ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Kisan 21st Installment: ಪಿಎಂ ಕಿಸಾನ್‌ ಯೋಜನೆ ಹಣ 21ನೇ ಕಂತು ಇಂದು ಬಿಡುಗಡೆ, ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿಯಿಂದ ರಿಲೀಸ್‌

PM Kisan 21st Installment: ತಮಿಳುನಾಡಿನ ಕೊಯಮತ್ತೂರಿನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಆಯ್ದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಂತಿನ ಹಣ ವಿತರಿಸಲಿದ್ದಾರೆ. 2019ರಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ರೂ. ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಬಾರಿ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಪಿಎಂ ಕಿಸಾನ್‌ ಯೋಜನೆ ಹಣ 21ನೇ ಕಂತು ಇಂದು ಬಿಡುಗಡೆ

ಪಿಎಂ ಕಿಸಾನ್‌ ಯೋಜನೆ -

ಹರೀಶ್‌ ಕೇರ
ಹರೀಶ್‌ ಕೇರ Nov 19, 2025 6:52 AM

ನವದೆಹಲಿ : ಪಿಎಂ ಕಿಸಾನ್ ಸಮ್ಮಾನ್ (PM Kisan yojana) ಯೋಜನೆಯ 21ನೇ ಕಂತಿನ ಭಾಗವಾಗಿ ಅರ್ಹ ರೈತರ ಖಾತೆಗೆ ತಲಾ 2,000 ರೂ. ಗಳನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ನ.19) ಬಿಡುಗಡೆ ಮಾಡಲಿದ್ದಾರೆ. ಈ ನಿಮಿತ್ತ ತಮಿಳುನಾಡಿನ ಕೊಯಮತ್ತೂರಿನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಆಯ್ದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಂತಿನ ಹಣ ವಿತರಿಸಲಿದ್ದಾರೆ.

2019ರಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ರೂ. ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಬಾರಿ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪಿಎಂ - ಕಿಸಾನ್ ಅನ್ನು 2019ರ ಫೆಬ್ರವರಿ 24ರಂದು ಆರಂಭಿಸಲಾಯಿತು. ಈ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ದೇಶದ 11 ಕೋಟಿಗೂ ಅಧಿಕ ರೈತ ಕುಟುಂಬಗಳಿಗೆ 20 ಕಂತುಗಳಲ್ಲಿ ಒಟ್ಟು 3.70 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.

ಈ ಹಣವು ರೈತರಿಗೆ ಕೃಷಿ ಪರಿಕರಗಳನ್ನು ಖರೀದಿಸಲು, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚಗಳು ಮತ್ತು ಮದುವೆಯಂತಹ ಇತರ ಖರ್ಚುಗಳನ್ನು ನಿಭಾಯಿಸಲು ನೆರವಾಗಿದೆ. ಈ ಕೇಂದ್ರ ಸರ್ಕಾರದ ಯೋಜನೆಯನ್ನು ಫೆಬ್ರವರಿ 24, 2019 ರಂದು ಪ್ರಾರಂಭಿಸಲಾಯಿತು. ಯೋಜನೆಯ ಮಹತ್ವವನ್ನು ಪರಿಗಣಿಸಿ, PM ಕಿಸಾನ್ ಪೋರ್ಟಲ್ ಮತ್ತು CPGRAMS (ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ) ದೂರುಗಳನ್ನು ನೋಂದಾಯಿಸಲು ಮತ್ತು ಪರಿಹಾರವನ್ನು ಪಡೆಯಲು ಸೌಲಭ್ಯವನ್ನು ಒದಗಿಸಿವೆ. ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಪೋರ್ಟಲ್‌ನಲ್ಲಿ ನೋಂದಾಯಿಸಬಹುದು ಮತ್ತು ತ್ವರಿತ ಮಾಹಿತಿ ಮತ್ತು ಪರಿಹಾರಗಳನ್ನು ಪಡೆಯಬಹುದು.

ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ತಮ್ಮ ಜಮೀನಿನ ವಿವರಗಳನ್ನು ದಾಖಲಿಸಿದ ಹಾಗೂ ಆಧಾರ್‌ನೊಂದಿಗೆ ಬ್ಯಾಂಕ್ ಖಾತೆಗಳನ್ನು ಜೋಡಣೆ ಮಾಡಿದ ರೈತರಿಗೆ ಮಾತ್ರ ಈ ಯೋಜನೆಯ ಪ್ರಯೋಜನಗಳು ದೊರೆಯುತ್ತಿವೆ. ಅರ್ಹ ರೈತರನ್ನು ಗುರುತಿಸಿ ಯೋಜನೆಯಡಿ ಸೇರಿಸಲು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಗ್ರಾಮ ಮಟ್ಟದಲ್ಲಿ ವಿಶೇಷ ಅಭಿಯಾನಗಳನ್ನು ನಡೆಸುತ್ತಿದೆ.

2019ರಲ್ಲಿ 'ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ' (ಐಎಫ್‌ಪಿಆರ್‌ಐ) ನಡೆಸಿದ ಅಧ್ಯಯನದ ಪ್ರಕಾರ, ಪಿಎಂ-ಕಿಸಾನ್ ಯೋಜನೆಯಡಿ ವಿತರಿಸಲಾದ ಹಣವು ಗ್ರಾಮೀಣ ಆರ್ಥಿಕ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಿದೆ. ಇದು ರೈತರ ಮೇಲಿನ ಸಾಲದ ಹೊರೆಯನ್ನು ಕಡಿಮೆ ಮಾಡಲು ಮತ್ತು ಕೃಷಿ ಪರಿಕರಗಳಲ್ಲಿ ಹೂಡಿಕೆ ಹೆಚ್ಚಿಸಲು ಸಹಾಯ ಮಾಡಿದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: PM Kisan Samman Nidhi: ಈ ನಿಯಮ ಪಾಲಿಸದಿದ್ರೆ ಪಿಎಂ ಕಿಸಾನ್ ಸಮ್ಮಾನ್‌​ ಹಣ ನಿಮ್ಮ ಕೈ ಸೇರುವುದಿಲ್ಲ

ಯಾರು ಪಡೆಯಲು ಅರ್ಹರು?

ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ. ‘ನೋ ಯುವರ್ ಸ್ಟೇಟಸ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಣಿ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ‘ಡೇಟಾ ಪಡೆಯಿರಿ’ ಆಯ್ಕೆಯನ್ನು ಆರಿಸಿ. ನಿಮ್ಮ ಸ್ಥಿತಿ ಗೋಚರಿಸುತ್ತದೆ.

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಿ:

ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ. ‘ಫಲಾನುಭವಿಗಳ ಪಟ್ಟಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆಮಾಡಿ. ‘Get Report’ ಮೇಲೆ ಕ್ಲಿಕ್ ಮಾಡಿ.

ಇದರ ನಂತರ ಫಲಾನುಭವಿಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 155261 ಮತ್ತು 011-24300606 ಅನ್ನು ಸಂಪರ್ಕಿಸಬಹುದು.