ಗಾಂಧಿನಗರ, ಸೆ. 7: ಪ್ರಧಾನಿ ನರೇಂದ್ರ ಮೋದಿ (PM Modi) ಸೆಪ್ಟೆಂಬರ್ 8ರಂದು ಗುಜರಾತ್‌ನ ವಡೋದರಾಕ್ಕೆ ಭೇಟಿ ನೀಡಲಿದ್ದು, ಈ ಬಾರಿ ಅವರ ಸಾರ್ವಜನಿಕ ಕಾರ್ಯಕ್ರಮ ವಿಭಿನ್ನ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಮೊದಲ ಬಾರಿಗೆ ಪ್ರಧಾನಿ ಅವರ ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ಜನರಿಂದ BookMyShow ಮೂಲಕ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಲಾಗಿದೆ. ವಡೋದರಾ ಮಹಾನಗರ ಪಾಲಿಕೆ (VMC) ಆಯೋಜಿಸಿರುವ 'NaMo for Viksit Bharat' ಕಾರ್ಯಕ್ರಮವು ಮಂಗಳವಾರ ಮಹಾರಾಜಾ ಸಯಾಜಿರಾವ್ ವಿಶ್ವವಿದ್ಯಾಲಯದ ಪೆವಿಲಿಯನ್‌ನಲ್ಲಿ ನಡೆಯಲಿದೆ.
ಅಭಿವೃದ್ಧಿ ಹೊಂದಿದ ಭಾರತವನ್ನು 2047ರ ವೇಳೆಗೆ ನಿರ್ಮಿಸುವ ಸರ್ಕಾರದ ದೃಷ್ಟಿಕೋನದ ಕುರಿತು ನಡೆಯಲಿರುವ ಕಾರ್ಯಕ್ರಮದಲ್ಲಿ ನಾಗರಿಕರು, ವಿದ್ಯಾರ್ಥಿಗಳು, ವೃತ್ತಿಪರರು, ಶಿಕ್ಷಣ ತಜ್ಞರು, ಉದ್ಯಮಿಗಳು, ಕೈಗಾರಿಕಾ ಪ್ರತಿನಿಧಿಗಳು ಹಾಗೂ ನಾಗರಿಕ ಸಮಾಜದ ಸದಸ್ಯರು ಭಾಗವಹಿಸಲಿದ್ದಾರೆ.
ಬುಕ್‌ಮೈಶೋದಲ್ಲಿ ನೋಂದಣಿ ಆರಂಭವಾದ ಒಂದು ಗಂಟೆಯೊಳಗೆ ಲಭ್ಯವಿದ್ದ ಎಲ್ಲ ಆಸನಗಳು ಭರ್ತಿಯಾಗಿವೆ. 42,000ಕ್ಕೂ ಹೆಚ್ಚು ಮಂದಿ ಹೆಚ್ಚುವರಿಯಾಗಿ ನೋಂದಣಿಗೆ ಅರ್ಜಿ ಸಲ್ಲಿಸಿದ್ದು, ಅವರನ್ನು ವೇಟಿಂಗ್ ಲಿಸ್ಟ್‌ಗೆ ಸೇರಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಬಳಿಕ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು.
ಕಾರ್ಯಕ್ರಮಕ್ಕೆ ಪ್ರವೇಶವೂ ಸಂಪೂರ್ಣ ಡಿಜಿಟಲ್ ಆಗಿರಲಿದೆ. ನೋಂದಾಯಿಸಿಕೊಂಡವರಿಗೆ BookMyShow ಖಾತೆಯ ಮೂಲಕ ಎಲೆಕ್ಟ್ರಾನಿಕ್ M-Ticket ನೀಡಲಾಗುತ್ತದೆ. ಟಿಕೆಟ್‌ನಲ್ಲಿರುವ ಲೈವ್ QR ಕೋಡ್ ಮೂಲಕ ಪ್ರವೇಶವನ್ನು ದೃಢೀಕರಿಸಲಾಗುತ್ತದೆ.
₹35,000 ಕೋಟಿಗೂ ಅಧಿಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ವಡೋದರಾ ಭೇಟಿಯ ವೇಳೆ ಪ್ರಧಾನಿ ಮೋದಿ ಸುಮಾರು ₹35,000 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
6 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ: ಅಕ್ಟೋಬರ್ 6ರಂದು ಮತದಾನ, 9ರಂದು ಫಲಿತಾಂಶ
ರೈಲು ಸಂಪರ್ಕಕ್ಕೆ ಮಹತ್ವದ ಉತ್ತೇಜನ
ಪ್ರಧಾನಿ ಮೋದಿ 326 ಕಿ.ಮೀ ಉದ್ದದ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನ ಮೂರು ವಿಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದರಿಂದ ಸಂಪೂರ್ಣ ಸರಕು ಸಾಗಣೆ ಕಾರಿಡಾರ್ ಜಾಲ ಕಾರ್ಯನಿರ್ವಹಣೆಗೆ ಬರಲಿದೆ. ₹20,700 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಿಭಾಗಗಳು ಉತ್ತರ ಭಾರತವನ್ನು ಮುಂಬೈಯ ಜವಾಹರಲಾಲ್ ನೆಹರೂ ಪೋರ್ಟ್‌ಗೆ ನೇರ ರೈಲು ಸಂಪರ್ಕ ಕಲ್ಪಿಸಲಿವೆ. ಇದರಿಂದ ಆಮದು-ರಫ್ತು ಸರಕು ಸಾಗಣೆ ವೇಗಗೊಳ್ಳುವುದರ ಜತೆಗೆ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ.
