ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೋಮನಾಥ ದೇವಾಲಯದ 75ನೇ ವಾರ್ಷಿಕೋತ್ಸವ: "ವಿನಾಶದಿಂದ ಪುನರುತ್ಥಾನದವರೆಗೆ" ಪ್ರಧಾನಿ ಮೋದಿ ಲೇಖನ

ಗುಜರಾತ್‌ನ ಸೋಮನಾಥ ದೇವಾಲಯದ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬರೆದ ವಿಶೇಷ ಲೇಖನದಲ್ಲಿ, ದೇವಾಲಯದ ಪುನರ್ನಿರ್ಮಾಣವನ್ನು ಭಾರತದ ಅಜೇಯ ಸಂಸ್ಕೃತಿ, ಏಕತೆ ಮತ್ತು ಸ್ವಾಭಿಮಾನದ ಸಂಕೇತವೆಂದು ಬಣ್ಣಿಸಲಾಗಿದೆ. ಸರ್ದಾರ್ ಪಟೇಲರ ಕನಸು, ಐತಿಹಾಸಿಕ ಹೋರಾಟ ಮತ್ತು ವಿಕಾಸದ ಜತೆಗೆ ಪರಂಪರೆ ತತ್ವದಡಿ ನಡೆಯುತ್ತಿರುವ ಅಭಿವೃದ್ಧಿಯನ್ನು ಅವರು ಪ್ರಸ್ತಾಪಿಸಿದ್ದಾರೆ.

ಗಾಂಧಿನಗರ, ಮೇ 8: ಭಾರತದ ಪ್ರತಿಯೊಂದು ಭಾಗವೂ ಪವಿತ್ರವಾಗಿದ್ದು, ಭೌಗೋಳಿಕತೆಯನ್ನು ಮೀರಿದ ಏಕತೆಯ ಭಾವನೆಯಿಂದ ನಾವೆಲ್ಲರೂ ಒಂದಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದ್ದಾರೆ. ಗುಜರಾತ್‌ನ ಪುನರ್ನಿರ್ಮಿತ ಸೋಮನಾಥ ದೇವಾಲಯದ (Somnath Temple) ಉದ್ಘಾಟನೆಯ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಬರೆದ ವಿಶೇಷ ಲೇಖನದಲ್ಲಿ ಅವರು, ಸೋಮನಾಥದ ಇತಿಹಾಸವು ಭಾರತದ ಅಜೇಯ ಮನೋಭಾವದ ಸಂಕೇತವಾಗಿದೆ ಎಂದು ಬಣ್ಣಿಸಿದ್ದಾರೆ.

ವಿಭಜನೆಗಳಿಂದ ಕೂಡಿದ ಇಂದಿನ ಜಗತ್ತಿನಲ್ಲಿ ಭಾರತದ ಈ ಏಕತೆಯ ಸ್ಫೂರ್ತಿ ಅತ್ಯಂತ ಪ್ರಸ್ತುತವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. "ಸೋಮನಾಥ ದೇವಾಲಯವನ್ನು ರಕ್ಷಿಸಲು ಪ್ರಾಣತ್ಯಾಗ ಮಾಡಿದವರ ಮತ್ತು ಅದನ್ನು ಹಂತ ಹಂತವಾಗಿ ಪುನರ್ನಿರ್ಮಿಸಿದವರ ಹೋರಾಟವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಸೋಮನಾಥದ ಮೇಲಿನ ಪ್ರತಿಯೊಂದು ಆಕ್ರಮಣದ ನಂತರವೂ ಅದು ಮತ್ತೆ ಎದ್ದು ನಿಂತಿರುವುದು ಭಾರತೀಯ ಸಂಸ್ಕೃತಿಯ ವಿಜಯವನ್ನು ಸಾರುತ್ತದೆ," ಎಂದು ಅವರು ಬರೆದಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮುಂದಿನ ಒಂದು ಸಾವಿರ ದಿನಗಳ ಕಾಲ ಸೋಮನಾಥದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.

