Pralhad Joshi: ಚಂದ್ರಯಾನ ಯಶಸ್ವಿಗೊಂಡರೂ ರಾಹುಲ್ ರೀ ಲಾಂಚ್ ವಿಫಲ: ಜೋಶಿ ವ್ಯಂಗ್ಯ
Pralhad Joshi: ಭಾರತ ಇಂದು ಜಗತ್ತಿನಲ್ಲೇ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಅದರಂತೆ ದೇಶವಿಂದು ಒಬ್ಬ ಒಳ್ಳೆಯ ವಿರೋಧ ಪಕ್ಷದ ನಾಯಕನನ್ನು ಬಯಸುತ್ತಿದೆ. ಕಾಂಗ್ರೆಸ್ ಪಕ್ಷ ಈ ವಾಸ್ತವ ಅರಿಯುವ ಪ್ರಯತ್ನ ಮಾಡಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಚಾಟಿ ಬೀಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ. -

ನವದೆಹಲಿ: ನಮ್ಮ ಚಂದ್ರಯಾನ ಯಶಸ್ವಿಗೊಂಡಿದೆ. ಆದರೆ, ರಾಹುಲ್ ಗಾಂಧಿ ಮಾತ್ರ ಇನ್ನೂ ರೀ ಲಾಂಚ್... ರೀ ಲಾಂಚ್ ಆಗುತ್ತಲೇ ಇದ್ದು, ಕಾಂಗ್ರೆಸ್ ನಾಯಕತ್ವದಲ್ಲಿ ವೈಫಲ್ಯ ಕಾಣುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದರು. ದೆಹಲಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಮರಳಿ ಯತ್ನವ ಮಾಡು..ಮರಳಿ ಯತ್ನವ ಮಾಡು ಎನ್ನುವಂತೆ ರಾಹುಲ್ ಗಾಂಧಿ ನಾಯಕತ್ವಕ್ಕೆ ಕಾಂಗ್ರೆಸ್ ರೀ ಲಾಂಚ್ ಮಾಡುತ್ತಲೇ ಇದೆ. ಅವರೂ ವಿಫಲರಾಗುತ್ತಲೇ ಇದ್ದಾರೆ. ʼತಾನೇನು ಮಾಡಲು ಹೊರಟಿರುವೆʼ ಎಂಬುದೇ ಅವರಿಗೆ ತಿಳಿದಂತಿಲ್ಲ ಎಂದು ಕುಟುಕಿದರು.
ಭಾರತ ಇಂದು ಜಗತ್ತಿನಲ್ಲೇ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಅದರಂತೆ ದೇಶವಿಂದು ಒಬ್ಬ ಒಳ್ಳೆಯ ವಿರೋಧ ಪಕ್ಷದ ನಾಯಕನನ್ನು ಬಯಸುತ್ತಿದೆ. ಕಾಂಗ್ರೆಸ್ ಪಕ್ಷ ಈ ವಾಸ್ತವ ಅರಿಯುವ ಪ್ರಯತ್ನ ಮಾಡಲಿ ಎಂದು ಜೋಶಿ ಚಾಟಿ ಬೀಸಿದರು.
ಜನ ಕಾಂಗ್ರೆಸ್‌ಗೆ ಮತ ಹಾಕದಿದ್ರೆ ನಮ್ಮ ತಪ್ಪೇ?
ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಜನ ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ನಾವೇನು ಮಾಡೋಣ? ಅದು ನಮ್ಮ ತಪ್ಪೇ? ಕಾಂಗ್ರೆಸ್ಸಿಗರು ಜನರನ್ನು ಅಗೌರವಿಸುವುದರ ಪ್ರತಿಫಲವದು. ಹಾಗಾಗಿ ಜನ ಅವರನ್ನು ಬೆಂಬಲಿಸುತ್ತಿಲ್ಲ ಎಂದು ಆರೋಪಿಸಿದರು.
