ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sharmistha Mukherjee: ʼʼಆಗಾಗ ಬಂದು ಹೋಗುವುದು ರಾಜಕೀಯವಲ್ಲ, ಇದು 24 ಗಂಟೆಯ ಕೆಲಸʼʼ; ರಾಹುಲ್‌ ಗಾಂಧಿ ವಿರುದ್ಧ ಪ್ರಣಬ್ ಮುಖರ್ಜಿ ಪುತ್ರಿ ಟೀಕೆ

Pranab Mukherjee's Daughter: ʼʼರಾಹುಲ್‌ ಗಾಂಧಿ ಕೆಲವೊಂದು ಅಭಿಯಾನ ಮಾಡಿ ಬಳಿಕ ಕೆಲವು ಸಮಯ ನಾಪತ್ತೆಯಾಗುತ್ತಾರೆ. ಇದರಿಂದ ನಿರಂತರವಾಗಿ ಜನರ ಮನಸ್ಸು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಭಾರತ್‌ ಜೋಡೋ ಯಾತ್ರಾದ ಮೊದಲ ವಾರ್ಷಿಕೋತ್ಸವದಂದು ಅವರು ಎಲ್ಲಿದ್ದರು? ರಾಜಕೀಯ ಎಂದರೆ ಅದು 24 ಗಂಟೆ, 365 ದಿನಗಳ ಕೆಲಸʼʼ ಎಂದು ಪ್ರಣಬ್ ಮುಖರ್ಜಿಅವರ ಪುತ್ರಿ, ಕಾಂಗ್ರೆಸ್‌ನ ಮಾಜಿ ಕಾರ್ಯಕರ್ತೆ ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

ಶರ್ಮಿಷ್ಠಾ ಮುಖರ್ಜಿ (ಸಂಗ್ರಹ ಚಿತ್ರ)

ದೆಹಲಿ, ಜೂ. 28: ಮಾಜಿ ರಾಷ್ಟ್ರಪತಿ, ಕಾಂಗ್ರೆಸ್‌ ನಾಯಕ ಪ್ರಣಬ್ ಮುಖರ್ಜಿ (Pranab Mukherjee) ಅವರ ಪುತ್ರಿ, ಕಾಂಗ್ರೆಸ್‌ನ ಮಾಜಿ ಕಾರ್ಯಕರ್ತೆ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಇದೀಗ ರಾಹುಲ್‌ ಗಾಂಧಿ (Rahul Gandhi) ನಡೆಯನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ರಾಹುಲ್‌ ಗಾಂಧಿ ಆಗಾಗ ಬಂದು ನಾಪತ್ತೆಯಾಗುತ್ತಾರೆ. ಇದು ಸರಿಯಲ್ಲ. ರಾಜಕೀಯ ಎಂದರೆ ಅದು 24 ಗಂಟೆಯ ಕೆಲಸ. ಪ್ರತಿ ದಿನವೂ, ಪ್ರತಿ ಕ್ಷಣವೂ ಕಾರ್ಯ ನಿರ್ವಹಿಸುತ್ತಿರಬೇಕು, ಕಾರ್ಯಕರ್ತರೊಂದಿಗೆ ಬೆರೆಯುತ್ತಿರಬೇಕು ಎಂದು ಹೇಳಿದ್ದಾರೆ. ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಶರ್ಮಿಷ್ಠಾ ಈ ಹೇಳಿಕೆ ನೀಡಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.

2014ರಲ್ಲಿ ಪ್ರಮುಖ ನಾಯಕರಾಗಿ ರಾಹುಲ್ ಗಾಂಧಿ ಹೊರ ಹೊಮ್ಮಿದ ಬಳಿಕ ಕಾಂಗ್ರೆಸ್‌ ಹಲವು ಚುನಾವಣೆಯಲ್ಲಿ ನಿರಂತರವಾಗಿ ಸೋಲುತ್ತಿದೆ ಎಂದು ಶರ್ಮಿಷ್ಠಾ ವಾಗ್ದಾಳಿ ನಡೆಸಿದ್ದಾರೆ.

ವಿಡಿಯೊ ಇಲ್ಲಿದೆ:



ಶರ್ಮಿಷ್ಠಾ ಹೇಳಿದ್ದೇನು?

