ಪವರ್ ಬ್ಯಾಂಕ್‌ನಿಂದಾಗಿ ದೆಹಲಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ
Delhi-Chennai IndiGo Flight: ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೈದರಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇಂಡಿಗೋ ವಿಮಾನದಲ್ಲಿ ಕಾನಿಸಿಕೊಂಡ ಬೆಂಕಿ, ಸಾಂದರ್ಭಿಕ ಚಿತ್ರ -
ದೆಹಲಿ, ಅ. 11: ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೈದರಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಲಗೇಜ್‌ನಲ್ಲಿದ್ದ ಪವರ್‌ಬ್ಯಾಂಕ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಕ್ಟೋಬರ್ 11ರಂದು ದೆಹಲಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ 6E6115 ವಿಮಾನದಲ್ಲಿದ್ದ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಉಳಿದ ಕಡೆ ವ್ಯಾಪಿಸಿತು ಎಂದು ವರದಿಯೊಂದು ಹೇಳಿದೆ. ದೆಹಲಿಯಿಂದ ಮಧ್ಯಾಹ್ನ 1:30ಕ್ಕೆ ಹೊರಟಿದ್ದ ವಿಮಾನ ಚೆನ್ನೈಗೆ 4 ಗಂಟೆಗೆ ತಲುಪಬೇಕಿತ್ತು. ಬೆಂಕಿ ಕಾಣಿಸಿಕೊಂಡಿದ್ದು ಯಾವಾಗ, ಎಲ್ಲಿ ಎನ್ನುವ ನಿಖರ ಮಾಹಿತಿ ಲಭಿಸಿಲ್ಲ. ಘಟನೆ ಬಳಿಕ ವಿಮಾನವನ್ನು ಹೈದರಾಬಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
ಸದ್ಯ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಮಾನದೊಳಗೆ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಪ್ರಯಾಣಿಕರು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸಮಸಯಕ್ಕೆ ಸರಿಯಾಗಿ ಸಿಬ್ಬಂದಿ ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.
ಇಂಡಿಗೋ ವಿಮಾನದಲ್ಲಿ ಬೆಂಕಿ ಆಕಸ್ಮಿಕ:
IndiGo flight 6E6115 from #Delhi to #Chennai was diverted to #Hyderabad on October 11 after a power bank reportedly caught fire onboard. The cabin crew used a fire extinguisher to contain the blaze. The Airbus A321neo (VT-NOE) departed at 1:30 PM and was scheduled to land in Chennai at 4 PM. The exact time and location of the fire, and details of any injuries, remain unconfirmed.
— Ashish (@KP_Aashish) October 11, 2026
ಘಟನೆ ವೇಳೆ ವಿಮಾನದಲ್ಲಿ ಎಷ್ಟು ಜನ ಪ್ರಯಾಣಿಕರಿದ್ದರು ಎನ್ನುವ ಮಾಹಿತಿ ಗೊತ್ತಾಗಿಲ್ಲ. ಆಕಸ್ಮಿಕ ಘಟನೆಯಿಂದ ಪ್ರಯಾಣಿಕರಿಗಾದ ಅನಾನುಕೂಲತೆಗೆ ಇಂಡಿಗೋ ವಿಷಾದ ವ್ಯಕ್ತಪಡಿಸಿದೆ. ಜತೆಗೆ ಪ್ರಯಾಣಿಕರ ಸುರಕ್ಷತೆಯೇ ತನ್ನ ಆದ್ಯತೆ ಎಂದು ಒತ್ತಿ ಹೇಳಿದೆ.
ಚೆನ್ನೈಗೆ ತೆರಳಲು ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ. ವಿಮಾನ ವ್ಯವಸ್ಥೆ ಮಾಡುವವರೆಗೆ ಪ್ರಯಾಣಿಕರಿಗೆ ಉಪಾಹಾರ ವ್ಯವಸ್ಥೆ ಮಾಡಲಾಯಿತು. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಿಯಮಿತ ಮಾಹಿತಿ ಒದಗಿಸಲಾಯಿತು ಎಂದು ಸಂಸ್ಥೆಯ ಮೂಲಗಳು ತಿಳಿಸಿದೆ. "ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಉಪಾಹಾರದ ವ್ಯವಸ್ಥೆ ಮತ್ತು ಸಕಾಲದಲ್ಲಿ ಮಾಹಿತಿ ನೀಡುವುದು ಸೇರಿ ಈ ಸಮಸ್ಯೆಯ ಪರಿಹಾರಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಂಡಿಗೋದಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ಪ್ರಮುಖ ಆದ್ಯತೆ" ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ವಿವರಿಸಿದ್ದಾರೆ.
"ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ" ಎಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (RGIA) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.