ನವದೆಹಲಿ: ಇಸ್ರೇಲ್ ಹಾಗೂ ಹಮಾಸ್ ನಡುವೆ ಶಾಂತಿ ಒಪ್ಪಂದವನ್ನು ಏರ್ಪಡಿಸಲು ಶ್ರಮಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ. ಭಾರತವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವವನ್ನು ಸ್ವಾಗತಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಹಮಾಸ್ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವ ಸೂಚನೆಗಳನ್ನು ಉಲ್ಲೇಖಿಸಿದ ಮೋದಿ, ಈ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವ ಪ್ರಯತ್ನಗಳಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಗಾಜಾದಲ್ಲಿ ಶಾಂತಿ ಪ್ರಯತ್ನಗಳು ನಿರ್ಣಾಯಕ ಪ್ರಗತಿ ಸಾಧಿಸುತ್ತಿರುವುದರಿಂದ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವವನ್ನು ನಾವು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಬಿಡುಗಡೆಯ ಸೂಚನೆಗಳು ಮಹತ್ವದ ಹೆಜ್ಜೆಯನ್ನು ಸೂಚಿಸುತ್ತವೆ. ಶಾಶ್ವತ ಮತ್ತು ನ್ಯಾಯಯುತ ಶಾಂತಿಗಾಗಿ ಎಲ್ಲಾ ಪ್ರಯತ್ನಗಳನ್ನು ಭಾರತ ಬಲವಾಗಿ ಬೆಂಬಲಿಸುವುದನ್ನು ಮುಂದುವರಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಕ್ಟೋಬರ್ 7, 2023 ರ ದಾಳಿಯಲ್ಲಿ ಸೆರೆಹಿಡಿಯಲಾದ ಉಳಿದ ಎಲ್ಲಾ ಒತ್ತೆಯಾಳುಗಳನ್ನು ಹಿಂದಿರುಗಿಸುವ ತನ್ನ ಯೋಜನೆಯ ಕೆಲವು ಅಂಶಗಳನ್ನು ಹಮಾಸ್ ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಹಮಾಸ್ ಹೇಳಿಕೆಯ ನಂತರ, ಡೊನಾಲ್ಡ್ ಟ್ರಂಪ್ ಇಸ್ರೇಲ್ ಅನ್ನು ಗಾಜಾದಲ್ಲಿ ತನ್ನ ಬಾಂಬ್ ದಾಳಿ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಕೇಳಿಕೊಂಡರು. ಅಷ್ಟೇ ಅಲ್ಲದೇ ಹಮಾಸ್ ಕದನ ವಿರಾಮದ ಮಾತುಕತೆಗೆ ಒಪ್ಪಿದೆ ಎಂದು ಟ್ರಂಪ್ ಹೇಳಿದ್ದಾರೆ. ಹಮಾಸ್ ಬಿಡುಗಡೆ ಮಾಡಿದ ಹೇಳಿಕೆಯ ಆಧಾರದ ಮೇಲೆ, ಅವರು ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂದು ನಾನು ನಂಬುತ್ತೇನೆ. ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು, ಇದರಿಂದ ನಾವು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಹೊರಗೆ ತರಬಹುದು ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Israel- Hamas: ಇಸ್ರೇಲ್- ಹಮಾಸ್ ಕದನ ವಿರಾಮ ಫಿಕ್ಸ್? ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ
ಇದಕ್ಕೂ ಮೊದಲು, ಟ್ರಂಪ್ ತಮ್ಮ ಯೋಜನೆಯನ್ನು ಒಪ್ಪಿಕೊಳ್ಳಲು ಭಾನುವಾರ ಸಂಜೆಯ ಗಡುವನ್ನು ನಿಗದಿಪಡಿಸಿದ್ದರು, ಅದು ಪಾಲಿಸಲು ವಿಫಲವಾದರೆ "ಎಲ್ಲವೂ ನಾಶವಾಗುತ್ತದೆ" ಎಂದು ಎಚ್ಚರಿಸಿದ್ದರು.