ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದಲ್ಲಿ ಸೋಲು; ಶೀಘ್ರದಲ್ಲೇ ನೀರವ್ ಮೋದಿ ಹಸ್ತಾಂತರ?

Nirav Modi's Extradition Likely Soon: ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದಲ್ಲಿ (ECHR) ಮೇಲ್ಮನವಿ ಸಲ್ಲಿಸುವ ಮೂಲಕ ಅಂತಿಮ ಕಾನೂನು ಹೋರಾಟದಲ್ಲಿ ಸೋತ ಉದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವುದು ಸನ್ನಿಹಿತವಾಗಿದೆ ಎಂದು ತಿಳಿದು ಬಂದಿದೆ. ಮೋದಿಗೆ ಪರಿಹಾರ ನೀಡಲು ಇಸಿಎಚ್ಆರ್ ನಿರಾಕರಿಸಿದ್ದರಿಂದ, ಅವರ ಗಡೀಪಾರಿಗೆ ಈಗ ಯಾವುದೇ ಕಾನೂನು ಅಡೆತಡೆಗಳು ಉಳಿದಿಲ್ಲ.

ಶೀಘ್ರದಲ್ಲೇ ನೀರವ್ ಮೋದಿ ಭಾರತಕ್ಕೆ ಹಸ್ತಾಂತರ?

ಉದ್ಯಮಿ ನೀರವ್ ಮೋದಿ (ಸಂಗ್ರಹ ಚಿತ್ರ) -

Priyanka P
Priyanka P Jul 6, 2026 3:38 PM

ನವದೆಹಲಿ, ಜು.6: ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದಲ್ಲಿ (ECHR) ಮೇಲ್ಮನವಿ ಸಲ್ಲಿಸುವ ಮೂಲಕ ಅಂತಿಮ ಕಾನೂನು ಹೋರಾಟದಲ್ಲಿ ಸೋತ ಉದ್ಯಮಿ ನೀರವ್ ಮೋದಿ (Nirav Modi) ಯನ್ನು ಭಾರತಕ್ಕೆ ಹಸ್ತಾಂತರಿಸುವುದು ಸನ್ನಿಹಿತವಾಗಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ನೀರವ್ ಮೋದಿಗೆ ಲಭ್ಯವಿದ್ದ ಎಲ್ಲಾ ಕಾನೂನುಬದ್ಧ ಅವಕಾಶಗಳು ಈಗಾಗಲೇ ಮುಕ್ತಾಯಗೊಂಡಿವೆ. ಇದೀಗ ಉಳಿದಿರುವುದು ಆಡಳಿತಾತ್ಮಕ ಪ್ರಕ್ರಿಯೆಗಳು ಮಾತ್ರ. ಇದೀಗ ಇಂಗ್ಲೆಂಡ್‌ನ (England) ಅಧಿಕಾರಿಗಳು ಅವರ ಹಸ್ತಾಂತರ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎನ್ನಲಾಗಿದೆ.

ಈ ಮೊದಲು, ಮೋದಿ ಸಲ್ಲಿಸಿದ್ದ ಅರ್ಜಿಗೆ ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದಲ್ಲಿ ಗೌಪ್ಯತೆಯ ರಕ್ಷಣೆ ನೀಡಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ರಹಸ್ಯವಾಗಿರಿಸಲಾಗಿದೆ ಎಂದು ವರದಿಯಾಗಿತ್ತು. ಸ್ಟ್ರಾಸ್‌ಬರ್ಗ್‌ನಲ್ಲಿರುವ ನ್ಯಾಯಾಲಯವು, ಅಂತಹ ಪ್ರಕರಣಗಳು ವಿಚಾರಣೆಯಲ್ಲಿರುವಾಗ ಅವುಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ.