ಐತಿಹಾಸಿಕ ಮೈಲಿಗಲ್ಲುಗಳು

2026ರ ಆರಂಭದಲ್ಲಿ ತಾವು ಸೋಮನಾಥಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಿ, ಮೇ 11ರಂದು ದೇವಾಲಯದ 75ನೇ ವಾರ್ಷಿಕೋತ್ಸವದ ಅಂಗವಾಗಿ ಮತ್ತೊಮ್ಮೆ ಅಲ್ಲಿಗೆ ಭೇಟಿ ನೀಡುತ್ತಿರುವುದು ನನ್ನ ಸೌಭಾಗ್ಯ ಎಂದು ತಿಳಿಸಿದ್ದಾರೆ. 1951ರಲ್ಲಿ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅಂದಿನ ಪ್ರಧಾನಿ ನೆಹರೂ ಅವರ ತೀವ್ರ ವಿರೋಧದ ನಡುವೆಯೂ ಈ ದೇವಾಲಯವನ್ನು ಉದ್ಘಾಟಿಸಿದ್ದ ಐತಿಹಾಸಿಕ ಕ್ಷಣವನ್ನು ಅವರು ನೆನಪಿಸಿಕೊಂಡಿದ್ದಾರೆ.

''ಶಿಲೆಗಳನ್ನಲ್ಲ, ಮೋದಿ-ಯೋಗಿಯನ್ನೇ ಪೂಜಿಸಿʼʼ: ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ಸರ್ದಾರ್ ಪಟೇಲರ ಕನಸು

1947ರ ನವೆಂಬರ್ 13ರಂದು ಸರ್ದಾರ್ ಪಟೇಲರು ಸೋಮನಾಥದ ಭಗ್ನಾವಶೇಷಗಳ ಮುಂದೆ ನಿಂತು ದೇವಾಲಯದ ಪುನರ್ನಿರ್ಮಾಣದ ಪ್ರತಿಜ್ಞೆ ಮಾಡಿದ್ದರು. ಅವರ ಈ ಕನಸನ್ನು ಕೆ.ಎಂ. ಮುನ್ಶಿ ಮತ್ತು ನವನಗರದ ಜಾಮ್‌ಸಾಹೇಬರು ಮುನ್ನಡೆಸಿದರು. ʼವಿಕಾಸದ ಜತೆಗೆ ಪರಂಪರೆʼ (Vikas Bhi, Virasat Bhi) ಎಂಬ ತತ್ವದಡಿ ಕಾಶಿ, ಅಯೋಧ್ಯೆ ಮತ್ತು ಉಜ್ಜಯಿನಿಯಂತೆ ಸೋಮನಾಥವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮೋದಿ ವಿವರಿಸಿದ್ದಾರೆ.

ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆಯ ಈ ಸಂದರ್ಭದಲ್ಲಿ, ಸೋಮನಾಥದ ಅಸ್ಮಿತೆಯನ್ನು ಉಳಿಸಿದ ಅನೇಕ ವೀರರನ್ನು ಪ್ರಧಾನಿ ಸ್ಮರಿಸಿದ್ದಾರೆ. ಸೋಮನಾಥಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಾರತೀಯನೂ ಅಲ್ಲಿನ ಅಜೇಯ ನಾಗರಿಕತೆಯ ಚೈತನ್ಯವನ್ನು ಅನುಭವಿಸುತ್ತಾರೆ ಎಂದು ಅವರು ಕರೆ ನೀಡಿದ್ದಾರೆ. ಇದು ಕೇವಲ ಒಂದು ದೇವಾಲಯದ ಪುನರ್ನಿರ್ಮಾಣವಲ್ಲ, ಬದಲಿಗೆ ಭಾರತದ 'ಸ್ವಾಭಿಮಾನ'ದ ಪುನರುತ್ಥಾನವಾಗಿದೆ ಎಂಬುದು ಪ್ರಧಾನಿ ಅವರ ಲೇಖನದ ಸಾರ. 'ಏಕ ಭಾರತ ಶ್ರೇಷ್ಠ ಭಾರತ' ಎಂಬ ಮಂತ್ರಕ್ಕೆ ಈ ಪುಣ್ಯಕ್ಷೇತ್ರ ಸಾಕ್ಷಿ.