ಶ್ರೀನಗರ: ಸೋಮವಾರ ಜಮ್ಮು-ಕಾಶ್ಮೀರದ (Jammu and Kashmir) ಪೂಂಚ್ ಜಿಲ್ಲೆಯ (Poonch District) ಕೃಷ್ಣ ಘಾಟಿ ವಲಯದ (Krishna Ghati Sector) ಸತ್ವಾಲ್-ನಾಕಿ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ನಿಯಂತ್ರಣ ರೇಖೆಯ ಪಾಕಿಸ್ತಾನದ ಕಡೆಯಿಂದ ಉಗ್ರರ ಗುಂಪೊಂದು ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡ ಪರಿಣಾಮ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ.
ಹತರಾದ ಉಗ್ರರ ಗುರುತು ಪತ್ತೆ
ಹತರಾದ ಉಗ್ರರನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಪೂಂಚ್ ಜಿಲ್ಲೆಯ ಹಜೀರಾ ತೆಹಸಿಲ್‌ನ ಮಂದ್ಲಾ ಮತ್ತು ಮದರ್‌ಪುರ ನಿವಾಸಿಗಳಾದ ಮೊಹಮ್ಮದ್ ಇಷ್ಟಿಯಾಕ್, ಮೊಹಮ್ಮದ್ ಫೈಜಾನ್, ಮೊಹಮ್ಮದ್ ವಕಾಸ್ ಮತ್ತು ಮೊಹಮ್ಮದ್ ಆಸಿಮ್ ಎಂದು ಗುರುತಿಸಲಾಗಿದೆ. ಇವರಲ್ಲಿ ಮೊಹಮ್ಮದ್ ಫೈಜಾನ್ ಲಷ್ಕರ್-ಎ-ತೊಯ್ಬಾದ ಪ್ರಮುಖ ಕಮಾಂಡರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಬಳಿಕ ಗಡಿಭಾಗದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ನಿಯಂತ್ರಣ ರೇಖೆಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದ್ದು, ಯಾವುದೇ ರೀತಿಯ ಒಳನುಸುಳುವಿಕೆ ನಡೆಯದಂತೆ ಭದ್ರತಾ ಪಡೆಗಳು ನಿಗಾ ಹೆಚ್ಚಿಸಿವೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆಯೂ ಇದೇ ಪ್ರದೇಶದಲ್ಲಿ ಸ್ಫೋಟ
ಸತ್ವಾಲ್-ನಾಕಿ ಪ್ರದೇಶವನ್ನು ಉಗ್ರರ ಒಳನುಸುಳುವಿಕೆಯ ಸಾಂಪ್ರದಾಯಿಕ ಮಾರ್ಗವೆಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಮಾರ್ಗದ ಮೂಲಕ ಭಾರತದೊಳಗೆ ನುಸುಳಲು ಉಗ್ರರು ಹಲವು ಬಾರಿ ಪ್ರಯತ್ನಿಸಿದ್ದಾರೆ. ಈ ಹಿಂದೆ ಇದೇ ಪ್ರದೇಶದಲ್ಲಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್ (BAT) ತಂಡದ ಆರುರಿಂದ ಏಳು ಸದಸ್ಯರು ಇದೇ ರೀತಿಯ ಘಟನೆಯಲ್ಲಿ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಟ್ಯಾಂಕರ್ ಮೇಲೆ ಡ್ರೋನ್ ದಾಳಿ: ಇಬ್ಬರು ನಾವಿಕರು ನಾಪತ್ತೆ
ಮೆಂಧರ್‌ನಲ್ಲಿ ಎರಡು ಲ್ಯಾಂಡ್‌ಮೈನ್‌ಗಳು ಪತ್ತೆ
ಇದೇ ವೇಳೆ, ಪೂಂಚ್ ಜಿಲ್ಲೆಯ ಮೆಂಧರ್ ವಲಯದ ಬಸೋನಿ ಪ್ರದೇಶದಲ್ಲಿ ಗಡಿ ಬೇಲಿಯ ಸಮೀಪ ಎರಡು ತುಕ್ಕು ಹಿಡಿದ ಲ್ಯಾಂಡ್‌ಮೈನ್‌ಗಳನ್ನು ಭಾರತೀಯ ಸೇನೆ ಪತ್ತೆಹಚ್ಚಿದೆ. ಸೋಮವಾರ ಬೆಳಿಗ್ಗೆ 8.25 ಮತ್ತು ಮಧ್ಯಾಹ್ನ 12.10ರ ವೇಳೆಗೆ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಸ್ಫೋಟಕಗಳು ಪತ್ತೆಯಾಗಿವೆ.
ಬಳಿಕ ಸೇನೆಯ ತಜ್ಞರು ನಿಯಂತ್ರಿತ ಸ್ಫೋಟದ ಮೂಲಕ ಎರಡೂ ಲ್ಯಾಂಡ್‌ಮೈನ್‌ಗಳನ್ನು ನಾಶಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಂತ್ರಣ ರೇಖೆಯ ಮುಂಚೂಣಿ ಪ್ರದೇಶಗಳಲ್ಲಿ ಒಳನುಸುಳುವಿಕೆ ತಡೆಯುವ ಉದ್ದೇಶದಿಂದ ಲ್ಯಾಂಡ್‌ಮೈನ್‌ಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ಭಾರೀ ಮಳೆಯಿಂದಾಗಿ ಕೆಲವೊಮ್ಮೆ ಈ ಲ್ಯಾಂಡ್‌ಮೈನ್‌ಗಳು ಕೊಚ್ಚಿಹೋಗಿ ಬೇರೆ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ಸ್ಥಳೀಯರು ಹಾಗೂ ಭದ್ರತಾ ಸಿಬ್ಬಂದಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ.