ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Kisan Samman Nidhi: ಈ ನಿಯಮ ಪಾಲಿಸದಿದ್ರೆ ಪಿಎಂ ಕಿಸಾನ್ ಸಮ್ಮಾನ್‌​ ಹಣ ನಿಮ್ಮ ಕೈ ಸೇರುವುದಿಲ್ಲ

PM Kisan scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಮಹತ್ತರ ಸೂಚನೆ ನೀಡಿದೆ. ಫಲಾನುಭವಿಗಳು ಕೆವೈಸಿ ಮಾಡುವುದು ಮುಖ್ಯವಾಗಿದ್ದು, ಇಲ್ಲದಿದ್ದರೆ ಖಾತೆಗೆ ಹಣ ಬರುವುದಿಲ್ಲ ಎಂದು ತಿಳಿಸಿದೆ. ಹಾಗಾದರೆ ಹಣ ಕೈ ತಪ್ಪದಂತೆ ನೋಡಿಕೊಳ್ಳುವುದೇಗೆ? ಇಲ್ಲಿದೆ ಉತ್ತರ.

ಕೆವೈಸಿ ಮಾಡದಿದ್ರೆ ಪಿಎಂ ಕಿಸಾನ್ ಹಣ ಬರುವುದಿಲ್ಲ

ಸಾಂಧರ್ಬಿಕ ಚಿತ್ರ -

Profile
Sushmitha Jain Nov 11, 2025 9:00 AM

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN), ಕೇಂದ್ರ ಸರ್ಕಾರ (Central Government) ಪ್ರಾರಂಭಿಸಿದ ಯೋಜನೆಯಾಗಿದ್ದು, ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (Farmers) ವರ್ಷಕ್ಕೆ 6,000ರೂ. ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ 2,000 ರೂ.ಯಂತೆ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಈವರೆಗೆ 20ಕಂತುಗಳಲ್ಲಿ ರೈತರ ಖಾತೆಗೆ ಹಣ ಪಾವತಿ ಮಾಡಲಾಗಿದೆ. ಇದೀಗ ಸದ್ಯದಲ್ಲೇ ಪಿಎಂ ಕಿಸಾನ್‌ ಯೋಜನೆಯ 21ನೇ ಕಂತು ಬಿಡುಗಡೆ ಆಗುತ್ತಿದೆ.

ಆದರೆ ಈ ಮಧ್ಯೆ ಕೇಂದ್ರ ಸರ್ಕಾರ ಮಹತ್ತರವಾದ ಸೂಚನೆಯೊಂದನ್ನು ನೀಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ಲಾಭ ಪಡೆಯಲು ರೈತರು ತಮ್ಮ ವೈಯಕ್ತಿಕ ಹಾಗೂ ಕೃಷಿ ವಿವರಗಳನ್ನು ಒಂದು ವಾರದೊಳಗೆ ನವೀಕರಿಸಬೇಕೆಂದು ತ್ರಿಚಿ ಮತ್ತು ಡೆಲ್ಟಾ ಜಿಲ್ಲಾಡಳಿತಗಳು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಇಲ್ಲಿಯವರೆಗೆ ಕೇವಲ ಶೇ. 25ರಿಂದ ಶೇ. 30ರಷ್ಟು ರೈತರು ಇನ್ನೂ ಈ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಇವರು ಪಿಎಂ ಕಿಸಾನ್ ಯೋಜನೆ ನೋಂದಣಿಯಾಗಿದ್ದರೂ ಸಹ, ಈ ಮಾಹಿತಿಯನ್ನು ಪೂರ್ಣಗೊಳಿಸದಿದ್ದರೆ 21ನೇ ಕಂತು ಸ್ಥಗಿತಗೊಳ್ಳಬಹುದು ಎಂದಿದೆ.

ಕೇಂದ್ರ ಕೊಟ್ಟ ಸೂಚನೆ ಏನು?

