Abhijit Mukherjee: ಟಿಎಂಸಿ ತೊರೆದು 4 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಮರಳಿದ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ
ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರ ಪುತ್ರ, ಮಾಜಿ ಸಂಸದ ಅಭಿಜಿತ್ ಮುಖರ್ಜಿ ಬುಧವಾರ (ಫೆ. 12) ತೃಣಮೂಲ ಕಾಂಗ್ರೆಸ್ ತೊರೆದು 4 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಮರಳಿದ್ದಾರೆ. 4 ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರ್ಪಡೆಗೊಂಡಿದ್ದರು.
![ಟಿಎಂಸಿ ತೊರೆದು ಕಾಂಗ್ರೆಸ್‌ಗೆ ಮರಳಿದ ಪ್ರಣಬ್ ಮುಖರ್ಜಿ ಪುತ್ರ](https://cdn-vishwavani-prod.hindverse.com/media/original_images/Abhijit_Mukherjee_1.jpg)
ಕಾಂಗ್ರೆಸ್ ಸೇರ್ಪಡೆಗೊಂಡ ಅಭಿಜಿತ್ ಮುಖರ್ಜಿ.
![Profile](https://vishwavani.news/static/img/user.png)
ಕೋಲ್ಕತಾ: ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ (Pranab Mukherjee) ಅವರ ಪುತ್ರ, ಮಾಜಿ ಸಂಸದ ಅಭಿಜಿತ್ ಮುಖರ್ಜಿ (Abhijit Mukherjee) ಬುಧವಾರ (ಫೆ. 12) ತೃಣಮೂಲ ಕಾಂಗ್ರೆಸ್ (TMC) ತೊರೆದು 4 ವರ್ಷಗಳ ಬಳಿಕ ಕಾಂಗ್ರೆಸ್‌ಗೆ (Congress) ಮರಳಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತಾದ ಕಾಂಗ್ರೆಸ್ ಕಚೇರಿಯಲ್ಲಿ ಅವರನ್ನು ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು. 4 ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರ್ಪಡೆಗೊಂಡಿದ್ದರು. ಇದೀಗ ಅವರು ಪಶ್ಚಿಮ ಬಂಗಾಳ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ಮಿರ್ ಅವರ ನೇತೃತ್ವದಲ್ಲಿ ಮರಳಿ ಗೂಡಿಗೆ ಬಂದಿದ್ದಾರೆ.
ಎಂಜಿನಿಯರ್ ಓದಿರುವ, 65 ವರ್ಷದ ಅಭಿಜಿತ್ ಮುಖರ್ಜಿ ರಾಜಕೀಯಕ್ಕೆ ಸೇರುವ ಮೊದಲು ಕಾರ್ಪೋರೇಷನ್ ವಲಯದಲ್ಲಿ ಉದ್ಯೋಗದಲ್ಲಿದ್ದರು. ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆದ ಬಳಿಕ 2012ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅಭಿಜಿತ್ ಪಶ್ಚಿಮ ಬಂಗಾಳದ ಜಂಗಿಪುರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಮತ್ತೆ ಅಲ್ಲಿಂದಲೇ ಕಣಕ್ಕಿಳಿದು ಜಯಗಳಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಟಿಎಂಸಿಯ ಖಲೀಲುರ್ ರಹಮಾನ್ ವಿರುದ್ಧ ಸೋತಿದ್ದರು.
