ನವದೆಹಲಿ, ಜು. 20: ಸಂಸತ್ತಿನ ಮಳೆಗಾಲದ ಅಧಿವೇಶನ (Monsoon Session) ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ (PM Narendra Modi), "ಸತ್ಯ ಮತ್ತು ವಾಸ್ತವಾಂಶಗಳಿದ್ದಲ್ಲಿ ಗದ್ದಲದ ಅಗತ್ಯವಿಲ್ಲ. ಪ್ರತಿಯೊಬ್ಬರ ಧ್ವನಿಗೂ ಸಂಸತ್‌ನಲ್ಲಿ ಅವಕಾಶ ಸಿಗಬೇಕು" ಎಂದು ಸಂಸದರಿಗೆ ಕರೆ ನೀಡಿದರು. ಆದರೆ ಅಧಿವೇಶನ ಆರಂಭವಾದ ಕೆಲವೇ ನಿಮಿಷಗಳಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಸದನಗಳಲ್ಲಿ ಭಾರೀ ಗದ್ದಲ ಉಂಟಾಗಿ ಕಲಾಪವನ್ನು ಮುಂದೂಡಲಾಯಿತು.
ಸಂಸತ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, "ನಮ್ಮ ಬಳಿ ಸತ್ಯ ಮತ್ತು ಬಲವಾದ ವಾದಗಳಿದ್ದರೆ ಧ್ವನಿ ಎತ್ತುವ ಅಗತ್ಯವಿಲ್ಲ. ಚರ್ಚೆಗಳು ವಾಸ್ತವಾಂಶಗಳ ಆಧಾರದ ಮೇಲೆ ನಡೆಯಬೇಕು. ಪ್ರತಿಯೊಬ್ಬ ಸಂಸದನಿಗೂ ಮಾತನಾಡುವ ಅವಕಾಶ ಸಿಗಬೇಕು. ದೇಶವನ್ನು ಮುಂದೆ ಕೊಂಡೊಯ್ಯಲು ಅರ್ಥಪೂರ್ಣ ಚರ್ಚೆಗಳು ಅಗತ್ಯ" ಎಂದು ಹೇಳಿದರು.
ಲೋಕಸಭೆಯಲ್ಲಿ ಗದ್ದಲ, ಕಲಾಪ ಮುಂದೂಡಿಕೆ
ಲೋಕಸಭೆಯ ಕಲಾಪ ಆರಂಭದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ನಿಧನರಾದ ಮಾಜಿ ಸಂಸದರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಪ್ರತಿಪಕ್ಷ ಸದಸ್ಯರು ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇಣಿಗೆ ದುರ್ಬಳಕೆ ಆರೋಪ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ಸದನದಲ್ಲಿ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಕಲಾಪವನ್ನು ಮೊದಲು ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಬಳಿಕ ಮರುಆರಂಭಗೊಂಡ ಕಲಾಪವೂ ಕೇವಲ ಏಳು ನಿಮಿಷಗಳಲ್ಲೇ ಮತ್ತೆ ಸ್ಥಗಿತಗೊಂಡಿತು. ನಂತರ ಮತ್ತೊಮ್ಮೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ಸಂಸತ್ ಕಲಾಪ ಮುಂದೂಡಿಕೆ:
ರಾಜ್ಯಸಭೆಯಲ್ಲೂ ಗದ್ದಲ
ರಾಜ್ಯಸಭೆಯಲ್ಲೂ ಪ್ರತಿಪಕ್ಷ ಸದಸ್ಯರು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದ ಪ್ರತಿಭಟನೆ ಹಾಗೂ ಪ್ರತಿಭಟನಾಕಾರರ ಮೇಲೆ ನಡೆದ ಲಾಠಿ ಚಾರ್ಜ್ ವಿಚಾರ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, "ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯ. ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ" ಎಂದು ಆರೋಪಿಸಿದರು.
ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಲು ಸಜ್ಜಾದ ವಿರೋಧ ಪಕ್ಷಗಳು
ಸದನದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.
ಅಧಿವೇಶನದ ಪ್ರಮುಖ ಮಸೂದೆಗಳು
ಈ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಹಲವು ಪ್ರಮುಖ ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ. ಅವುಗಳಲ್ಲಿ ಪ್ರಮುಖವಾಗಿ:
- ಸಂವಿಧಾನ (131ನೇ ತಿದ್ದುಪಡಿ) ಮಸೂದೆ – ಲೋಕಸಭಾ ಸದಸ್ಯರ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವುದು ಹಾಗೂ ಮಹಿಳೆಯರಿಗೆ 33% ಮೀಸಲಾತಿ ಜಾರಿಗೆ ತರುವ ಪ್ರಸ್ತಾವನೆ.
- ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ-2026 – ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಗರಿಷ್ಠ ಸಂಖ್ಯೆಯನ್ನು 33ರಿಂದ 37ಕ್ಕೆ ಹೆಚ್ಚಿಸುವ ಪ್ರಸ್ತಾವನೆ.
- ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ (FCRA Amendment Bill) – ವಿದೇಶಿ ಆಸ್ತಿಗಳ ನಿರ್ವಹಣೆ ಮತ್ತು ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸುವ ಪ್ರಸ್ತಾವನೆ.
ಮಳೆಗಾಲದ ಅಧಿವೇಶನದ ಮೊದಲ ದಿನವೇ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ತೀವ್ರ ವಾಗ್ವಾದದಿಂದ ಎರಡೂ ಸದನಗಳ ಕಲಾಪ ಅಸ್ತವ್ಯಸ್ತಗೊಂಡಿದ್ದು, ಮುಂದಿನ ದಿನಗಳಲ್ಲಿ ಅಧಿವೇಶನ ಇನ್ನಷ್ಟು ರಾಜಕೀಯ ಕಾವೇರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.