ನವದೆಹಲಿ, ಸೆ. 29: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB Fraud Case) ವಂಚನೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವನಿಗೆ ಸಂಭವಿಸಿದ್ದು, ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ (Nirav Modi) ಅವರ ಆಪ್ತ ಸಹಾಯಕ ಸಂದೀಪ್ ಭಾರತ್ ಮಿಸ್ತ್ರಿಯನ್ನು (Sandeep Bharat Mistry) ಸಿಬಿಐ (CBI) ಬಂಧಿಸಿದೆ. ಸಂದೀಪ್ ಭಾರತ್ ಮಿಸ್ತ್ರಿಯನ್ನು ಯುಎಇಯಿಂದ ಗಡಿಪಾರು ಮಾಡಿ ಭಾರತಕ್ಕೆ ಕರೆತಂದಾಗ ಕೇಂದ್ರ ತನಿಖಾ ದಳದ ಸಿಬ್ಬಂದಿ ವಶಕ್ಕೆ ಪಡೆದರು.
ಮೂಲಗಳ ಪ್ರಕಾರ, ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಂದೀಪ್ ಭಾರತ್ ಮಿಸ್ತ್ರಿಯನ್ನು ಹುಡುಕುತ್ತಿದ್ದರು. ಈ ವಂಚನೆಯಲ್ಲಿ ನಕಲಿ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳನ್ನು ಬಳಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಮಿಸ್ತ್ರಿಯ ಪಾತ್ರವನ್ನು ವಿವರಿಸಿದ ಅಧಿಕಾರಿಯೊಬ್ಬರು, “ವಿವಿಧ ಸಂಸ್ಥೆಗಳ ನಡುವೆ ಮಿಸ್ತ್ರಿ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಆ ಸಂಸ್ಥೆಗಳ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಸಾಕ್ಷ್ಯಗಳನ್ನು ಮರೆಮಾಚುವ ಉದ್ದೇಶದಿಂದ, ರಹಸ್ಯವಾಗಿ ಬಳಸಬಹುದಾದ ಮತ್ತು ಸಂದೇಶಗಳು ಸ್ವಯಂಚಾಲಿತವಾಗಿ ಅಳಿಸಿಹೋಗುವ ವ್ಯವಸ್ಥೆ ಮೂಲಕ ಸೂಚನೆ ನೀಡುತ್ತಿದ್ದರು ಎಂದು ಹೇಳಿದ್ದಾರೆ.
ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದಲ್ಲಿ ಸೋಲು; ಶೀಘ್ರದಲ್ಲೇ ನೀರವ್ ಮೋದಿ ಹಸ್ತಾಂತರ?
ಯುಎಇಯಲ್ಲಿರುವ ನಕಲಿ ಕಂಪನಿಗಳ ಬ್ಯಾಂಕ್ ಖಾತೆಗಳಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವ ಕಾರ್ಯದಲ್ಲೂ ಸಂದೀಪ್ ಭಾರತ್ ಮಿಸ್ತ್ರಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ, ಎರಡೂ ಮಿಸ್ತ್ರಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿವೆ. ಅಲ್ಲದೆ, ಈ ವರ್ಷದ ಜುಲೈಯಲ್ಲಿ ಅವರ ವಿರುದ್ಧ ಇಂಟರ್‌ಪೋಲ್‌ನಿಂದ ರೆಡ್ ನೋಟಿಸ್ ಕೂಡ ಜಾರಿಯಾಗಿತ್ತು.
ಯುಎಇ ಅಧಿಕಾರಿಗಳು ಮಿಸ್ತ್ರಿ ಇರುವ ಸ್ಥಳವನ್ನು ತಾಂತ್ರಿಕವಾಗಿ ಪತ್ತೆಹಚ್ಚಿ ಅವರನ್ನು ಬಂಧಿಸಿದ್ದರು. ನಂತರ, ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಿಸಲಾಯಿತು. ಇಂಟರ್‌ಪೋಲ್ ನೋಟಿಸ್ ನೀಡಿದ ನಂತರ ಎರಡು ತಿಂಗಳೊಳಗೆ ಮಿಸ್ತ್ರಿಯನ್ನು ಪತ್ತೆಹಚ್ಚಿ ಭಾರತಕ್ಕೆ ಕರೆತರಲಾಯಿತು. ಈ ಕಾರ್ಯಾಚರಣೆಯಲ್ಲಿ ವಿವಿಧ ದೇಶಗಳ ಸಂಬಂಧಿತ ತನಿಖಾ ಸಂಸ್ಥೆಗಳು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪರಸ್ಪರ ಸಹಕರಿಸಿವೆ ಎಂದು ಅಧಿಕಾರಿ ಹೇಳಿದ್ದಾರೆ.
ಸೋಮವಾರ (ಸೆಪ್ಟೆಂಬರ್ 28) ರಾತ್ರಿ 11.55ಕ್ಕೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಸಿಬಿಐಯ ಅಧಿಕಾರಿಗಳು ವಶಕ್ಕೆ ಪಡೆದರು. ಅವರನ್ನು ಮಹಾರಾಷ್ಟ್ರದ ಮುಂಬೈಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲೇ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.