒದಗಿಸುತ್ತದೆ.
ಈ ಯೋಜನೆಯ ಅಂಗವಾಗಿ ಈಗಾಗಲೇ ದೇಶದ 11 ಕೋಟಿ ರೈತರ ಖಾತೆಗೆ 3.70 ಲಕ್ಷ ಕೋಟಿ ರೂ. ವಿತರಿಸಲಾಗಿದೆ. ಈ ನಿಧಿಯು ರೈತರ ಶಿಕ್ಷಣ, ವೈದ್ಯಕೀಯ ಮತ್ತು ವಿವಾಹದಂತಹ ಖರ್ಚುಗಳನ್ನು ಪೂರೈಸುವುದರ ಜತೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲು ನೆರವಾಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿಯ 21ನೇ ಕಂತು ರಿಲೀಸ್ ಮಾಡಿದ ಮೋದಿ:
ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ತಮ್ಮ ಜಮೀನಿನ ವಿವರಗಳನ್ನು ದಾಖಲಿಸಿದ ಹಾಗೂ ಆಧಾರ್‌ನೊಂದಿಗೆ ಬ್ಯಾಂಕ್ ಖಾತೆಗಳನ್ನು ಜೋಡಣೆ ಮಾಡಿದ ರೈತರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ದೊರೆಯುತ್ತದೆ. ಅರ್ಹ ರೈತರನ್ನು ಗುರುತಿಸಿ ಯೋಜನೆಯಡಿ ಸೇರಿಸಲು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಗ್ರಾಮ ಮಟ್ಟದಲ್ಲಿ ವಿಶೇಷ ಅಭಿಯಾನಗಳನ್ನು ನಡೆಸುತ್ತಿದೆ. ಒಮ್ಮೆ ಕಂತು ಬಿಡುಗಡೆ ಮಾಡಿದ ಕೂಡಲೇ ರೈತರು ಆನ್‌ಲೈನ್ ಮೂಲಕ ತಮ್ಮ ಖಾತೆಗೆ ಜಮಾ ಆಗಿದೆಯೇ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದು.
ಏನಿದು ಯೋಜನೆ?
ಈ ಯೋಜನೆ ಪ್ರಕಾರ ರೈತರಿಗೆ 3 ಕಂತುಗಳಲ್ಲಿ 6,000 ರೂ.ಗಳನ್ನು ವರ್ಗಾಯಿಸಲಾಗುತ್ತಿದೆ. ಪ್ರತಿ ಕಂತನ್ನು ಪ್ರತಿ 4 ತಿಂಗಳಿಗೊಮ್ಮೆ ನೀಡಲಾಗುತ್ತದೆ.
PM Kisan Samman Nidhi: ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಕಂತು ಬಂದಿಲ್ಲವೆ? ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
ಪಿಎಂ ಕಿಸಾನ್ ಯೋಜನೆಗೆ ಅರ್ಹರೇ ಎನ್ನುವುದು ಪರಿಶೀಲಿಸುವುದು ಹೇಗೆ?
- ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್: pmkisan.gov.inಗೆ ಭೇಟಿ ನೀಡಿ.
- ಹೋಮ್‌ಪೇಜ್‌ನಲ್ಲಿ Beneficiary Status ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನೀವು ಆಧಾರ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್ ನಮೂದಿಸಿ.
- ಬಳಿಕ ಅಗತ್ಯ ಮಾಹಿತಿ ನೀಡಬೇಕು. ಕೊನೆಗೆ Get Data ಬಟನ್ ಕ್ಲಿಕ್ ಮಾಡಿ.
- ಈಗ ಸ್ಕ್ರೀನ್ ಮೇಲೆ ವಿವರ ಮೂಡುತ್ತದೆ.
ಪಿಎಂ ಕಿಸಾನ್‌ಗೆ ಅರ್ಜಿ ಸಲ್ಲಿಸುವ ವಿಧಾನ
- ಮೊದಲು ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ pmkisan.gov.inಗೆ ಭೇಟಿ ನೀಡಬೇಕು.
- ಹೊಸ ರೈತರು ನೋಂದಣಿ (New Farmer Registration) ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಆಧಾರ್ ಸಂಖ್ಯೆ, ರಾಜ್ಯ, ಜಿಲ್ಲೆ ಮತ್ತು ವೈಯಕ್ತಿಕ ಬ್ಯಾಂಕ್ ಮಾಹಿತಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ನಂತರ ಫಾರ್ಮ್ ಅನ್ನು ಸಲ್ಲಿಸಿ ಮತ್ತು ಸೇವ್ ಮಾಡಿ ಇಟ್ಟುಕೊಳ್ಳಿ.
- ನಿಮ್ಮ ಅರ್ಜಿ ಸಲ್ಲಿಕೆ ಆದ ನಂತರ ಅನುಮೋದನೆ ನೀಡುವ ಮೊದಲು ಸ್ಥಳೀಯ ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ.
- ಅರ್ಜಿಯ ಸ್ಥಿತಿಯನ್ನು ಹೀಗೆ ಪರಿಶೀಲಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ-pmkisan.gov.in
- ಈಗ ಪುಟದ ಬಲಭಾಗದಲ್ಲಿರುವ ‘ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ (Know Your Status) ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ಡೇಟಾ ಪಡೆಯಿರಿ ಆಯ್ಕೆಯನ್ನು ಆರಿಸಿ ನಿಮ್ಮ ಫಲಾನುಭವಿ ಸ್ಥಿತಿ ಸ್ಕ್ರೀನ್ ಮೇಲೆ ಮೂಡಿ ಬರುತ್ತದೆ.