ಕೃಷಿ ಇಲಾಖೆಯು ‘Agri Stack’ ತಂತ್ರಾಂಶದ ಮೂಲಕ ರೈತರ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುತ್ತಿದೆ. ಈ ಕ್ರಮದಿಂದ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ವಿಳಂಬ ತಪ್ಪಿ, ಸಮಯಕ್ಕೆ ಸರಿಯಾಗಿ ರೈತರ ಖಾತೆಗೆ ಮೊತ್ತ ವರ್ಗಾಯಿಸಲು ಸಾಧ್ಯವಾಗಲಿದೆ. ಜಿಲ್ಲಾಧಿಕಾರಿಗಳು ರೈತರಿಗೆ ತಮ್ಮ ಮಾಹಿತಿಯನ್ನು ನವೀಕರಿಸಲು ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಅಥವಾ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSCs) ಭೇಟಿ ನೀಡಲು ಸಲಹೆ ನೀಡಿದ್ದಾರೆ. ತಮ್ಮ ವಿವರಗಳನ್ನು ನವೀಕರಿಸಿದ ರೈತರಿಗೆ ಮಾತ್ರ ಮುಂದಿನ PM-KISAN ಕಂತುಗಳು ಲಭ್ಯವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾಹಿತಿ ಇಲ್ಲದಿದ್ದರೆ 21ನೇ ಕಂತಿನ ಹಣ ನಿಮ್ಮ ಕೈ ಸೇರುವುದಿಲ್ಲ.

ಇದರೊಂದಿಗೆ PM-KISAN ಯೋಜನೆಯ ಫಲಾನುಭವಿಗಳಿಗೆ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರವು ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದರೂ, ಇನ್ನೂ ಅನೇಕ ರೈತರು ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಇ-ಕೆವೈಸಿ ಮಾಡದಿದ್ದರೆ ಮುಂದಿನ ಕಂತು ಬಿಡುಗಡೆ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಫಲಾನುಭವಿಯ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು ಮತ್ತು ಭೂ ದಾಖಲೆಗಳ ಪರಿಶೀಲನೆ (Verification) ಕೂಡ ಕಡ್ಡಾಯ. ಈ ಕ್ರಮಗಳನ್ನು ಪೂರೈಸದ ರೈತರಿಗೆ ಹಣ ವರ್ಗಾವಣೆ ತಡೆಗೊಳ್ಳಲಿದೆ.

ಈ ಸುದ್ದಿಯನ್ನು ಓದಿ: Viral Video: ವಿಮಾನ ಪ್ರಯಾಣದ ವೇಳೆ ನಿಮ್ಮ ‘ಕೋಳಿ ನಿದ್ದೆಗೆ’ ಸಹಕಾರಿ ಈ ಕ್ಯಾಪ್ಸೂಲ್‌

ಮಾನದಂಡಗಳೇನು?

ಈ ಯೋಜನೆಯಡಿ, ಎಲ್ಲ ಭೂಮಾಲೀಕ ರೈತರ ಕುಟುಂಬಗಳು ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯ ಮಾರ್ಗಸೂಚಿಗಳ ಅಡಿಯಲ್ಲಿ ಭೂಮಾಲೀಕ ರೈತರ ಕುಟುಂಬವನ್ನು ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಭೂ ದಾಖಲೆಗಳ ಪ್ರಕಾರ ಸಾಗುವಳಿ ಭೂಮಿಯನ್ನು ಹೊಂದಿರುವ ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳನ್ನು ಒಳಗೊಂಡಿರುವ ಕುಟುಂಬ ಎಂದು ವ್ಯಾಖ್ಯಾನಿಸಲಾಗಿದೆ. ಫಲಾನುಭವಿಗಳನ್ನು ಗುರುತಿಸಲು ಅಸ್ತಿತ್ವದಲ್ಲಿರುವ ಭೂಮಾಲೀಕತ್ವ ವ್ಯವಸ್ಥೆಯನ್ನು ಬಳಸಲಾಗುತ್ತದೆ.

