ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (MGNAREGA) ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ ವಿಕಸಿತ್ ಭಾರತ್ ಗ್ಯಾರಂಟಿ ಮಸೂದೆಯಾಗಿ (Viksit Bharat Guarantee for Rozgar and Ajeevika Mission) ಪರಿವರ್ತಿಸಲಾಗಿದ್ದು ಇದಕ್ಕೆ ರಾಷ್ಟ್ರಪತಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಅಂಕಿತ ಹಾಕಿದ್ದಾರೆ. ಈ ಮೂಲಕ ವಿಬಿ ಜಿ ರಾಮ್ ಜಿ (VB G Ram Ji) ಮಸೂದೆ ಈಗ ಕಾನೂನಾಗಿ ಪರಿವರ್ತನೆಯಾಗಿದೆ. ಈ ಮಸೂದೆಯು ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ 125 ದಿನಗಳ ವೇತನ ಖಾತ್ರಿ ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಪ್ರತಿಪಕ್ಷಗಳ ತೀವ್ರ ವಿರೋಧ, ಗದ್ದಲದ ನಡುವೆಯೂ ಕಳೆದ ಗುರುವಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ ವರ್ಷಕ್ಕೆ 125 ದಿನಗಳ ಕಾಲ ಉದ್ಯೋಗ ಖಾತರಿ ಒದಗಿಸುವ ‘ವಿಬಿ- ಜಿ ರಾಮ್ ಜಿ’ ವಿಧೇಯಕಕ್ಕೆ ಲೋಕಸಭೆಯಲ್ಲಿಅಂಗೀಕಾರ ನೀಡಲಾಗಿತ್ತು. ಬಳಿಕ ಇದನ್ನು ರಾಷ್ಟ್ರಪತಿ ಒಪ್ಪಿಗೆಗೆ ಕಳುಹಿಸಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತು ಅಂಗೀಕರಿಸಿದ ವಿಬಿ-ಜಿ ರಾಮ್ ಜಿ ಮಸೂದೆ 2025ಕ್ಕೆ ಒಪ್ಪಿಗೆಯನ್ನು ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಭಾನುವಾರ ತಿಳಿಸಿದೆ.
ಈ ಯೋಜನೆಯು ವಿಕಸಿತ್ ಭಾರತ 2047ರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಗ್ರಾಮೀಣಾಭಿವೃದ್ಧಿ ಚೌಕಟ್ಟನ್ನು ರಚಿಸುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಏನಿದು ವಿಬಿ ಜಿ ರಾಮ್ ಜಿ ಮಸೂದೆ?
ಯುಪಿಎ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಬದಲಿಸಿ ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ ವಿಕಸಿತ್ ಭಾರತ್ ಗ್ಯಾರಂಟಿ ಮಸೂದೆಯಾಗಿ ಪರಿವರ್ತಿಸಲಾಗಿದೆ. ನರೇಗಾವು ಕನಿಷ್ಠ 100 ದಿನಗಳ ಉದ್ಯೋಗವನ್ನು ಖಾತರಿ ಪಡಿಸಿದರೆ ವಿಬಿ ಜಿ ರಾಮ್ ಜಿ ಯು 100 ದಿನಗಳನ್ನು ಮೀರಿ 50 ಹೆಚ್ಚುವರಿ ದಿನಗಳ ಕೆಲಸವನ್ನು ಒದಗಿಸಲು ರಾಜ್ಯಗಳಿಗೆ ಅನುಮತಿ ನೀಡುತ್ತದೆ. ಇದರಿಂದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಎನ್ ಡಿಎ ಸರ್ಕಾರವು 125 ದಿನಗಳವರೆಗೆ ವೇತನ ಸಹಿತ ಉದ್ಯೋಗವನ್ನು ನೀಡುವ ಭರವಸೆ ನೀಡಿದೆ.
ಹೊಸ ಮಸೂದೆಯಡಿಯಲ್ಲಿ 125 ದಿನಗಳ ವೇತನ ಉದ್ಯೋಗದ ಖಾತ್ರಿಯೊಂದಿಗೆ ಸಾರ್ವಜನಿಕ ಹಣದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯೊಂದಿಗೆ ಪರಿಣಾಮಕಾರಿಯಾಗಿ ಖರ್ಚು ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ, ಅನ್ಯಧರ್ಮೀಯರಿಗೆ ಆಹ್ವಾನಕ್ಕೆ ವಿರೋಧ
95,000 ಕೋಟಿ ರೂ. ಮೀಸಲು
ಈ ಮಸೂದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ 95,000 ಕೋಟಿ ರೂ. ಮೀಸಲಿಟ್ಟಿದೆ. ಈ ಹಿಂದೆ ರಾಜ್ಯಗಳು ವಸ್ತು ವೆಚ್ಚಗಳ ಮೇಲೆ ಖರ್ಚು ಮಾಡುವುದನ್ನು ತಪ್ಪಿಸಲು ಮಾರ್ಗಗಳನ್ನು ಕಂಡುಕೊಂಡಿದ್ದವು ಮತ್ತು ಕೇಂದ್ರದ ಕೊಡುಗೆಯಿಂದ ಹೆಚ್ಚಿನ ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದವು. ಆದರೆ ಹೊಸ ಮಸೂದೆಯಲ್ಲಿ ಯಾವ ಕೆಲಸಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು ಗ್ರಾಮ ಪಂಚಾಯತ್ ಮತ್ತು ಗ್ರಾಮ ಸಭೆಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ. ಈ ಮೂಲಕ ಹಣ ಪೋಲಾಗುವುದನ್ನು ತಡೆಯಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.