ತನ್ನ ತಕ್ಷಣದ ಹಸ್ತಾಂತರಕ್ಕಾಗಿ ಇಂಗ್ಲೆಂಡ್‌, ದಾಖಲೆಗಳನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಧಾರದ ಹಿನ್ನೆಲೆಯಲ್ಲಿ ಮೋದಿ ಅವರು 2026ರ ಏಪ್ರಿಲ್‌ನಲ್ಲಿ ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಭಾರತವು, ಇಲ್ಲಿನ ಜೈಲು ಪರಿಸ್ಥಿತಿಗಳು ಮತ್ತು ಚಿಕಿತ್ಸೆಯ ಬಗ್ಗೆ ನೀಡಿದ ಭರವಸೆಗಳು ಸಮರ್ಪಕವಾಗಿವೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಅವರ ಹಸ್ತಾಂತರವನ್ನು ಪ್ರಶ್ನಿಸಲು ಇಂಗ್ಲೆಂಡ್ ಹೈಕೋರ್ಟ್ ಅನುಮತಿ ನಿರಾಕರಿಸಿತು. ಹೀಗಾಗಿ ಮೋದಿ ಅವರು ಇಸಿಎಚ್ಆರ್ (ECHR) ಗೆ ಅರ್ಜಿ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದರು.

Nirav Modi: ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿ ಮತ್ತೆ ಕೋರ್ಟ್‌ ಮೆಟ್ಟಿಲೇರಿದ ನೀರವ್ ಮೋದಿ

ಮೋದಿಗೆ ಪರಿಹಾರ ನೀಡಲು ಇಸಿಎಚ್ಆರ್ ನಿರಾಕರಿಸಿದ್ದರಿಂದ, ಅವರ ಗಡೀಪಾರಿಗೆ ಈಗ ಯಾವುದೇ ಕಾನೂನು ಅಡೆತಡೆಗಳು ಉಳಿದಿಲ್ಲ ಎಂದು ಹೇಳಲಾಗಿದೆ. ಮಾರ್ಚ್ 2019 ರಲ್ಲಿ ಬಂಧನಕ್ಕೊಳಗಾದಾಗಿನಿಂದ ನೀರವ್ ಮೋದಿ ಲಂಡನ್‌ನ ವ್ಯಾಂಡ್ಸ್‌ವರ್ತ್ ಜೈಲಿನಲ್ಲಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿ, ತನಿಖೆಗೊಳಪಡಿಸಲು ಪ್ರಯತ್ನಿಸುತ್ತಿದೆ.

ಮೋದಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಇಂಗ್ಲೆಂಡ್‌ನ ಅಧಿಕಾರಿಗಳು ಹೇಳಿದ್ದು, ಯಾವುದೇ ಸಮಯದಲ್ಲಿ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಹೇಳಲಾಗಿದೆ.

ಮಾರ್ಚ್‌ನಲ್ಲಿ, ತನ್ನ ಹಸ್ತಾಂತರ ಆದೇಶದ ವಿರುದ್ಧದ ವಿಚಾರಣೆಯನ್ನು ಮತ್ತೆ ತೆರೆಯಲು ಮೋದಿ ಸಲ್ಲಿಸಿದ ಅರ್ಜಿಯನ್ನು ಲಂಡನ್‌ನಲ್ಲಿರುವ ಕಿಂಗ್ಸ್ ಬೆಂಚ್ ವಿಭಾಗದ ಹೈಕೋರ್ಟ್ ಆಫ್ ಜಸ್ಟೀಸ್ ತಿರಸ್ಕರಿಸಿತು. ಭಾರತಕ್ಕೆ ಹಸ್ತಾಂತರಿಸಿದರೆ ಚಿತ್ರಹಿಂಸೆಗೆ ಗುರಿಯಾಗುವ ಅಪಾಯವಿದೆ ಎಂದು ನೀರವ್ ಮೋದಿ ಹೇಳಿದ್ದರು. ಆದರೆ ಸಿಬಿಐ ಅಧಿಕಾರಿಗಳು ಅವರ ವಾದವನ್ನು ತಳ್ಳಿಹಾಕಿದ್ದರು.