ಪಿಎಂ ಕಿಸಾನ್‌ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ಹೊಸ ರೈತರಾಗಿದ್ದರೆ ಮತ್ತು ಈ ಯೋಜನೆಗೆ ನೋಂದಾಯಿಸಲು ಬಯಸಿದರೆ, ಈ ಸರಳ ಹಂತಗಳನ್ನು ಅನುಸರಿಸಿ:

  • ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ - pmkisan.gov.in ಗೆ ಭೇಟಿ ನೀಡಿ
  • ‘ರೈತರ ಕಾರ್ನರ್’ ವಿಭಾಗದ ಅಡಿಯಲ್ಲಿ, ‘ಹೊಸ ರೈತ ನೋಂದಣಿ’ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ, ರಾಜ್ಯ ಮತ್ತು ಬ್ಯಾಂಕ್ ವಿವರಗಳನ್ನು ನಮೂದಿಸಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ‘ಸಲ್ಲಿಸು’ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಪರಿಶೀಲಿಸಿದ ನಂತರ, ನೀವು ನಿಮ್ಮ ಕಂತುಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ.

ಈ ಸುದ್ದಿಯನ್ನು ಓದಿ: Viral Video: ತ್ಯಾಜ್ಯ ವಸ್ತುವಿನಿಂದ ಕಡಿಮೆ ಖರ್ಚಿನಲ್ಲಿ ಕಾಂತಾರ ಚಿತ್ರದ ಹುಲಿಯ ತಯಾರಿ; ವಿಡಿಯೊ ಇಲ್ಲಿದೆ!

ಕೆವೈಸಿ ಮಾಡುವುದು ಹೇಗೆ?

  • ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ
  • ಇ-ಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ.
  • ಓಟಿಪಿ ಸಹಾಯದಿಂದ ಪರಿಶೀಲನೆಯನ್ನು ಪೂರ್ಣಗೊಳಿಸಿ.
  • ಓಟಿಪಿ ಸಲ್ಲಿಸಿದ ನಂತರ ನಿಮ್ಮ ಕೆವೈಸಿ ಪೂರ್ಣಗೊಳ್ಳುತ್ತದೆ.

ಪಿಎಂ-ಕಿಸಾನ್ ಆಧಾರ್ ಲಿಂಕ್ ಮಾಡುವುದೇಗೆ?

ರೈತರು ಪಿಎಂ-ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಹೊಂದಿರಬೇಕು. ರೈತರು ಆಧಾರ್ ಕಾರ್ಡ್ ಹೊಂದಿರದಿದ್ದರೆ ಪಿಎಂ-ಕಿಸಾನ್ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಅಥವಾ ನೋಂದಾಯಿಸಿಕೊಳ್ಳಲು ಸಾಧ್ಯವಿಲ್ಲ. ಆಧಾರ್ ನೋಂದಾಯಿತ ದತ್ತಾಂಶದ ಆಧಾರದ ಮೇಲೆ ಮಾತ್ರ ಕಂತು ಬಿಡುಗಡೆ ಮಾಡಲಾಗುತ್ತದೆ. ಪಿಎಂ-ಕಿಸಾನ್ ಅಡಿಯಲ್ಲಿ ನೋಂದಾಯಿಸಲಾದ ರೈತರು ಯೋಜನೆಯಡಿ ತಮ್ಮ ಕಂತುಗಳನ್ನು ಪಡೆಯಲು ಸರ್ಕಾರ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ. ರೈತರು ಇ-ಕೆವೈಸಿ ಮಾಡದಿದ್ದರೆ ಅವರು ಯೋಜನೆಯಡಿ ಕಂತು ಪಡೆಯುವುದಿಲ್ಲ. ಸರ್ಕಾರವು ರೈತರು ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ಒಟಿಪಿ ದೃಢೀಕರಣದ ಮೂಲಕ ಆಧಾರ್ ಆಧಾರಿತ ಇ-ಕೆವೈಸಿ ಮಾಡಲು ಅವಕಾಶ ಕಲ್ಪಿಸಲಾಗಿದೆ.