ಇದರ ಜತೆಗೆ ನ್ಯೂ ಸನಂದ್, ನ್ಯೂ ಮಕರ್ಪುರಾ, ನ್ಯೂ ಉಂಬರ್‌ಗಾಂವ್ ಮತ್ತು ನ್ಯೂ JNPTನಿಂದ ಸರಕು ರೈಲು ಸೇವೆಗಳಿಗೆ ಚಾಲನೆ ನೀಡಲಾಗುತ್ತದೆ. ವಡೋದರಾ–ಟಾಂಡಾ ರೋಡ್ ನಡುವೆ ಹೊಸ ಪ್ರಯಾಣಿಕ ರೈಲಿಗೂ ಚಾಲನೆ ದೊರೆಯಲಿದೆ. ಅಲಿರಾಜ್‌ಪುರದ ದೂರದ ಹಾಗೂ ಬುಡಕಟ್ಟು ಪ್ರದೇಶಗಳನ್ನು ರಾಷ್ಟ್ರೀಯ ರೈಲು ಜಾಲಕ್ಕೆ ಸಂಪರ್ಕಿಸುವ ಜೋಬಟ್–ಟಾಂಡಾ ರೋಡ್ ರೈಲು ಮಾರ್ಗವನ್ನೂ ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಇದಲ್ಲದೆ, ₹9,700 ಕೋಟಿಗೂ ಅಧಿಕ ವೆಚ್ಚದ 329 ಕಿ.ಮೀ ಉದ್ದದ ಮೂರು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಸುಮಾರು ₹1,780 ಕೋಟಿ ವೆಚ್ಚದ ಮೂರು ಹೆದ್ದಾರಿ ಯೋಜನೆಗಳಿಗೂ ಚಾಲನೆ ನೀಡಲಾಗುತ್ತದೆ.
ಗುಜರಾತ್ ಸರ್ಕಾರದ ಸುಮಾರು ₹2,600 ಕೋಟಿ ಮೌಲ್ಯದ ಯೋಜನೆ ಕೂಡ ಕಾರ್ಯಕ್ರಮದ ಪಟ್ಟಿಯಲ್ಲಿವೆ. ವಡೋದರಾ ಎರಡನೇ ಹಂತದ ರಿಂಗ್‌ರೋಡ್, ಕದಾನಾ ಅಣೆಕಟ್ಟಿನಲ್ಲಿ 110 ಮೆಗಾವ್ಯಾಟ್ ತೇಲುವ ಸೌರ ವಿದ್ಯುತ್ ಯೋಜನೆ ಹಾಗೂ ಹೊಸ ಮಹಾನಗರ ಪಾಲಿಕೆ ಕಚೇರಿ ಇದರಲ್ಲಿ ಸೇರಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳು ಮತ್ತು 11 ಗ್ರಾಮಗಳಿಗೆ ನೀರು ಪೂರೈಕೆ ಯೋಜನೆಯನ್ನೂ ಉದ್ಘಾಟಿಸಲಾಗುತ್ತದೆ.
ನಂತರ ಪ್ರಧಾನಿ ಮೋದಿ ಮುಂಬೈಗೆ ತೆರಳಿ Global Fintech Fest 2026 ಉದ್ಘಾಟಿಸಲಿದ್ದಾರೆ. ಏಜೆಂಟಿಕ್ AI, ಟೋಕನೈಸೇಶನ್ ಮತ್ತು ಕ್ವಾಂಟಮ್ ತಂತ್ರಜ್ಞಾನಗಳ ಮೂಲಕ ವಿಶ್ವಾಸಾರ್ಹ, ಸಂಪರ್ಕಿತ ಹಾಗೂ ಎಲ್ಲರನ್ನೂ ಒಳಗೊಂಡ ಹಣಕಾಸು ವ್ಯವಸ್ಥೆ ನಿರ್ಮಿಸುವುದು ಈ ಬಾರಿಯ ಸಮಾವೇಶದ ಪ್ರಮುಖ ವಿಷಯ.