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಿಕ್ಕ ಫಲಿತಾಂಶವನ್ನು ಉಲ್ಲೇಖಿಸಿದ ಅವರು, ʼʼಆ ಚುನಾವಣೆಯಲ್ಲಿ ಕಾಂಗ್ರೆಸ್‌ 99 ಕ್ಷೇತ್ರಗಳಲ್ಲಿ ಜಯಗಳಿಸಿತು. ರಾಹುಲ್‌ ಗಾಂಧಿ ಚುನಾವಣೆ ಆಸುಪಾಸಿನಲ್ಲಿ ಭಾರತ್‌ ಜೋಡೋ ಯಾತ್ರೆ ಕೈಗೊಂಡಿದ್ದರಿಂದ ಉತ್ತಮ ಫಲಿತಾಂಶ ಸಿಕ್ಕಿತು. ಆದರೆ ರಾಹುಲ್‌ ಗಾಂಧಿ ಕೆಲವೊಂದು ಅಭಿಯಾನ ಮಾಡಿ ಬಳಿಕ ಕೆಲವು ಸಮಯ ನಾಪತ್ತೆಯಾಗುತ್ತಾರೆ. ಇದರಿಂದ ನಿರಂತರವಾಗಿ ಜನರ ಮನಸ್ಸು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಭಾರತ್‌ ಜೋಡೋ ಯಾತ್ರಾದ ಮೊದಲ ವಾರ್ಷಿಕೋತ್ಸವದಂದು ಅವರು ಎಲ್ಲಿದ್ದರು? ರಾಜಕೀಯ ಎಂದರೆ ಅದು 24 ಗಂಟೆ, 365 ದಿನಗಳ ಕೆಲಸ. ನೀವು ಬಂದು 2 ದಿನಗಳಲ್ಲಿ ಹೊರಟು ಹೋಗುತ್ತೀರಿ. ರ‍್ಯಾಲಿ ಮಾಡಿ, ಕೆಲವು ಜನರನ್ನು ಭೇಟಿಯಾಗಿ ಯಾರ ಕೈಗೂ ಸಿಗದೆ ನಾಪತ್ತೆಯಾಗುತ್ತೀರಿ. ನನ್ನ ಪ್ರಕಾರ ರಾಜಕೀಯ ಎಂದರೆ ಇದಲ್ಲʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಮಾರಕ ನಿರ್ಮಾಣ ವಿಚಾರಕ್ಕೆ ಪ್ರಣಬ್ ಮುಖರ್ಜಿ ಪುತ್ರಿಯಿಂದ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ʼʼರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಿತ್ರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ಮಾತ್ರ ಗೆಲುವು ಧಕ್ಕುವುದಿಲ್ಲ. ಕಾಂಗ್ರೆಸ್‌ ತಳಮಟ್ಟದಿಂದ ಗಟ್ಟಿಯಾಗಬೇಕಿದೆ. ನಾನು ಕಾಂಗ್ರೆಸ್‌ ಕಾರ್ಯಕರ್ತೆಯಾಗಿದ್ದಾಗಲೂ ಮೈತ್ರಿ ಮಾಡುವತ್ತ ಮಾತ್ರ ಗಮನ ಹರಿಸಲಾಗುತ್ತಿತ್ತು. ಪಕ್ಷ ಸಂಘಟನೆಗೆ ಒತ್ತು ನೀಡುತ್ತಿರಲಿಲ್ಲ. ಪಕ್ಷದ ಬಲದಿಂದ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಯಾರೂ ಉತ್ತೇಜನ ನೀಡುತ್ತಿಲ್ಲʼʼ ಎಂದಿದ್ದಾರೆ.

ಪಕ್ಷದ ಸೋಲಿನ ಕಾರಣ ವಿವರಿಸಿದ ಶರ್ಮಿಷ್ಠಾ

ʼʼ2014ರಿಂದ ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಜನಪ್ರಿಯ ನಾಯಕ ಎನಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಆಗಿನಿಂದಲೇ ಕಾಂಗ್ರೆಸ್‌ ನಿರಂತರವಾಗಿ ಸೋಲುತ್ತ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಜನ ನಾಯಕ. ಅವರೊಬ್ಬ ಮಾಸ್‌ ಲೀಡರ್‌. ಅವರು ಪರಶ್ರಮದಿಂದಲೇ ಜನಪ್ರಿಯತೆ ಗಳಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಈ ರೀತಿಯ ಜನಾದೇಶವನ್ನು ಕಾಂಗ್ರೆಸ್‌ಗೆ ತರಲು ಸಾಧ್ಯವಾಗುತ್ತಿಲ್ಲ. ಇದು ರಾಹುಲ್ ಗಾಂಧಿ ಅವರ ವೈಫಲ್ಯ" ಎಂದು ಅವರು ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗಲಿ ಎಂದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್; ರಾಹುಲ್‌ ಗಾಂಧಿ ಹೆಸರೇಳಿ ಕಾಲೆಳೆದ ಬಿಜೆಪಿ

ಪ್ರಿಯಾಂಕಾ ಜತೆ ಹೋಲಿಕೆಗೆ ಹೇಳಿದ್ದೇನು?

ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿ ಜತೆಗಿನ ಹೋಲಿಕೆ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಿಷ್ಠಾ, ʼʼಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್‌ನಲ್ಲಿದ್ದಾಗ ಜೂನಿಯರ್‌ ಆಗಿದ್ದೆ. ಆಗ ಪ್ರಿಯಾಂಕಾ ಮತ್ತು ರಾಹುಲ್‌ ಜತೆಗಿನ ಮಾತುಕತೆ ತೀರಾ ವಿರಳವಾಗಿತ್ತು. ಹೀಗಾಗಿ ಅವರಿಬ್ಬರನ್ನು ಹೋಲಿಸಲು ನನಗೆ ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ. 2014ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದ ಶರ್ಮಿಷ್ಠಾ 2021ರಲ್ಲಿ ರಾಜಕೀಯ ತೊರೆದಿದ್ದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author