#WATCH | Kolkata, West Bengal | On re-joining Indian National Congress, the son of late former President Pranab Mukherjee, Abhijit Mukherjee says, "... When I joined Congress, I had a government job... But I took a risk. I was told to contest elections from the Nalhati seat,… pic.twitter.com/O53zZ7vO61
— ANI (@ANI) February 12, 2025
2021ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಭರ್ಜರಿಯಾಗಿ ಜಯ ಗಳಿಸಿದ ಅಧಿಕಾರಕ್ಕೇರಿದಾಗ ಅಭಿಜಿತ್ ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ತನ್ನನ್ನು ಮೂಲೆಗುಂಪು ಮಾಡಿತು. ಪಕ್ಷದ ಪ್ರಾಥಮಿಕ ಸದಸ್ಯತ್ವ ಬಿಟ್ಟು ಬೇರೆ ಯಾವುದೇ ಸ್ಥಾನ-ಮಾನ ನೀಡಿಲ್ಲ ಎಂದು ಅವರು ಈ ವೇಳೆ ಆರೋಪಿಸಿದ್ದರು. ಸೈನಿಕನಂತೆ ಟಿಎಂಸಿಗೆ ಸೇರ್ಪಡೆಯಾಗಿದ್ದಾಗಿ ತಿಳಿಸಿದ್ದ ಅವರು ಪಕ್ಷದ ಬೆಳವಣಿಗೆಗಾಗಿ ಶ್ರಮಿಸುವುದಾಗಿ ಹೇಳಿದ್ದರು. ಆದರೆ ಮುಂದಿನ ದಿನಗಳಲ್ಲಿ ಅವರು ಟಿಎಂಸಿಯಲ್ಲಿ ಅಷ್ಟೇನೂ ಸಕ್ರಿಯರಾಗಿರಲಿಲ್ಲ.
ಮರಳಿ ಗೂಡಿಗೆ ಬಂದು ಹೇಳಿದ್ದೇನು?
ಇನ್ನು ಕಾಂಗ್ರೆಸ್‌ಗೆ ಮರಳಿದ ಅವರು ಮಾತನಾಡಿ, "ಕಾಂಗ್ರೆಸ್ ಮತ್ತು ರಾಜಕೀಯದಲ್ಲಿ ಇದು ನನ್ನ ಎರಡನೇ ಹುಟ್ಟು. ಕಳೆದ ವರ್ಷವೇ ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ ವಿವಿಧ ರಾಜ್ಯಗಳಲ್ಲಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ವಿಳಂಬವಾಯಿತು. ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದು ತಪ್ಪಾಯಿತು. ಇದಕ್ಕಾಗಿ ಕ್ಷಮೆಯಾಚಿಸುವೆ" ಎಂದರು.
ವಿವಾದ ಹುಟ್ಟು ಹಾಕಿದ್ದ ಹೇಳಿಕೆ
ಅಭಿಜಿತ್ ಮುಖರ್ಜಿ ಈ ಹಿಂದೆ ನೀಡಿದ್ದ ಹೇಳಿಕೆ ಬಹುದೊಡ್ಡ ವಿವಾದ ಹುಟ್ಟು ಹಾಕಿತ್ತು. 2012ರ ದಿಲ್ಲಿ ಸಾಮೂಹಿಕ ಅತ್ಯಾಚಾರದ ನಂತರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಮಹಿಳೆಯರನ್ನು "ಕಳಂಕಿತರು" ಎಂದು ಕರೆಯುವ ಮೂಲಕ ಅಭಿಜಿತ್ ಮುಖರ್ಜಿ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು.
ಈ ಸುದ್ದಿಯನ್ನೂ ಓದಿ: Sajjan Kumar: ಸಿಖ್ ವಿರೋಧಿ ದಂಗೆ- ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೋಷಿ ಎಂದು ಸಾಬೀತು
"ಮೇಣದಬತ್ತಿ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರು ಮತ್ತು ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ವಾಸ್ತವದೊಂದಿಗೆ ಯಾವುದೇ ಸಂಬಂಧವಿಲ್ಲ. ಈ ಸುಂದರ ಮಹಿಳೆಯರು ಕಳಂಕಿತರು ಮತ್ತು ಬಣ್ಣ ಹಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆʼʼ ಎಂದು ಅವರು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದರು. "ನನಗೆ ಕೆಲವು ಅನುಮಾನಗಳಿವೆ. ಈ ಮಹಿಳೆಯರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಗಳಲ್ಲʼʼ ಎಂದಿದ್ದರು. ವಿವಾದ ಭುಗಿಲೆದ್ದ ಬಳಿಕ ಅವರು ಕ್ಷಮೆಯಾಚಿಸಿದ್ದರು.