ನವದೆಹಲಿ, ಸೆ. 23: ಪ್ರಧಾನಿ ನರೇಂದ್ರ ಮೋದಿ (PM Narendra Modi) ಡಿಸೆಂಬರ್‌ನಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕಗೆ ಪ್ರಯಾಣಿಸುವ ಸಾಧ್ಯತೆಯಿದೆ. G20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಡುವೆ ದ್ವಿಪಕ್ಷೀಯ ಸಭೆ ನಡೆಯುವ ಸಾಧ್ಯತೆ ಇದೆ. ಡಿಸೆಂಬರ್ 14 ಮತ್ತು 15ರಂದು ಫ್ಲೋರಿಡಾದಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಇದರ ಜತೆಗೆ ಕ್ವಾಡ್ ನಾಯಕರ ಸಭೆ ನಡೆಸುವ ಸಾಧ್ಯತೆಯೂ ಇದೆ. ಕ್ವಾಡ್‌ನಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಸದಸ್ಯ ರಾಷ್ಟ್ರಗಳಾಗಿವೆ.
ಮೋದಿ ಅವರ ಅಮೆರಿಕ ಪ್ರವಾಸ ಇನ್ನೂ ಅಧಿಕೃತವಾಗಿ ಖಚಿತಗೊಂಡಿಲ್ಲ. ಆದರೆ ಪ್ರವಾಸದ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಭಾರತ ಸರ್ಕಾರವು ಸಾಮಾನ್ಯವಾಗಿ ಪ್ರವಾಸದ ದಿನಾಂಕ ಸಮೀಪಿಸಿದಾಗ ವಿದೇಶ ಪ್ರವಾಸಗಳ ಕುರಿತು ಅಧಿಕೃತ ಘೋಷಣೆಯನ್ನು ಮಾಡುತ್ತದೆ.
ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಈ ಹಿಂದೆ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಅಮೆರಿಕಕ್ಕೆ ಸ್ವಾಗತಿಸಲು ಅಮೆರಿಕ ಸಿದ್ಧವಿದೆ ಎಂದು ಹೇಳಿದ್ದರು. ಭಾರತ ಪ್ರವಾಸದ ವೇಳೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಪ್ರಧಾನಿ ಮೋದಿ ಅವರಿಗೆ ಅಮೆರಿಕಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು ಎಂದು ಗೋರ್ ತಿಳಿಸಿದ್ದಾರೆ.
H-1B ವೀಸಾ ಶುಲ್ಕ ಮತ್ತೆ ಒಂದು ವರ್ಷ ವಿಸ್ತರಣೆ: 2027ರವರೆಗೆ 1 ಲಕ್ಷ ಡಾಲರ್ ಪಾವತಿ ನಿಯಮ
ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಅವರು 2026ರ IX ಯುಎಸ್‌ಐಎಸ್‌ಪಿಎಫ್ ಸಮಿತಿಯ ಸಂದರ್ಭದಲ್ಲಿ ಮಾತನಾಡುತ್ತಾ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ-ಟ್ರಂಪ್ ದ್ವಿಪಕ್ಷೀಯ ಮಾತುಕತೆ
ಇನ್ನು ಡಿಸೆಂಬರ್ ಭೇಟಿಯ ಮತ್ತೊಂದು ಪ್ರಮುಖ ಅಂಶವೆಂದರೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಭೇಟಿ. ಮೋದಿ ಅವರ ಅಮೆರಿಕ ಪ್ರವಾಸ ಇನ್ನೂ ಅಧಿಕೃತವಾಗಿ ಖಚಿತಗೊಂಡಿಲ್ಲದಿದ್ದರೂ, ಜಿ20 ಶೃಂಗಸಭೆಯ ಹೊರತಾಗಿ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಬಹುದು. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸುವ ಸಾಧ್ಯತೆ ಹೆಚ್ಚಿದೆ.
ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಯೂ ನಡೆಯುವ ಸಾಧ್ಯತೆ ಇದೆ.
Gen Zಗಳ ಮನಗೆದ್ದು, ಮೋದಿ ಸೋಶಿಯಲ್ ಮೀಡಿಯಾದಲ್ಲಿ 'ನಂಬರ್ 1' ಆಗಿದ್ದು ಹೇಗೆ?
ಕೆನಡಾಕ್ಕೂ ಪ್ರಧಾನಿ ಮೋದಿ ಭೇಟಿ
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದ ಬಳಿಕ ಇದೇ ಅವಧಿಯಲ್ಲಿ ಕೆನಡಾಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಕೆನಡಾಕ್ಕೆ ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆಯಿದೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ನಿ ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಕೆನಡಾಕ್ಕೆ ಸ್ವಾಗತಿಸಲು ತಾವು ಎದುರು ನೋಡುತ್ತಿರುವುದಾಗಿ ಮಾರ್ಕ್ ಕಾರ್ನಿ ಹೇಳಿದ್ದಾರೆ. ಭಾರತ ಮತ್ತು ಕೆನಡಾ ನಡುವಿನ ವ್ಯಾಪಾರ ಮಾತುಕತೆಗಳಲ್ಲಿ ಪ್ರಗತಿ ಸಾಧಿಸುವ ಉದ್ದೇಶದಿಂದ ಈ ಭೇಟಿ ಮಹತ್ವದ್ದಾಗಲಿದೆ.
ಅಂದರೆ, ಪ್ರಧಾನಿ ಮೋದಿ ಕೆನಡಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ, ವಾಣಿಜ್ಯ ಒಪ್ಪಂದಗಳು ಮತ್ತು ದ್ವಿಪಕ್ಷೀಯ ಆರ್ಥಿಕ ಸಹಕಾರ ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.