ʼಮತಕಳ್ಳತನʼ ಎನ್ನುತ್ತಿರುವ ರಾಹುಲ್ ಗಾಂಧಿ ದೇಶಕ್ಕೆ ಅದೇನು ಹೇಳಲು ಬಯಸುತ್ತಿದ್ದಾರೋ ಗೊತ್ತಿಲ್ಲ. ಮೊದಲು ತಾವೇ ಸ್ವತಃ ಗೊಂದಲಕ್ಕೆ ಒಳಗಾಗಿದ್ದಾರೆ. ನೇಪಾಳ-ಶ್ರೀಲಂಕಾಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಏಕಿಂಥ ಅಸಂಬದ್ಧತೆ ತೋರುತ್ತಿದ್ದಾರೋ ತಿಳಿಯದು ಎಂದು ಬೇಸರ ವ್ಯಕ್ತಪಡಿಸಿದರು.
ಅರಾಜಕತೆಯನ್ನು ಜನ ಇಚ್ಛಿಸುವುದಿಲ್ಲ
ಪ್ರಜಾಸತ್ತಾತ್ಮಕವಾಗಿ ಅಧಿಕಾರ ಪಡೆಯಲಾಗದ ಕಾರಣ ಕೆಲವು ಎಡಪಂಥೀಯ ವಿಧಾನಗಳ ಮೂಲಕ ಅಧಿಕಾರ ಪಡೆದುಕೊಳ್ಳಬಹುದು ಎಂಬುದು ಅವರ ನಂಬಿಕೆ. ಆದರೆ, ಭಾರತೀಯರು ಈ ಚಿಂತನೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಅವರನ್ನು ಬೆಂಬಲಿಸುತ್ತಲೂ ಇಲ್ಲ. ಅರಾಜಕತೆ ಸೃಷ್ಟಿಸಲೆತ್ನಿಸುವ ಪ್ರಯತ್ನ ಮತ್ತು ಕರೆಯನ್ನು ಜನ ಇಷ್ಟ ಪಡುವುದಿಲ್ಲ ಎಂದು ಜೋಶಿ ಪ್ರತಿಕ್ರಿಯಿಸಿದರು.
ಆನ್‌ಲೈನ್ ಅಲ್ಲಿ ಮತದಾರರ ಹೆಸರು ಅಳಿಸಲು ಸಾಧ್ಯವೇ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗಿದೆ. ಅಲ್ಲದೇ, ಪೊಲೀಸ್ ದೂರು ಕೂಡ ದಾಖಲಾಗಿದೆ. ಯಾವುದೇ ಲೋಪದೋಷ ನಡೆದಿಲ್ಲ ಎಂದು ಚುನಾವಣಾ ಆಯೋಗವೂ ಸ್ಪಷ್ಟಪಡಿಸಿದೆ. ಹಾಗಿದ್ದರೂ ವೃಥಾ ಮತಗಳ್ಳತನ ಆರೋಪದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ಸೇ ಗೆದ್ದಂತಹ ಮಾಲೂರು ಕ್ಷೇತ್ರದ ಬಗ್ಗೆ ಮಾತ್ರ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಹೊಸ ಜಿಎಸ್‌ಟಿ; ₹2-3 ಸಾವಿರ ಕೋಟಿ ವಿದ್ಯುತ್ ಖರೀದಿ ವೆಚ್ಚ ಉಳಿಕೆ- ಪ್ರಲ್ಹಾದ್ ಜೋಶಿ
ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು, ಇವಿಎಂ, ಚುನಾವಣಾ ಆಯೋಗ ಎಲ್ಲಾ ಸರಿಯಿದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಸೋತರೆ ಇವಿಎಂ, ಆಯೋಗ ಸರಿಯಿಲ್ಲ ಎನ್ನುವುದು ಯಾವ ಲಾಜಿಕ್? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುವ ವಿಫಲಯತ್ನ ನಡೆಸುತ್ತಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು.